ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಕೊನೇ ಸಿನಿಮಾ 'ಜನ ನಾಯಗನ್' ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಸೆನ್ಸಾರ್ ಮಂಡಳಿಯ (CBFC) ಕತ್ತರಿ ಪ್ರಯೋಗದ ಕುರಿತು ದೊಡ್ಡ ಚರ್ಚೆ ಮುನ್ನೆಲೆಗೆ ಬಂದಿದೆ. ಚಿತ್ರದಲ್ಲಿನ ಪ್ರಮುಖ ರಾಜಕೀಯ ಸಂಭಾಷಣೆಯೊಂದನ್ನು ತೆಗೆದುಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿತ್ತು ಎಂದು ಚಿತ್ರದ ನಿರ್ಮಾಪಕ ಕೆ. ವೆಂಕಟ ನಾರಾಯಣ (KVN) ಬಹಿರಂಗಪಡಿಸಿದ್ದಾರೆ.
ವಿವಾದಕ್ಕೆ ಕಾರಣವಾಗಿದ್ದ ಸಂವಿಧಾನದ ಡೈಲಾಗ್!
ಜುಲೈ 23ರಂದು ಚಿತ್ರ ವಿಶ್ವಾದ್ಯಂತ ಅದ್ದೂರಿಯಾಗಿ ʻಜನ ನಾಯಗನ್ʼ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸೆನ್ಸಾರ್ ಬೋರ್ಡ್ ಆಕ್ಷೇಪ ವ್ಯಕ್ತಪಡಿಸಿದ ದೃಶ್ಯಗಳು ಹಾಗೂ ಸಂಭಾಷಣೆಗಳ ಬದಲಾವಣೆಯ ಕುರಿತು ವಿವರ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ವಿಜಯ್ ಅವರ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಉಲ್ಲೇಖವಿರುವ ಸಂಭಾಷಣೆಯೊಂದು ಸಿನಿಮಾದಲ್ಲಿದೆ. ನಿರ್ಮಾಪಕ ವೆಂಕಟ್ ನಾರಾಯಣ ಅವರ ಪ್ರಕಾರ, "ಅಂಬೇಡ್ಕರ್ ಅವರ ಸಂವಿಧಾನವನ್ನು ಪಾಲಿಸದಿದ್ದರೆ, ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಸಂವಿಧಾನ ಜಾರಿಗೆ ಬರುತ್ತದೆ" ಎಂಬ ಅರ್ಥ ಬರುವ ಡೈಲಾಗ್ ಮೂಲ ಚಿತ್ರದಲ್ಲಿತ್ತು. ಈ ಸಾಲನ್ನು ಸೆನ್ಸಾರ್ ಮಂಡಳಿ ತೀವ್ರವಾಗಿ ಆಕ್ಷೇಪಿಸಿದ್ದು, ಸದ್ಯ ಸಿಬಿಎಫ್‌ಸಿ ಸೂಚನೆ ಮೇರೆಗೆ ಆ ಸಂಭಾಷಣೆಯನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ದೇಶದ ಕಾನೂನನ್ನು ಗೌರವಿಸುತ್ತೇವೆ
ಈ ಕುರಿತು ಸ್ಪಷ್ಟನೆ ನೀಡಿರುವ ನಿರ್ಮಾಪಕರು, "ನಾವು ದೇಶದ ಕಾನೂನನ್ನು ಗೌರವಿಸುತ್ತೇವೆ. ಆ ಸಾಲುಗಳನ್ನು ಅತಿಯಾಗಿ ರಾಜಕೀಯವಾಗಿ ಅರ್ಥೈಸುವ ಬದಲು, ಸಾಮಾನ್ಯ ಜನರಿಗೆ ನಿಯಮಗಳ ಪ್ರಾಮುಖ್ಯತೆಯನ್ನು ದೈನಂದಿನ ಭಾಷೆಯಲ್ಲಿ ವಿವರಿಸಲು ಬಳಸಲಾಗಿತ್ತು. ಮನೆಯಲ್ಲಿ ಮಕ್ಕಳಿಗೆ ನಿಯಮ ಪಾಲಿಸದಿದ್ದರೆ ಆಗುವ ಪರಿಣಾಮಗಳನ್ನು ಹೇಳುವಂತೆಯೇ ಅದನ್ನು ಸರಳವಾಗಿ ಹೆಣೆಯಲಾಗಿತ್ತು. ಆದರೆ ರಾಜಕೀಯ ಉಲ್ಲೇಖವಿದ್ದ ಕಾರಣ ಸೆನ್ಸಾರ್ ಬೋರ್ಡ್ ತಿದ್ದುಪಡಿಗೆ ಕೇಳಿತು, ನಾವು ಅದನ್ನು ಪಾಲಿಸಿದ್ದೇವೆ. ಸಿನಿಮಾದಲ್ಲಿ ರಾಜಕೀಯ ವಿಷಯ ಮತ್ತು ವ್ಯಕ್ತಿಗಳ ಹೆಸರನ್ನು ಬಳಸುವಾಗ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ" ಎಂದಿದ್ದಾರೆ.
