ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಿಲೀಸ್‌ಗೂ ಮುನ್ನವೇ ʻಕೊರಗಜ್ಜʼ ಸಿನಿಮಾ ಡೈರೆಕ್ಟರ್‌ ಸುಧೀರ್ ಅತ್ತಾವರ್‌ಗೆ ಸಿಕ್ತು ಐಷಾರಾಮಿ ಫ್ಲಾಟ್; ಕೊಟ್ಟಿದ್ದು ಯಾರು?

ಬಿಡುಗಡೆಗೂ ಮುನ್ನವೇ ಭಾರಿ ಕುತೂಹಲ ಮೂಡಿಸಿರುವ ‘ಕೊರಗಜ್ಜ’ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ 1.75 ಕೋಟಿ ರೂ. ಮೌಲ್ಯದ ಐಷಾರಾಮಿ ಫ್ಲಾಟ್ ಉಡುಗೊರೆಯಾಗಿ ನೀಡಿದ್ದಾರೆ. ಕನ್ನಡದಲ್ಲೇ ಮೊದಲ ಬಾರಿಗೆ 2Dಯಿಂದ 3Dಗೆ ಬದಲಾಗುತ್ತಿರುವ ಈ 40 ಕೋಟಿ ಬಜೆಟ್‌ನ ಸಿನಿಮಾ, ಚೈನೀಸ್ ಭಾಷೆಗೂ ಡಬ್ ಆಗುತ್ತಿದೆ.

ಬಹುನಿರೀಕ್ಷಿತ, ಬಿಗ್ ಬಜೆಟ್ ಸಿನಿಮಾ ‘ಕೊರಗಜ್ಜ’ ಬಿಡುಗಡೆಗೂ ಮುನ್ನವೇ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು ಬರೋಬ್ಬರಿ 1.75 ಕೋಟಿ ರೂಪಾಯಿ ಮೌಲ್ಯದ ಶೋಭ ಡೆವಲಪರ್ಸ್‌ನ ಐಷಾರಾಮಿ 3 ಬಿಎಚ್‌ಕೆ ಫ್ಲಾಟ್‌ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನಸೆಳೆದಿದ್ದಾರೆ.

3ಡಿ ರೂಪಕ್ಕೆ ಬದಲಾಗುತ್ತಿರುವ ಸಿನಿಮಾ

ಕಳೆದ ಜನವರಿ ತಿಂಗಳಲ್ಲೇ ‘ಝೀ ಮ್ಯೂಸಿಕ್’ ಬ್ಯಾನರ್ ಅಡಿ ಅದ್ಧೂರಿ ಆಡಿಯೋ ಲಾಂಚ್ ಮಾಡಿಕೊಂಡು ಬಿಡುಗಡೆಗೆ ಸಜ್ಜಾಗಿದ್ದ ʻಕೊರಗಜ್ಜʼ ಚಿತ್ರವನ್ನು, ಕೊನೆಯ ಕ್ಷಣದಲ್ಲಿ ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 3D ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲು ನಿರ್ಧರಿಸಲಾಗಿತ್ತು. ಸದ್ಯ ಕೊಚ್ಚಿ ಮತ್ತು ಚೆನ್ನೈನಲ್ಲಿ ಚಿತ್ರದ 3D ಕನ್ವರ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಸಿನಿಮಾ ಮೂಡಿಬರುತ್ತಿದೆ. ಈ ಮೂಲಕ 2D ಯಿಂದ 3D ಗೆ ಬದಲಾಗುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಕೊರಗಜ್ಜ’ ಪಾತ್ರವಾಗಿದೆ.

ಕೊರಗಜ್ಜ ದೈವಕ್ಕೆ ಹರಕೆಯ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್; ಅಭಿಮಾನಿಗಳು ಹೇಳಿದ್ದೇನು?

ಹೊಸ ಫ್ಲಾಟ್‌ನಲ್ಲಿ ಕೊರಗಜ್ಜ ದೈವದ ‘ಅಗೆಲು ಸೇವೆ’

