ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BBK 13: ಪ್ಲ್ಯಾನಿಂಗ್, ಚಾಣಾಕ್ಷತನ ಮತ್ತು ಒಗ್ಗಟ್ಟು; ʻಬಿಗ್ ಬಾಸ್ʼ ಕನ್ನಡ 13ರಲ್ಲಿ ಲೂಟಿಕೋರರದ್ದೇ ಹವಾ!

Bigg Boss Kannada 13: ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ ಬಾಸ್‌ 13 ರಿಯಾಲಿಟಿ ಶೋನ ‘ಡೈಮಂಡ್ ಹೈಸ್ಟ್’ ಸವಾಲಿನಲ್ಲಿ ನಾಮಿನೇಟ್ ಆದ ಸ್ಪರ್ಧಿಗಳು ಅಪ್ರತಿಮ ತಂತ್ರ ರೂಪಿಸಿ ಅಬ್ಬರಿಸಿದ್ದಾರೆ. ಬಲಪ್ರಯೋಗಕ್ಕೆ ಜೋತುಬೀಳದೆ, ಕೇವಲ ಚಾಣಾಕ್ಷ ನಡೆ ಹಾಗೂ ಅದ್ಭುತ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಎದುರಾಳಿ ಸೆಕ್ಯುರಿಟಿ ಪಡೆಯನ್ನು ಯಾಮಾರಿಸಿದ್ದಾರೆ.

'ಬಿಗ್ ಬಾಸ್ ಕನ್ನಡ ಸೀಸನ್ 13' ರಿಯಾಲಿಟಿ ಶೋನಲ್ಲಿ ಈ ವಾರದ 'ಡೈಮಂಡ್ ಹೈಸ್ಟ್' ಟಾಸ್ಕ್ ಭರ್ಜರಿ ಮನರಂಜನೆ ನೀಡಿದೆ. ಕೇವಲ ಬಲಪ್ರಯೋಗಕ್ಕೆ ಸೀಮಿತವಾಗದೆ ಅದ್ಭುತ ಪ್ಲ್ಯಾನಿಂಗ್, ನಿಖರ ಸ್ಟ್ರಾಟಜಿ ಮತ್ತು ಸ್ಮಾರ್ಟ್ ಗೇಮ್‌ಪ್ಲೇ ಮೂಲಕ ಲೂಟಿಕೋರರ ತಂಡ ವೀಕ್ಷಕರ ಮನಗೆದ್ದಿದೆ. ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು ‘ದರೋಡೆಕೋರರು’ ಹಾಗೂ ನಾಮಿನೇಷನ್‌ನಿಂದ ಸೇಫ್ ಆದವರು ಸೆಕ್ಯುರಿಟಿ ತಂಡವಾಗಿ ಕಣಕ್ಕಿಳಿದಿದ್ದರು.

ಬಿಗ್ ಬಾಸ್ ಮನೆಯ ವಿವಿಧ ಕಡೆಗಳಲ್ಲಿ ಇಡಲಾಗಿದ್ದ ಡೈಮಂಡ್, ಪದಕ ಹಾಗೂ ಕಿರೀಟವನ್ನು ರಕ್ಷಕರ ಕಣ್ತಪ್ಪಿಸಿ ಕದಿಯುವುದು, ಒಂದು ವೇಳೆ ಕದಿಯುವಾಗ ಸಿಕ್ಕಿಬಿದ್ದರೆ ಅರ್ಧ ಗಂಟೆ ಜೈಲು ಶಿಕ್ಷೆ ಅನುಭವಿಸುವುದು ಈ ಟಾಸ್ಕ್‌ನ ಮುಖ್ಯ ನಿಯಮವಾಗಿತ್ತು. ಈ ಸವಾಲಿನ ನಡುವೆಯೂ ಲೂಟಿಕೋರರ ತಂಡ ಅತ್ಯಂತ ಸಮನ್ವಯತೆಯಿಂದ ಕಾರ್ಯನಿರ್ವಹಿಸಿತು.

