ಕನ್ನಡ ಚಿತ್ರರಂಗದ ಬಾದ್‌ಶಾ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಒಡೆತನದ 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್' ಈಗ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಇತ್ತೀಚೆಗಷ್ಟೇ ತನ್ನ ಚೊಚ್ಚಲ ಚಿತ್ರ ಮ್ಯಾಂಗೋ ಪಚ್ಚವನ್ನು ರಿಲೀಸ್ ಮಾಡಿದ್ದ ಈ ಬ್ಯಾನರ್, ಇದೀಗ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಲು ಹಂಬಲಿಸುತ್ತಿರುವ ಹೊಸಬರ ವಿಶಿಷ್ಟ ಆಲೋಚನೆ ಹಾಗೂ ಸೃಜನಶೀಲತೆಗೆ ಮುಕ್ತ ಅವಕಾಶ ನೀಡಲು ಮುಂದಾಗಿದೆ. ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಪ್ರಕಟಣೆ ಹೊರಡಿಸಿರುವ ಸಂಸ್ಥೆಯು, ಚಿತ್ರಕಥೆಗಾರರು ಮತ್ತು ಹೊಸ ಆಲೋಚನೆಯುಳ್ಳ ಸೃಜನಶೀಲ ಮನಸ್ಸುಗಳಿಂದ ಕಥೆಗಳನ್ನು ಆಹ್ವಾನಿಸಿದೆ.
ʻನಮಗೆ ಕೇವಲ ಕಥೆಗಳಲ್ಲ, ಹೊಸ ಇತಿಹಾಸ ಬರೆಯುವ ಕಲ್ಪನೆಗಳು ಬೇಕುʼ
ಕಥೆಗಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ, "ಕಥೆಗಾರರೇ... ನಿಮ್ಮ ಕಥೆಗೆ ಇದು ವೇದಿಕೆ.. ಮೌಲಿಕ ಕಥಾಸಂಕಲನಗಳು, ಹೊಸ ಚಿಂತನೆಗಳು ಮತ್ತು ಪ್ರಬಲ ಧ್ವನಿಗಳು.. ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ... ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು. ನಿಮ್ಮ ಬಳಿ ಮೌಲಿಕ ಕಥೆ, ಚಿತ್ರಕಥೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ" ಎಂದು ಮುಕ್ತ ಆಹ್ವಾನ ನೀಡಿದೆ.
Priya Sudeep: ನಟ ಸುದೀಪ್ ಬರ್ತ್‌ಡೇಗೆ ಮಹತ್ತರ ಕಾರ್ಯ ಮಾಡಿದ ಪತ್ನಿ ಪ್ರಿಯಾ; ಅಂಗ-ಅಂಗಾಂಶ ದಾನ
ಎಲ್ಲಾ ಜಾನರ್ ಹಾಗೂ ಎಲ್ಲಾ ಮಾದರಿಯ ವಿಶಿಷ್ಟ ದೃಷ್ಟಿಕೋನ ಹೊಂದಿರುವ ಲೇಖಕರು ತಮ್ಮ ಕಥೆಗಳನ್ನು ಸಲ್ಲಿಸಬಹುದಾಗಿದ್ದು, "ನಿಮ್ಮ ಕಥೆಯೇ ಮುಂದಿನ ದೊಡ್ಡ ಸಿನಿಮೀಯ ಪ್ರಯಾಣದ ಆರಂಭವಾಗಬಹುದು" ಎಂದು ಸಂಸ್ಥೆ ಭರವಸೆ ನೀಡಿದೆ.
ಭದ್ರಕಾಳಿ ಮಾತೆಯ ಆಶೀರ್ವಾದದೊಂದಿಗೆ ಲೋಗೋ ಅನಾವರಣ
ಕೆಲ ದಿನಗಳ ಹಿಂದಷ್ಟೇ ಪ್ರಿಯಾ ಸುದೀಪ್ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ 'ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್'ನ ಅಧಿಕೃತ ಮೋಷನ್ ಪೋಸ್ಟರ್ ಹಾಗೂ ಲೋಗೋವನ್ನು ಅನಾವರಣಗೊಳಿಸಲಾಗಿತ್ತು. ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದ ಪ್ರಿಯಾ ಸುದೀಪ್, "ಭದ್ರಕಾಳಿ ಮಾತೆಯ ಪವಿತ್ರ ಆಶೀರ್ವಾದ ಮತ್ತು ನಮ್ಮ ಅಮೂಲ್ಯ ಪ್ರೇಕ್ಷಕರ ಆತ್ಮೀಯ ಪ್ರೋತ್ಸಾಹವನ್ನು ಕೋರುತ್ತಾ ಸಂಸ್ಥೆಯ ಲೋಗೋ ಅನಾವರಣಗೊಳಿಸಿದ್ದೇವೆ. ನಮ್ಮ ಕಥೆಗಳು ನಿಮ್ಮ ಕಲ್ಪನೆಯನ್ನು ಬೆಳಗಿಸಲಿ ಮತ್ತು ನಿಮ್ಮ ಹೃದಯದಲ್ಲಿ ಉಳಿಯಲಿ" ಎಂದು ಆಶಿಸಿದ್ದರು.
ʻಬಿಲ್ಲ ರಂಗ ಬಾಷಾʼ ಶೂಟಿಂಗ್ ಆರಂಭ; ಹೇಳಿದ ದಿನದಂದೇ ಅಖಾಡಕ್ಕಿಳಿದ ಕಿಚ್ಚ ಸುದೀಪ್, ವದಂತಿಗಳಿಗೆ ಬ್ರೇಕ್!
'ಮ್ಯಾಂಗೋ ಪಚ್ಚ' ಚಿತ್ರದ ಬಳಿಕ ಮುಂದಿನ ಹೆಜ್ಜೆ
ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿದ್ದ 'ಮ್ಯಾಂಗೋ ಪಚ್ಚ' ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೈಸೂರಿನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ಈ ಕ್ರೈಂ ಥ್ರಿಲ್ಲರ್ ಚಿತ್ರದ ಮೂಲಕ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕ ನಟನಾಗಿ ಹಾಗೂ ನಿರ್ದೇಶಕ ವಿವೇಕ್ ಕನ್ನಡ ಚಿತ್ರರಂಗಕ್ಕೆ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದರು. ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದರು.
ಪ್ರಿಯಾ ಸುದೀಪ್ ಅವರ ಪೋಸ್ಟ್
ಮೊದಲ ಸಿನಿಮಾದಲ್ಲೇ ಯುವ ಪ್ರತಿಭೆಗಳಿಗೆ ಮಣೆ ಹಾಕಿದ್ದ ಪ್ರಿಯಾ ಸುದೀಪ್, ಈಗ ಅಧಿಕೃತವಾಗಿ ಮತ್ತಷ್ಟು ಹೊಸ ನಿರ್ದೇಶಕರು ಹಾಗೂ ಚಿತ್ರಕಥೆಗಾರರಿಗೆ ವೇದಿಕೆ ಒದಗಿಸುತ್ತಿದ್ದಾರೆ.