ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೋಮಲ್‌ - ಮೇಘನಾ ರಾಜ್‌ ನಟನೆಯ ‘ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌’ ಮೋಷನ್ ಪೋಸ್ಟರ್ ರಿಲೀಸ್: ಒಂದೇ ಚಿತ್ರಕ್ಕೆ ಎರಡು ಟೈಟಲ್ ಏಕೆ?

Sangeetha Bar and Restaurant Movie: ಕೋಮಲ್‌ - ಮೇಘನಾ ರಾಜ್‌ ನಟನೆಯ ‘ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌’ ಚಿತ್ರದ ಪೋಸ್ಟರ್ ‘30 ಎಂ.ಎಲ್’ ಹೆಸರಿನಲ್ಲಿ ಬಿಡುಗಡೆಯಾಗಿದೆ. ಕೋಮಲ್ ದ್ವಿಪಾತ್ರದಲ್ಲಿ ಹಾಗೂ ಮೇಘನಾ ರಾಜ್ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ.

ನಟ ಕೋಮಲ್‌ ಕುಮಾರ್‌, ಮೇಘನಾ ರಾಜ್‌ ಸರ್ಜಾ ಹಾಗೂ ಅನುಷಾ ರೈ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌’ ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಕ್ತಾಯಗೊಂಡಿದ್ದು, ಪ್ರಚಾರ ಕಾರ್ಯಗಳಿಗೆ ಚಿತ್ರತಂಡ ಅಧಿಕೃತ ಚಾಲನೆ ನೀಡಿದೆ. ಚಿತ್ರದ ಮೊದಲ ಹಂತದ ಪ್ರಚಾರದ ಅಂಗವಾಗಿ '30 ಎಂ. ಎಲ್' (30 ML) ಹೆಸರಿನಲ್ಲಿ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಈ ಪೋಸ್ಟರ್‌ನಲ್ಲಿ ನಾಯಕ ಕೋಮಲ್ ಆಸ್ಥಾನದ ವರ್ಣಚಿತ್ರ ಕಲಾವಿದನಾಗಿ ಮತ್ತು ರಾಣಿಯಾಗಿ ಮೇಘನಾ ರಾಜ್ ಗಮನ ಸೆಳೆದಿದ್ದು, ಹಿಂದೂ-ಮುಸ್ಲಿಂ ಧಾರ್ಮಿಕ ಸಾಮರಸ್ಯದ ಎಳೆಯೂ ಮೋಷನ್ ಪೋಸ್ಟರ್‌ನಲ್ಲಿ ಎದ್ದು ಕಾಣುವ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

75 ದಿನಗಳ ಕಾಲ ಚಿತ್ರೀಕರಣ

ವಿಕಾಸ್‌ ಶೆಟ್ಟಿ ಬಂಡವಾಳ ಹೂಡಿರುವ ಈ ಬಿಗ್ ಬಜೆಟ್ ಸಿನಿಮಾಗೆ ಸಂದೇಶ್‌ ಶೆಟ್ಟಿ ಆಜ್ರಿ ಆಕ್ಷನ್-ಕಟ್ ಹೇಳಿದ್ದಾರೆ. ಎರಡು ವಿಭಿನ್ನ ಕಾಲಘಟ್ಟಗಳ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ-ಮಲೆನಾಡು ಭಾಗಗಳಲ್ಲಿ ಎರಡು ಹಂತಗಳಲ್ಲಿ ಬರೋಬ್ಬರಿ 75 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ, ಕಥೆಯ ಅದ್ದೂರಿತನಕ್ಕಾಗಿ ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದ ಜಾಗದಲ್ಲಿ ಏಳು ವಿಭಿನ್ನ ವಿನ್ಯಾಸದ ಬೃಹತ್ ಸೆಟ್‌ಗಳನ್ನು ನಿರ್ಮಿಸಲಾಗಿತ್ತು. ಚಿತ್ರದ ಶೇಕಡಾ 90ರಷ್ಟು ಭಾಗದ ಚಿತ್ರೀಕರಣವನ್ನು ಈ ಭರ್ಜರಿ ಸೆಟ್‌ಗಳಲ್ಲೇ ನಡೆಸಿರುವುದು ಚಿತ್ರತಂಡದ ಹೆಗ್ಗಳಿಕೆ.

ಈ ಚಿತ್ರಕ್ಕೆ ಎರಡು ಟೈಟಲ್!