ಧಾರ್ಮಿಕ ಪದಗಳ ಮ್ಯೂಟ್ - ಕಟ್ಸ್
ಸಂವಿಧಾನದ ಡೈಲಾಗ್ ಮಾತ್ರವಲ್ಲದೆ ಚಿತ್ರದ ಇತರೆ ಕೆಲವು ದೃಶ್ಯಗಳಿಗೂ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಅಂಬೇಡ್ಕರ್ ಅವರ ಚಿತ್ರವಿರುವ ಪುಸ್ತಕದ ಕವರ್ ಶಾಟ್ ಅನ್ನು ಮಾರ್ಪಡಿಸಲು ಬೋರ್ಡ್ ನಿರ್ದೇಶಿಸಿದೆ. ಚಿತ್ರದ ಹಿನ್ನೆಲೆ ಧ್ವನಿ ಹಾಗೂ ಸೌಂಡ್‌ಟ್ರ್ಯಾಕ್‌ನಲ್ಲಿದ್ದ ಧಾರ್ಮಿಕ ಉಲ್ಲೇಖಗಳಾದ 'ಭಾಗವತಮ್', 'ರಂಗನಾಥರ್' ಮತ್ತು 'ಓಂ' ಪದಗಳನ್ನು ಮ್ಯೂಟ್ ಮಾಡಲಾಗಿದೆ. ಚಿತ್ರದಲ್ಲಿ ಬರುವ 'ಆಪರೇಷನ್ ಮೆಲುಹಾ'ಗೆ ಸಂಬಂಧಿಸಿದ ಸಂಭಾಷಣೆಯಿಂದಲೂ 'ಓಂ' ಪದಕ್ಕೆ ಕತ್ತರಿ ಬಿದ್ದಿದೆ. ಒಟ್ಟಾರೆಯಾಗಿ ಚಿತ್ರದ ಸುಮಾರು 20 ಸೆಕೆಂಡುಗಳ ದೃಶ್ಯವನ್ನು ಕತ್ತರಿಸಿ, 10 ಸೆಕೆಂಡುಗಳಷ್ಟು ದೃಶ್ಯವನ್ನು ಬದಲಾಯಿಸಲಾಗಿದೆ.
Thalapathy Vijay: ವಿಜಯ್ ಹುಟ್ಟುಹಬ್ಬ; ಇಲ್ಲಿದೆ ನಟನ ಬೆಸ್ಟ್ ಸಿನಿಮಾ ಲಿಸ್ಟ್
'ಜನ ನಾಯಗನ್' ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?
ಎಚ್. ವಿನೋದ್ ನಿರ್ದೇಶನದ ಈ ಬಿಗ್ ಬಜೆಟ್ ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ದಳಪತಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೈನ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ತೆಲುಗಿನ ಬ್ಲಾಕ್‌ಬಸ್ಟರ್ ಸಿನಿಮಾ 'ಭಗವಂತ್ ಕೇಸರಿ'ಯ ಅಧಿಕೃತ ರಿಮೇಕ್ ಎಂದು ವ್ಯಾಪಕವಾಗಿ ವರದಿಯಾಗಿದ್ದರೂ, ಚಿತ್ರತಂಡ ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಹಲವು ಸೆನ್ಸಾರ್ ವಿವಾದಗಳು ಮತ್ತು ಬದಲಾವಣೆಗಳ ನಂತರ ಅಂತಿಮವಾಗಿ ಈ ಚಿತ್ರವು ಜುಲೈ 23 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.