ನಿರ್ದೇಶಕ ಸುಧೀರ್ ಅತ್ತಾವರ್ ಅವರ ಹೊಸ ಫ್ಲಾಟ್‌ನ ಗೃಹಪ್ರವೇಶ ಇತ್ತೀಚೆಗೆ ನಡೆದಿದ್ದು, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯ ಬಳಿಕ, ಭಾನುವಾರ ಬೆಂಗಳೂರಿನಲ್ಲಿ ಅತ್ಯಂತ ಅಪರೂಪ ಎನ್ನಬಹುದಾದ ‘ಕೊರಗಜ್ಜ ದೈವದ ಅಗೆಲು ಸೇವೆ’ಯನ್ನು ಪತ್ರಕರ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ನಟಿ ಭವ್ಯ ಅವರು ಕೊರಗಜ್ಜ ದೈವಕ್ಕೆ ಪ್ರಿಯವಾದ ಕುಚಲಕ್ಕಿ ಅನ್ನ, ಹುರುಳಿ-ಬಸಳೆ ಸಾರು, ಬಂಗುಡೆ ಮೀನಿನ ಗಸಿ, ಕೋಳಿ ಸುಕ್ಕ, ಮಿಡಿ ಮಾವಿನ ಉಪ್ಪಿನಕಾಯಿ ಹಾಗೂ ಕಳ್ಳು ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಗೆರಸೆಯಲ್ಲಿಟ್ಟು ದೈವಕ್ಕೆ ಸಮರ್ಪಿಸಿದರು. ನಿರ್ದೇಶಕರ ಪತ್ನಿ ರಾಜಶ್ರೀ ಸುಧೀರ್ ಅಡುಗೆಯ ಸಿದ್ಧತೆ ಮಾಡಿದ್ದರೆ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮತ್ತು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಸಾಥ್ ನೀಡಿದರು.

Koragajja Movie: 'ಕಾಂತಾರ ಚಾಪ್ಟರ್ 1' ಚಿತ್ರದ ಬಳಿಕ 'ಕೊರಗಜ್ಜ' ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆ!

ಚೀನೀ ಭಾಷೆಗೂ ಡಬ್ ಆಗ್ತಿದೆ ಕೊರಗಜ್ಜ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ, "ಚಿತ್ರದ ಕಂಟೆಂಟ್ ನೋಡಿ ಹಾಂಕಾಂಗ್ ಹಾಗೂ ಬೀಜಿಂಗ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ವಿತರಣಾ ಸಂಸ್ಥೆಗಳು ವಿದೇಶಿ ಹಕ್ಕುಗಳಿಗಾಗಿ ಮುಂದೆ ಬಂದಿವೆ. ಹೀಗಾಗಿ ಚಿತ್ರವನ್ನು ಅಸ್ಸಾಮಿ, ಇಂಗ್ಲಿಷ್ ಜೊತೆಗೆ ಚೈನೀಸ್ ಭಾಷೆಗೂ ಡಬ್ ಮಾಡಲಾಗುತ್ತಿದೆ. ಚಿತ್ರದ ಬಜೆಟ್ ಈಗಾಗಲೇ 40 ಕೋಟಿ ರೂಪಾಯಿ ದಾಟಿದೆ. ಆದರೂ ವ್ಯಾವಹಾರಿಕವಾಗಿ ನಮಗೆ ದೊಡ್ಡ ವಿಶ್ವಾಸವಿದೆ. ಈ ಯಶಸ್ಸಿನ ಹಿಂದಿರುವ ನಿರ್ದೇಶಕರಿಗೆ ನನ್ನ ಪ್ರೀತಿಯ ಉಡುಗೊರೆ ಈ ಫ್ಲಾಟ್" ಎಂದರು.

ರಾಣಿ ಪಾತ್ರ ಮಾಡಿರುವ ನಟಿ ಭವ್ಯ

ನಟಿ ಭವ್ಯ ಮಾತನಾಡಿ, "ಈ ಸಿನಿಮಾದಲ್ಲಿ ನಾನು ಕೊರಗಜ್ಜನಿಗೆ ಮೊಟ್ಟಮೊದಲ ಬಾರಿಗೆ ಅಗೆಲು ಸೇವೆ ನೀಡುವ ರಾಣಿ 'ಪಂಜಂದಾಯಿ' ಪಾತ್ರ ಮಾಡಿದ್ದೇನೆ. ಈ ಸಿನಿಮಾ ನನ್ನನ್ನು ಮತ್ತಷ್ಟು ದೈವಭಕ್ತಳನ್ನಾಗಿ ಮಾಡಿದೆ. ಈಗ ನಿಜ ಜೀವನದಲ್ಲೂ ನಿರ್ದೇಶಕರ ಹೊಸ ಮನೆಯಲ್ಲಿ ದೈವದ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ಬಹುಶಃ ನನ್ನಷ್ಟು ಸೌಭಾಗ್ಯ ವಂತೆ ಈ ಚಿತ್ರದಲ್ಲಿ ಯಾರೂ ಇರಲಿಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರು.

ಚಿತ್ರದ ಕಾರ್ಯಕಾರಿ ನಿರ್ಮಾಪಕ ಹಾಗೂ ಎಡಿಟರ್ ವಿದ್ಯಾಧರ್ ಶೆಟ್ಟಿ ಮಾಹಿತಿ ನೀಡಿ, ಸದ್ಯದಲ್ಲೇ 3D ಕೆಲಸಗಳನ್ನು ಮುಗಿಸಿ ಮುಂಬರುವ ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.