ಜೋಗಿ ಪ್ರೇಮ್ ನಿರ್ದೇಶನದ ʻಕೆಡಿʼ ಸಿನಿಮಾವು ಇದೇ ಏಪ್ರಿಲ್ 30ರಂದು ತೆರೆಗೆ ಬರುತ್ತಿದೆ. ಧ್ರುವ ಸರ್ಜಾ ನಾಯಕತ್ವದ ಈ ಸಿನಿಮಾದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ. ಈ ಮಧ್ಯೆ ನಟ ಕಿಚ್ಚ ಸುದೀಪ್ ಅವರು ಕೂಡ ಈ ಚಿತ್ರದಲ್ಲಿ ಒಂದು ಅತಿಥಿ ಪಾತ್ರವನ್ನು ಮಾಡಿದ್ದಾರೆ. ಈ ಸಂಬಂಧ ಮಾಧ್ಯಮಗಳ ಎದುರು ಆಗಮಿಸಿದ ಕಿಚ್ಚ ಸುದೀಪ್ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. "ಇದು ಮಲ್ಟಿಸ್ಟಾರರ್ ಸಿನಿಮಾ ಅಲ್ಲ, ಇದರಲ್ಲಿ ಧ್ರುವ ಸರ್ಜಾ ಅವರೇ ಹೀರೋ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ನಾನು 3-4 ದಿನ ಕೆಲಸ ಮಾಡಿದ್ದೇನೆ
"ಈ ಸಿನಿಮಾವನ್ನು ಯಾವುದೇ ಲೆಕ್ಕಾಚಾರ ಹಾಕಿಕೊಂಡು ನಾನು ಮಾಡಲಿಲ್ಲ. ಲೆಕ್ಕಾಚಾರ ಎಲ್ಲಿಂದ ಶುರುವಾಗುತ್ತೆ ಎಂದರೆ, ಕಾಲ್‌ಶೀಟ್ ಎಷ್ಟು ದಿನ ಬೇಕು ಎಂಬುದರಿಂದ ಶುರುವಾಗುತ್ತದೆ. ನಿಮ್ಮದೊಂದು 50 ದಿನ ಕಾಲ್‌ಶೀಟ್ ಬೇಕು ಎಂದಾಗ ಲೆಕ್ಕಾಚಾರ ಶುರುವಾಗುತ್ತದೆ. ಅಗ ಧ್ರುವಗೆ ನಾನು ಕಾಲ್ ಮಾಡಿ, ನಿಮ್ಮ ಕಥೆ ಏನಪ್ಪ ಅಂತ ಕೇಳಬೇಕಾಗುತ್ತದೆ. ಆದರೆ ಇಲ್ಲಿ ಆ ಥರ ಏನೂ ಲೆಕ್ಕಾಚಾರ. ನಾನು 3-4 ದಿನ ಕೆಲಸ ಮಾಡಿದ್ದೇನೆ. ಇದು ಮಲ್ಟಿಸ್ಟಾರರ್ ಸಿನಿಮಾ ಅಲ್ಲ. ಹೋದೆ ಶೂಟ್ ಮಾಡಿದೆ, ಬಂದೆ ಅಷ್ಟೇ" ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಈ ಸಿನಿಮಾಗೆ ಧ್ರುವ ಹೀರೋ
"ಸ್ಟಾರ್ ವಾರ್ ಬರೋದೇ ಇಲ್ಲ. ಧ್ರುವ ಸರ್ಜಾ ಈ ಸಿನಿಮಾದಲ್ಲಿ 130 ಕೆಲಸ ಮಾಡಿದ್ದಾರೆ, ನಾನು 3 ದಿನ ಕೆಲಸ ಮಾಡಿದ್ದೇನೆ ಎಂದು ಫ್ಯಾನ್ಸ್‌ಗೆ ಮೊದಲೇ ಹೇಳಿಬಿಟ್ಟೆ. ಆ ಮೂರು ದಿನದಲ್ಲಿ ಅವರು ಏನು ನಿರೀಕ್ಷೆ ಮಾಡುತ್ತಾರೆ? ಹಾಗಾಗಿ, ಇಲ್ಲಿ ಸ್ಟಾರ್ ವಾರ್ ಬರೋದೆ ಇಲ್ಲ. ಈ ಸಿನಿಮಾಗೆ ಅವರೇ ಹೀರೋ, ಅಲ್ಲಿಗೆ ಮುಗೀತು.. ನಾನು ಪ್ರೇಮ್‌ಗೆ ಜಾಸ್ತಿ ಪ್ರಶ್ನೆ ಮಾಡಿಲ್ಲ. ನನ್ನದು ಮೂರು ದಿನಗಳ ಪಾತ್ರ. ಅದಕ್ಕೆ ಎಷ್ಟು ಬೇಕು ಅಷ್ಟೇ ಮಾಡಿದ್ದೇನೆ" ಎಂದು ಸುದೀಪ್ ಅವರು ಹೇಳಿದ್ದಾರೆ.
ಕೆಡಿ ಸಿನಿಮಾ ಪ್ರೆಸ್ ಮೀಟ್ ಲೈವ್
ಧ್ರುವ ಸರ್ಜಾ ಅವರಂತಹ ಹೀರೋಗಳು ಬೇಕು
"ಚಿತ್ರರಂಗದಲ್ಲಿ ಧ್ರುವ ಸರ್ಜಾ ದೊಡ್ಡ ಸ್ಟಾರ್ ಆಗಿದ್ದಾರೆ, ಉತ್ತಮ ನಟ. ಇಷ್ಟೊಂದು ದೊಡ್ಡ ಬಜೆಟ್‌ನಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆರನೇ ಸಿನಿಮಾಗೆ ಈ ಮಟ್ಟದ ಬಜೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಹೀರೋಗಳು ನಮ್ಮ ಕನ್ನಡ ಚಿತ್ರರಂಗಕ್ಕೆ ಬೇಕು. ಅವರಿಗೆ ದುಡ್ಡು ಹಾಕುವಂತಹ ನಿರ್ಮಾಪಕರು ಬೇಕು. ನಾನು ಧ್ರುವ ಮತ್ತು ಚಿರು ಚಿಕ್ಕವರಾಗಿದ್ದಾಗಿನಿಂದಲೂ ನೋಡಿಕೊಂಡು ಬಂದಿದ್ದೇನೆ. ನಾನು ಮತ್ತು ಧ್ರುವ ಆಗಾಗ ಮಾತನಾಡುತ್ತಿರುತ್ತೇವೆ. ಅವರು ನಮ್ಮ ಸಮಯಕ್ಕೆ ಬೆಲೆ ನೀಡುತ್ತಾರೆ, ನಾವು ಅವರ ಸಮಯಕ್ಕೆ ಬೆಲೆ ನೀಡುತ್ತೇವೆ. ನಾನು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವುದಕ್ಕೆ ಪ್ರೇಮ್ ಮತ್ತು ಧ್ರುವ ಅವರಿಗೋಸ್ಕರ ಮಾಡಿದ್ದೇನೆ" ಎಂದು ಸುದೀಪ್ ಅವರು ಹೇಳಿದ್ದಾರೆ.