ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬಿಗ್ ಬಾಸ್ʼ ಮನೆಗೆ ಎಂಟ್ರಿ ಕೊಟ್ಟ ನಟ ತಾಂಡವ್ ರಾಮ್: ʻಆಕ್ಷನ್‌ಗೆ ರಿಯಾಕ್ಷನ್ ಗ್ಯಾರಂಟಿʼ ಎಂದ ʻಜೋಡಿ ಹಕ್ಕಿʼ ಹೀರೋ!

ʻಬಿಗ್ ಬಾಸ್ʼ ಮನೆಗೆ ನಟ ತಾಂಡವ್‌ ರಾಮ್‌ ಅವರು ಎಂಟ್ರಿ ಕೊಟ್ಟಿದ್ದಾರೆ. ಹಾಸನದಿಂದ ಬಂದು ಕಿರುತೆರೆ, ಹಿರಿತೆರೆ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಇವರು, ವೈಯಕ್ತಿಕ ಬದುಕಿನ ಕಷ್ಟಗಳು ಮತ್ತು ಜೈಲುವಾಸದ ವಿವಾದಗಳನ್ನು ಎದುರಿಸಿ ಬಂದಿದ್ದಾರೆ.

ʻಕಿಚ್ಚʼ ಸುದೀಪ್ ಸಾರಥ್ಯದ ‘ಬಿಗ್ ಬಾಸ್’ ರಿಯಾಲಿಟಿ ಶೋಗೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಉದಯೋನ್ಮುಖ ನಟ ತಾಂಡವೇಶ್ವರ ಅಲಿಯಾಸ್ ತಾಂಡವ್ ರಾಮ್ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಹಾಸನ ಮೂಲದ ಈ ನಟ ಬಣ್ಣದ ಲೋಕದ ಕನಸು ಹೊತ್ತು ರಾಜಧಾನಿಗೆ ಬಂದವರು.

ಆಕ್ಷನ್‌ಗೆ ನನ್ನ ಕಡೆಯಿಂದ ಪಕ್ಕಾ ರಿಯಾಕ್ಷನ್!

ವೇದಿಕೆ ಮೇಲೆ ತಮ್ಮ ಬದುಕಿನ ಹಾದಿಯನ್ನು ಮೆಲುಕು ಹಾಕಿದ ತಾಂಡವ್, "ಪಿಯುಸಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ರಂಗಭೂಮಿಗೆ ಕಾಲಿಟ್ಟ ವಿಚಾರವನ್ನು ಮನೆಯವರಿಗೆ ತಿಳಿಸಿರಲಿಲ್ಲ, ಟಿವಿಯಲ್ಲಿ ನನ್ನನ್ನು ನೋಡಿಯೇ ಕುಟುಂಬದವರು ಆಶ್ಚರ್ಯಪಟ್ಟಿದ್ದರು. ಬದುಕಿನಲ್ಲಿ ಏನಾದರೂ ಸಾಧಿಸಿದ ನಂತರವೇ ಮದುವೆಯಾಗುತ್ತೇನೆ" ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ಬಿಗ್ ಬಾಸ್ ಆಟದ ಬಗ್ಗೆ ಮಾತನಾಡುತ್ತಾ, ಮನೆಯೊಳಗೆ ಯಾರಾದರೂ ಆಕ್ಷನ್ ಮಾಡಿದರೆ ನನ್ನ ಕಡೆಯಿಂದ ಪಕ್ಕಾ ರಿಯಾಕ್ಷನ್ ಇರುತ್ತದೆ ಎಂದು ನೇರ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಧಾರಾವಾಹಿ ನಿರ್ಮಾಣ ಮಾಡಿದ್ದಾರೆ ತಾಂಡವ್

ಜೀ ಕನ್ನಡದ ಜನಪ್ರಿಯ ‘ಜೋಡಿ ಹಕ್ಕಿ’ ಧಾರಾವಾಹಿಯಲ್ಲಿ ಮುಗ್ಧ ಹಳ್ಳಿ ಪೈಲ್ವಾನ್ ರಾಮು ಪಾತ್ರದ ಮೂಲಕ ಮನೆಮಾತಾಗಿದ್ದ ತಾಂಡವ್, ಆ ಧಾರಾವಾಹಿಯ ಚಿತ್ರೀಕರಣದ ವೇಳೆಯೇ ಕುಸ್ತಿ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದರು. ಬಾಡಿ ಬಿಲ್ಡಿಂಗ್‌ನಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಹಲವು ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.

ಗಿರೀಶ್ ಜಿ ನಿರ್ದೇಶನದ ‘ಒಂದ್ ಕಥೆ ಹೇಳ್ಲಾ’ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ತಾಂಡವ್, ಕೆ.ಎಂ. ಚೈತನ್ಯ ಅವರ ‘ಅಬ್ಬಬ್ಬಾ’ ಚಿತ್ರದಲ್ಲೂ ಗಮನಾರ್ಹ ಪಾತ್ರ ನಿರ್ವಹಿಸಿದ್ದರು. ಜತೆಗೆ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯ ಮೂಲಕ ನಟನೆಯ ಜತೆಗೆ ನಿರ್ಮಾಪಕರಾಗಿಯೂ ಬಡ್ತಿ ಪಡೆದು ಹಲವು ಕಿರುಚಿತ್ರ, ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ವಿವಾದಕ್ಕೆ ಒಳಗಾಗಿದ್ದ ನಟ

2024ರಲ್ಲಿ ಸಿನಿಮಾವೊಂದರ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಲು ಯತ್ನಿಸಿದ ಆರೋಪದ ಮೇಲೆ ತಾಂಡವ್ ರಾಮ್ ಅವರನ್ನು ಪೊಲೀಸರು ಕೊಲೆ ಯತ್ನ ಪ್ರಕರಣದಡಿ ಬಂಧಿಸಿದ್ದರು. ಈ ವಿವಾದ ಭಾರೀ ಸದ್ದು ಮಾಡಿತ್ತು. ಜೈಲಿನಿಂದ ಹೊರಬಂದ ಬಳಿಕ ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಭಾಗವಹಿಸಿ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದ ತಾಂಡವ್, ಇದೀಗ ವಿವಾದಗಳ ಹಣೆಪಟ್ಟಿಯನ್ನು ಕಳಚಿ ಹಾಕಿ ತಮ್ಮ ವ್ಯಕ್ತಿತ್ವವನ್ನು ಅನಾವರಣಗೊಳಿಸಲು ಬಿಗ್ ಬಾಸ್ ಕಣಕ್ಕಿಳಿದಿದ್ದಾರೆ.

ಪೈಲ್ವಾನ್ ಲುಕ್ ಮತ್ತು ಆಕ್ರಮಣಕಾರಿ ಆಟದ ಭರವಸೆಯೊಂದಿಗೆ ಎಂಟ್ರಿ ಕೊಟ್ಟಿರುವ ಇವರ ನಡೆ ಮನೆಯೊಳಗೆ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.