ಚಿತ್ರದ ಶೀರ್ಷಿಕೆಯ ಕುರಿತು ಅಚ್ಚರಿಯ ವಿವರಣೆ ನೀಡಿರುವ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ, ಈ ಒಂದೇ ಸಿನಿಮಾಗೆ ಎರಡು ಟೈಟಲ್‌ಗಳಿವೆ ಎಂದಿದ್ದಾರೆ. ಚಿತ್ರದ ಮೊದಲಾರ್ಧ ಬಾರ್‌ನಲ್ಲಿ ಶುರುವಾಗಿ ಅದರ ಸುತ್ತ ಸಾಗಿದರೆ, ದ್ವಿತೀಯಾರ್ಧ ಸಂಪೂರ್ಣವಾಗಿ ಧಾರ್ಮಿಕ ತಾಣದಲ್ಲಿ ತೆರೆದುಕೊಳ್ಳುತ್ತದೆ. ಹೀಗಾಗಿ ಮೊದಲಾರ್ಧಕ್ಕೆ ‘ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌’ ಹಾಗೂ ದ್ವಿತೀಯಾರ್ಧಕ್ಕೆ ‘ದೇವರ ತಾಣ’ ಎಂಬ ಹೆಸರುಗಳಿವೆ. ಆದರೆ, ಸೆನ್ಸಾರ್ ನಿಯಮಾವಳಿ ಪ್ರಕಾರ ಒಂದು ಚಿತ್ರಕ್ಕೆ ಒಂದೇ ಶೀರ್ಷಿಕೆ ಇರಬೇಕಾದ ಕಾರಣ ಅಂತಿಮವಾಗಿ ‘ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌’ ಹೆಸರಿನಲ್ಲೇ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Komal Actor: ಅದ್ಧೂರಿಯಾಗಿ ನೆರವೇರಿತು ಕೋಮಲ್ ನಟನೆಯ ʼʼತೆನಾಲಿ ಡಿಎ LLBʼ ಮುಹೂರ್ತ

ಕೋಮಲ್ ಕುಮಾರ್‌ಗೆ ದ್ವಿಪಾತ್ರ

ಈ ಚಿತ್ರದಲ್ಲಿ ಕೋಮಲ್ ಕುಮಾರ್ ಚಾರಿತ್ರಿಕತೆ ಹಾಗೂ ಆಧುನಿಕತೆ ಬೆಸೆಯುವ ಎರಡು ವಿಭಿನ್ನ ಶೇಡ್‌ಗಳಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರಲ್ಲಿ ಆಸ್ಥಾನದ ವರ್ಣಚಿತ್ರ ಕಲಾವಿದನಾಗಿ ನಟಿಸಿದರೆ, ಮತ್ತೊಂದರಲ್ಲಿ ಆಧುನಿಕ ಸಿನಿಮಾ ನಿರ್ದೇಶಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಟಿ ಮೇಘನಾ ರಾಜ್ ‘ದೇವರ ತಾಣ’ ಭಾಗದಲ್ಲಿ ರಾಣಿಯಾಗಿ ಹಾಗೂ ಬಾರ್ ಭಾಗದಲ್ಲಿ ನಾಯಕಿಯಾಗಿ ಮೋಡಿ ಮಾಡಲಿದ್ದಾರೆ. ಇವರೊಂದಿಗೆ ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡ್‌, ವಜ್ರಧೀರ್‌ ಜೈನ್‌, ಉತ್ಸವ್‌, ಕಾರ್ತಿಕ್‌ ರಾವ್‌, ರಾಘು ರಾಮನಕೊಪ್ಪ, ಸಿರಿಜಾ, ವರ್ಧನ್, ಕರಣ್‌, ರಾಧಿಕಾ ರಾವ್, ದಿವ್ಯಶ್ರೀ, ಅಕ್ಷತಾ, ಮಹೇಶ್, ಚಿತ್ರಕಲಾ, ಉಮೇಶ್‌ ಕಿನ್ನಾಳ್‌, ಎಂ. ಕೆ. ಮಠ, ಪ್ರಶಾಂತ್ ಸಿದ್ದಿ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ನಿರ್ದೇಶಕ ಸಂದೇಶ್‌ ಶೆಟ್ಟಿ ಕೂಡ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

"ನಾಲ್ಕು ಆಕರ್ಷಕ ಹಾಡುಗಳು, ಸಾಹಸ ದೃಶ್ಯಗಳು, ಹಾಸ್ಯ, ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ಆಧ್ಯಾತ್ಮಿಕ ಸ್ಪರ್ಶವನ್ನೂ ಒಳಗೊಂಡಿರುವ ಈ ಚಿತ್ರ ಸಂಪೂರ್ಣ ಮನರಂಜನಾ ಪ್ಯಾಕೇಜ್ ಆಗಿ ಮೂಡಿಬಂದಿದೆ. ಇಲ್ಲಿಯವರೆಗೆ ನಾನು ನಿರ್ದೇಶಿಸಿದ ಸಿನಿಮಾಗಳಿಗಿಂತ ಇದು ವಿಭಿನ್ನ ಅನುಭವ ನೀಡಿದೆ. ಕಥೆ, ಕಲಾವಿದರ ಶ್ರಮ ಹಾಗೂ ತಂತ್ರಜ್ಞರ ಸಾಥ್‌ನಿಂದ ಸಿನಿಮಾ ಅದ್ಭುತವಾಗಿ ಬಂದಿದ್ದು, ಸದ್ಯ 30 ಎಂ.ಎಲ್ ಹೆಸರಿನಲ್ಲಿ ಸಣ್ಣ ಝಲಕ್ ನೀಡಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ಈ ಚಿತ್ರ ಒಂದು ಮೈಲಿಗಲ್ಲಾಗಿ ನಿಲ್ಲಲಿದೆ" ಎಂದು ನಿರ್ದೇಶಕರು ಭರವಸೆ ವ್ಯಕ್ತಪಡಿಸಿದ್ದಾರೆ.