ಮಾತಿನಲ್ಲೇ ಯಾಮಾರಿಸಿದ ತಾಂಡವ್‌

ಡೈಮಂಡ್ ಕದಿಯುವ ಪ್ಲ್ಯಾನ್‌ನಲ್ಲಿ ಲಕ್ಷ್ಮೀ, ಆಸಿಯಾ ಫಿರ್ದೋಸ್‌ ಮತ್ತು ಸೌಂದರ್ಯ ಶೆಟ್ಟಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದರೆ, ಇತ್ತ ತಾಂಡವ್ ರಾಮ್ ಸೆಕ್ಯುರಿಟಿ ತಂಡವನ್ನು ತಮ್ಮ ಮಾತುಗಳಿಂದಲೇ ಮ್ಯಾನಿಪುಲೇಟ್ ಮಾಡಿ, ಅವರೊಳಗೆ ಗೊಂದಲ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಡೈಮಂಡ್ ಕಾಣೆಯಾಗಿರುವುದು ರಕ್ಷಕರಿಗೆ ತಿಳಿದ ಮೇಲೂ, ಅವರ ಗಮನ ಬೇರೆಡೆ ಸೆಳೆದು ಎದುರಾಳಿ ಪಾಳೆಯದಲ್ಲೇ ಒಡಕು ಮೂಡುವಂತೆ ಮಾಡಿದ ರೀತಿ ಲೂಟಿಕೋರರ ಆಟದ ತಂತ್ರಕ್ಕೆ ಹಿಡಿದ ಕನ್ನಡಿಯಾಗಿತ್ತು.

BBK 13: ಪದವಿ ಓದಲಿಲ್ಲ, ಬರವಣಿಗೆ ಮೇಲಿನ ಪ್ರೀತಿ ಕಮ್ಮಿ ಆಗಲಿಲ್ಲ; ಹೂ ಕಟ್ಟಿ ಸಾಕಿದ ಅಮ್ಮನ ಬಗ್ಗೆ ʻಮಹಾಕವಿ ಮಂಜʼ ಹೇಳಿದ್ದೇನು?

ಲೂಟಿಕೋರರ ತಂಡಕ್ಕೆ ವ್ಯಾಪಕ ಮೆಚ್ಚುಗೆ

ಇನ್ನು, ಇಡೀ ಎಪಿಸೋಡ್‌ನ ಪ್ರಮುಖ ಹೈಲೈಟ್ ಎಂದರೆ ಸೌಂದರ್ಯ ಅವರ ಪ್ರೆಸೆನ್ಸ್ ಆಫ್ ಮೈಂಡ್. ಕದ್ದ ಡೈಮಂಡ್ ಅನ್ನು ಯಾರಿಗೂ ಅನುಮಾನ ಬಾರದಂತೆ ಕ್ರೀಮ್ ಬಾಕ್ಸ್‌ನಲ್ಲಿ ಅಡಗಿಸಿಟ್ಟ ಅವರ ಜಾಣ್ಮೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರ ಜೊತೆಗೆ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಕೆಲವೇ ಸೆಕೆಂಡ್‌ಗಳಲ್ಲಿ ಕ್ರೌನ್ ಅನ್ನು ಬದಲಾಯಿಸಿದ ಕ್ಷಣ, ಇಡೀ ತಂಡದ ವೇಗ ಮತ್ತು ಪರಸ್ಪರ ಹೊಂದಾಣಿಕೆಯನ್ನು ಸಾಬೀತುಪಡಿಸಿತು. ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಅಥವಾ ಈಗೋಗಳಿಗೆ ಆಸ್ಪದ ನೀಡದೆ, ಒಗ್ಗಟ್ಟಿನಿಂದ ಜವಾಬ್ದಾರಿ ಹಂಚಿಕೊಂಡು ಆಡಿದ ಲೂಟಿಕೋರರ ಆಟ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಕಿಚ್ಚನ ಪಂಚಾಯಿತಿಗೆ ವೆಯ್ಡಿಂಗ್‌

ಒಟ್ಟಾರೆಯಾಗಿ, ಈ ವಾರ ಸೌಂದರ್ಯ, ತಾಂಡವ್ ಹಾಗೂ ಆಸಿಯಾ ತಮ್ಮ ಚಾಣಾಕ್ಷ ನಡೆಗಳಿಂದ ಮಿಂಚಿದರೆ, ಲಕ್ಷ್ಮೀ ಕೂಡ ತಂಡಕ್ಕೆ ಬಲವಾದ ಸಾಥ್ ನೀಡಿ ಗಮನ ಸೆಳೆದಿದ್ದಾರೆ. ಲೂಟಿಕೋರರ ಈ ಅದ್ಭುತ ಆಟ ನೋಡಿದ ವೀಕ್ಷಕರು, ಈ ವಾರದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಅವರಿಂದ ಕ್ಲಾಸ್ ಬದಲು ಪ್ರಶಂಸೆಯ ಮಳೆಯೇ ಸುರಿಯಲಿದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ವಿಶೇಷವಾಗಿ ತಾಂಡವ್ ರಾಮ್ ಅಥವಾ ಸೌಂದರ್ಯ ಶೆಟ್ಟಿ ಪೈಕಿ ಒಬ್ಬರಿಗೆ 'ಕಿಚ್ಚನ ಚಪ್ಪಾಳೆ' ಗ್ಯಾರಂಟಿ ಎನ್ನಲಾಗುತ್ತಿದ್ದು, ವೀಕೆಂಡ್ ಪಂಚಾಯಿತಿಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.