ಬಿಗ್ ಬಾಸ್ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳು ಈ ವಾರ ನೀಡಿದ ಹೇಳಿಕೆಗಳ ಕುರಿತು ಪ್ರಶ್ನಿಸಿದ್ದು, ಮನೆಯಲ್ಲಿ ಮತ್ತೊಂದು ಸುತ್ತಿನ ಮಾತಿನ ಚಕಮಕಿಗೆ ಕಾರಣವಾಗಿದೆ. ಪಂಚಾಯಿತಿಯ ನಡುವೆ "ಯಶಸ್ ಅವರ ಸಾಧನೆ ಅಂದರೆ, ಈ ಮನೆಯಲ್ಲಿ ಸೌಂದರ್ಯಗೆ ಬಾಡಿಗಾರ್ಡ್ ಆಗಿರೋದು.." ಎಂಬ ಸ್ಟೇಟ್ಮೆಂಟ್ ಚರ್ಚೆಗೆ ಬಂದಿದೆ. ಈ ಮಾತಿಗೆ ಸ್ಪರ್ಧಿ ಮಂಜ ತಕ್ಷಣವೇ "ಹೌದೌದು" ಎಂದು ದನಿಗೂಡಿಸಿದ್ದು ಯಶಸ್ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಸುದೀಪ್ ಎದುರಲ್ಲೇ ತಿರುಗೇಟು!
ಮಂಜ ಅಷ್ಟಕ್ಕೇ ಸುಮ್ಮನಾಗದೆ ಯಶಸ್ ಕುರಿತು ವ್ಯಂಗ್ಯವಾಡುತ್ತಾ, “ಯಶಸ್ ಮೊದಲು ಆಸಿಯಾಗೆ ಬಾಡಿಗಾರ್ಡ್ ಆಗಿದ್ದರು. ಆಮೇಲೆ ಪಾರ್ಟ್ಟೈಮ್ ಶಿಫ್ಟ್ ಮಾಡ್ತಾ ಇದ್ದರು, ಹೀಗೆ ಎರಡೆರಡು ಶಿಫ್ಟ್ ಮಾಡುತ್ತಿದ್ದ ಕಾರಣ, ನನಗೆ ಇದ್ದರೆ ಒಬ್ಬರಿಗೇ ಬಾಡಿಗಾರ್ಡ್ ಇರಬೇಕು ಎಂದು ಆಸಿಯಾ ಯೋಚಿಸಿ ಇವರನ್ನು ಕೆಲಸದಿಂದ ತೆಗೆದುಹಾಕಿದರು. ಇದೀಗ ಸೌಂದರ್ಯಗೆ ಬಾಡಿಗಾರ್ಡ್ ಆಗಿದ್ದಾರೆ..” ಎಂದು ಕಾಮಿಡಿ ಮಾಡಿದರು. ಮಂಜನ ಈ ವ್ಯಂಗ್ಯದ ಮಾತುಗಳು ಯಶಸ್ಗೆ ತೀವ್ರ ಕಿರಿಕಿರಿ ಉಂಟುಮಾಡಿದ್ದು, ಸುದೀಪ್ ಎದುರೇ ಮಂಜನಿಗೆ ಖಡಕ್ ತಿರುಗೇಟು ನೀಡಿದರು.
ಮಂಜನ ಬಾಯಲ್ಲಿ ಕೀಳುಮಟ್ಟದ ಮಾತುಗಳೇ!
ಮಂಜನ ಮಾತುಗಳಿಗೆ ಕೆಂಡಾಮಂಡಲವಾದ ಯಶಸ್, "ಮಂಜ ಮನೆಯಲ್ಲಿ ಇರೋದು ಕೇವಲ ಒಬ್ಬ ಸ್ಪರ್ಧಿ (ಗಾನವಿ) ಜೊತೆ ಮಾತ್ರ. ಅವರು ಯಾವಾಗ ಯಾರಿಗೆ ಗೂಟ ಇಡ್ತಾರೆ ಅನ್ನೋದು ಅವರಿಗೂ ಗೊತ್ತಿರಲ್ಲ. ಮನೆಯಲ್ಲಿ ಯಾವುದೇ ರೀತಿಯ ಜಗಳ ನಡೆಯಲಿ, ಮಂಜ ಮಾಡೋದೇ ಪರ್ಸನಲ್ ಅಟ್ಯಾಕ್. ಮೊನ್ನೆ ಜಗಳ ಆದಾಗಲೂ ಗಂಡಸೋ, ಹೆಂಗಸೋ ಅನ್ನೋ ಕೀಳುಮಟ್ಟದ ಮಾತುಗಳೇ ಇವರಿಂದ ಬಂತು. ಯಾವ ಮನುಷ್ಯ ಒಳಗೊಳಗೇ ಇನ್ಸೆಕ್ಯೂರ್ ಆಗಿರುತ್ತಾನೋ, ಬಹುಶಃ ಅಂಥವನಿಗೆ ಮಾತ್ರ ಬೇರೆಯವರ ಗಂಡಸ್ತನದ ಮೇಲೆ ಅನುಮಾನ ಬರೋದು.." ಎಂದು ನೇರವಾಗಿಯೇ ಟಾಂಗ್ ಕೊಟ್ಟರು.
ಮಂಜನಿಗೆ ಸರಿಯಾಗಿಯೇ ತಿರುಗೇಟು
ಕಳೆದ ವಾರ ಅಡುಗೆ ಮನೆಯ ವಿಚಾರವಾಗಿ ಗಾನವಿ ಗೌಡ ಮತ್ತು ಜಗ್ಗ ಮಮ್ಮಿ ನಡುವೆ ಸಣ್ಣದೊಂದು ವಾಗ್ವಾದ ಶುರುವಾಗಿತ್ತು. ಈ ಸಂದರ್ಭದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿದ್ದ ಮಂಜ, ಜಗದೀಶ್ ಅವರಿಗೆ “ಮೊದಲು ಗಂಡಸಾಗಿ ಬಾ..” ಎಂದು ಆವಾಜ್ ಹಾಕಿದ್ದರು. ಮಂಜನ ಈ ನಡವಳಿಕೆ ಮತ್ತು ಬಳಸಿದ ಪದಗಳ ಬಗ್ಗೆ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈಗಾಗಲೇ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಯಶಸ್ ಕೂಡ ಅದೇ ವಿಚಾರವನ್ನು ಮುಂದಿಟ್ಟು ಮಂಜನಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.