ಇತ್ತೀಚೆಗಷ್ಟೇ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಆಂಥಾಲಜಿ ಸಿನಿಮಾ ‘ಬಿ.ಟಿ.ಎಸ್’ನ ಐದು ಜನ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಸಾಯಿ ಶ್ರೀನಿಧಿ, ಇದೀಗ ಸ್ವತಂತ್ರ ನಿರ್ದೇಶಕರಾಗಿ ಪೂರ್ಣ ಪ್ರಮಾಣದ ಚಿತ್ರವೊಂದನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.
ಖ್ಯಾತ ನಿರ್ದೇಶಕ ‘ಮಠ’ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿ, ‘ನೋಡಿದವರು ಏನಂತಾರೆ’ ಚಿತ್ರಕ್ಕೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಸಾಯಿ ಶ್ರೀನಿಧಿ ಅವರ ಚೊಚ್ಚಲ ನಿರ್ದೇಶನದ ‘ಮಿಸ್ ಮ್ಯಾಚ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ವಿಶೇಷವೆಂದರೆ, ಚಿತ್ರತಂಡವು ರೆಗ್ಯುಲರ್ ಸ್ಟೈಲ್ ಬಿಟ್ಟು ಟೀಸರ್‌ಗಾಗಿಯೇ ಪ್ರತ್ಯೇಕ ವೆಬ್‌ಸೈಟ್ ರೂಪಿಸಿ, ಅದರ ಮೂಲಕ ಪ್ರೇಕ್ಷಕರನ್ನು ಆಹ್ವಾನಿಸಿ ವಿಭಿನ್ನ ಶೈಲಿಯಲ್ಲಿ ಟೀಸರ್ ರಿಲೀಸ್ ಮಾಡಿರುವುದು ವಿಶೇಷ. ಮಲೆನಾಡಿನ ಹಸಿರು ಪರಿಸರ ಹಾಗೂ ಸೊಗಡಿನಲ್ಲಿ ಅರಳಿ ನಿಂತಿರುವ ಈ ಸಿನಿಮಾ ಒಂದು ಫೀಲ್‌ಗುಡ್, ಫ್ಯಾಮಿಲಿ-ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವನ್ನು ಹೊಂದಿದೆಯಂತೆ!
Eddelu Manjunatha 2: ಗುರುಪ್ರಸಾದ್ ನಿರ್ದೇಶನದ ಕೊನೆಯ ಸಿನಿಮಾ 'ಎದ್ದೇಳು ಮಂಜುನಾಥ 2' ಬಿಡುಗಡೆಗೆ ಸಿದ್ಧ
‘ಬಿ.ಟಿ.ಎಸ್’ ಚಿತ್ರದಲ್ಲಿ ನಟಿಸಿದ್ದ ಕೌಶಿಕ್ ಗೌಡ ನಾಯಕನಾಗಿ, ‘ಕಂಬ್ಳಿಹುಳ’ ಖ್ಯಾತಿಯ ಅಶ್ವಿತಾ ಹೆಗ್ಡೆ ನಾಯಕಿಯಾಗಿ ಜೋಡಿಯಾಗಿದ್ದಾರೆ. ಇವರೊಂದಿಗೆ ‘ವಿಡಿಯೋ’ ಖ್ಯಾತಿಯ ತೇಜೇಶ್, ಅಮೃತಾ, ಅನಿರುದ್ಧ್ ಆಚಾರ್ಯ, ನಾಗೇಂದ್ರ ಶಾ, ಲಕ್ಷ್ಮೀ ಸಿದ್ದಯ್ಯ ಸೇರಿದಂತೆ ಮುಂತಾದ ಕಲಾವಿದರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಸದ್ಯ ಮಲೆನಾಡಿನ ಸುಂದರ ತಾಣಗಳಲ್ಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಬಿರುಸಿನಿಂದ ಮಾಡುತ್ತಿದೆ.
"ಸಣ್ಣ ಊರಿನ ಸಂಕುಚಿತ ವಾತಾವರಣದಿಂದ ಹೊರಬಂದು ಮಹಾನಗರದಲ್ಲಿ ಸ್ವತಂತ್ರವಾಗಿ ಬದುಕಬೇಕು ಎಂಬ ಕನಸು ಹೊತ್ತ ಹುಡುಗಿ ಮೇಘನಾ (ಅಶ್ವಿತಾ ಹೆಗ್ಡೆ) ಹಾಗೂ ನಗರದ ಜಂಜಾಟ ತೊರೆದು ಸ್ವಂತ ಊರಿನಲ್ಲೇ ಏನಾದರೂ ಸಾಧಿಸಬೇಕೆಂಬ ಛಲ ಹೊತ್ತ ಆಕಾಶ್ (ಕೌಶಿಕ್ ಗೌಡ).. ಈ ಇಬ್ಬರು ಪರಸ್ಪರ ವಿರುದ್ಧ ಧ್ರುವಗಳ ವ್ಯಕ್ತಿತ್ವಗಳು ಒಂದಾದಾಗ ಸೃಷ್ಟಿಯಾಗುವ ಘಟನೆಗಳೇ ಸಿನಿಮಾದ ಜೀವಾಳ. ಇಂದಿನ ಕೃತಕ ಪ್ರಪಂಚದಲ್ಲಿ ಪ್ರೀತಿ, ಸ್ನೇಹ ಮತ್ತು ಬಾಂಧವ್ಯಗಳ ನಡುವೆ ನಡೆಯುವ ಹಾಸ್ಯ ಹಾಗೂ ಭಾವನಾತ್ಮಕ ತಿರುವುಗಳನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ" ಎಂದು ನಿರ್ದೇಶಕ ಸಾಯಿ ಶ್ರೀನಿಧಿ ಮಾಹಿತಿ ಹಂಚಿಕೊಂಡಿದ್ದಾರೆ.
ತೇಜಸ್ ವೆಂಕಟೇಶ್ ಅವರು ‘ತೇಜಸ್ ಪಬ್ಲಿಕೇಶನ್’ ಮತ್ತು ‘ಸಟಾಯರ್’ ಸಂಸ್ಥೆಯ ಸಹಯೋಗದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಯಿ ಶ್ರೀನಿಧಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಮೂರು ಹಾಡುಗಳಿಗೆ ಸ್ವತಃ ಜುಡಾ ಸ್ಯಾಂಡಿ ಅವರೇ ಧ್ವನಿಯಾಗಿದ್ದರೆ, ಮತ್ತೊಂದು ಹಾಡನ್ನು ಲಕ್ಷ್ಮೀ ಬೆಳ್ಮಣ್ಣು ಹಾಡಿದ್ದಾರೆ.
ಚಿತ್ರಕ್ಕೆ ಗಣೇಶ್ ಮಹಾಬಲ ಅವರ ಛಾಯಾಗ್ರಹಣ ಹಾಗೂ ದೀಪಕ್ ಕುಲಾಲ್ ಅವರ ಸಂಕಲನವಿದೆ. ಟೀಸರ್ ಮೂಲಕ ಭರವಸೆ ಮೂಡಿಸಿರುವ ‘ಮಿಸ್ ಮ್ಯಾಚ್’ ಸದ್ಯದಲ್ಲೇ ಬೆಳ್ಳಿತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ.