ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Laapataa Ladies Movie: ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆದ ʼಲಾಪತಾ ಲೇಡೀಸ್‌ʼ ಚಿತ್ರಕ್ಕೆ ಕೃತಿ ಚೌರ್ಯದ ಕಳಂಕ; ಕಥೆ ಬರೆದ ಬಿಪ್ಲಬ್ ಗೋಸ್ವಾಮಿ ಸ್ಪಷ್ಟನೆ ಏನು?

Biplab Goswami: ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್‌ ಆಫೀಸ್‌ನಲ್ಲೂ ಮಿಂಚಿ, ಆಸ್ಕರ್‌ಗೂ ನಾಮಿನೇಟ್‌ ಆಗಿದ್ದ ಬಾಲಿವುಡ್ ಚಿತ್ರ ʼಲಾಪತಾ ಲೇಡಿಸ್ʻ ಸಿನಿಮಾದ ಕಥೆಯನ್ನು 2019ರಲ್ಲಿ ತೆರೆಕಂಡ ಅರೇಬಿಕ್ ಕಿರುಚಿತ್ರ ʼಬುರ್ಖಾ ಸಿಟಿʼ ಯಿಂದ ಕದಿಯಲಾಗಿದೆ ಎನ್ನುವ ವಿಚಾರ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಈ ಆರೋಪಕ್ಕೆ ಇದೀಗ ಕಥೆ ಬರೆದ ಬಿಪ್ಲಬ್ ಗೋಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ನಕಲು ಆರೋಪಕ್ಕೆ ʼಲಾಪತಾ ಲೇಡೀಸ್‌ʼ ಚಿತ್ರದ ಕಥೆಗಾರ ಬಿಪ್ಲಬ್ ಹೇಳಿದ್ದೇನು?

ಬಿಪ್ಲಬ್ ಗೋಸ್ವಾಮಿ ಮತ್ತು ʼಲಾಪತಾ ಲೇಡೀಸ್ʼ ಚಿತ್ರದ ಪೋಸ್ಟರ್‌.

Profile Ramesh B Apr 5, 2025 10:44 PM

ಮುಂಬೈ: ಕಡಿಮೆ ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್‌ ಆಫೀಸ್‌ನಲ್ಲೂ ಮಿಂಚಿ, ಆಸ್ಕರ್‌ಗೂ ನಾಮಿನೇಟ್‌ ಆಗಿದ್ದ ಬಾಲಿವುಡ್ ಚಿತ್ರ ʼಲಾಪತಾ ಲೇಡಿಸ್ʻ (Laapataa Ladies) ಸಿನಿಮಾದ ಕಥೆಯನ್ನು 2019ರಲ್ಲಿ ತೆರೆಕಂಡ ಅರೇಬಿಕ್ ಕಿರುಚಿತ್ರ ʼಬುರ್ಖಾ ಸಿಟಿʼ (Burqa City)ಯಿಂದ ಕದಿಯಲಾಗಿದೆ ಎನ್ನುವ ವಿಚಾರ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ಕಿರಣ್ ರಾವ್ ನಿರ್ದೇಶನದ ʼಲಾಪತಾ ಲೇಡಿಸ್ʻ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಗುರಿಯಾಗಿದೆ ಮತ್ತು ಈ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತದೆ. ಇದೀಗ ಚಿತ್ರಕ್ಕೆ ಕಥೆ ಬರೆದ ಬಿಪ್ಲಬ್ ಗೋಸ್ವಾಮಿ (Biplab Goswami) ಮೌನ ಮುರಿದಿದ್ದು, ಇದು ಕದ್ದ ಮಾಲಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 2014ರಲ್ಲಿಯೇ ಕಥೆ ಬರೆದಿದ್ದಾಗಿ ತಿಳಿಸಿದ್ದಾರೆ.

ಬಿಪ್ಲಬ್ ಗೋಸ್ವಾಮಿ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ʼಬುರ್ಖಾ ಸಿಟಿʼ ಕಿರುಚಿತ್ರ ರಿಲೀಸ್‌ಗೂ ಮನ್ನ 2014ರಲ್ಲಿಯೇ ತಾವು ʼಲಾಪತಾ ಲೇಡೀಸ್‌ʼ ಕಥೆಯನ್ನು ಸಿದ್ಧಪಡಿಸಿದ್ದಾಗಿ ದಾಖಲೆ ಸಮೇತ ವಿವರಿಸಿದ್ದಾರೆ.

ಬಿಪ್ಲಬ್ ಗೋಸ್ವಾಮಿಅವರ ಪೋಸ್ಟ್‌ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: Laapataa Ladies: ಆಸ್ಕರ್‌ಗೆ ನಾಮಿನೇಟ್‌ ಆಗಿದ್ದ ʻಲಾಪತಾ ಲೇಡಿಸ್ʼ ಅರೇಬಿಕ್‌ ಸಿನಿಮಾದ ಕಾಪಿನಾ? ಇಲ್ಲಿದೆ ನೋಡಿ ಸಾಕ್ಷಿ

ಬಿಪ್ಲಬ್ ಗೋಸ್ವಾಮಿ ಹೇಳಿದ್ದೇನು?

ʼʼಅರೇಬಿಕ್ ಕಿರುಚಿತ್ರ ನಿರ್ಮಾಣಕ್ಕೂ ಬಹಳ ಮೊದಲೇ 2014ರಲ್ಲಿ ʼಲಾಪತಾ ಲೇಡೀಸ್ʼ ಚಿತ್ರದ ಕಥೆಯನ್ನು ʼಟು ಬ್ರೈಡ್ಸ್‌ʼ (Two Brides) ಹೆಸರಿನಲ್ಲಿ ಚಿತ್ರಕಥೆಗಾರರ ​​ಸಂಘ (Screen Writers Association-SWA)ದಲ್ಲಿ ನೋಂದಾಯಿಸಿದ್ದೇನೆ. ʼಬುರ್ಖಾ ಸಿಟಿʼ ಕಿರುಚಿತ್ರದಲ್ಲಿ ಕಂಡುಬರುವ ದೃಶ್ಯದೊಂದಿಗೆ ಸಾಮತ್ಯೆ ಇರುವ ಸನ್ನಿವೇಶವನ್ನೂ ಆಗಲೇ ಬರೆದಿದ್ದೆ. 2018ರಲ್ಲಿ ನಾನು ಬರೆದ ʼಟು ಬ್ರೈಡ್ಸ್ʼ ಕಥೆಯ ವಿಸ್ತ್ರತ ಸ್ಕ್ರಿಪ್ಟ್ ಅನ್ನು ಎಸ್‌ಡಬ್ಲ್ಯುಎಯಲ್ಲಿ ನೋಂದಾಯಿಸಿದ್ದೇನೆ. ಅದೇ ವರ್ಷ ಸಿನೆಸ್ತಾನ್ ಸ್ಟೋರಿ ಟೆಲ್ಲರ್ಸ್ ಸ್ಪರ್ಧೆ (Cinestaan Storytellers Competition)ಯಲ್ಲಿ ಅದು ರನ್ನರ್‌ ಅಪ್‌ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿದೆʼʼ ಎಂದು ಹೇಳಿದ್ದಾರೆ.

ʼʼ2014ರಲ್ಲಿ ನಾನು ನೋಂದಾಯಿಸಿದ ಕಥೆಯಲ್ಲಿ ಈಗ ವೈರಲ್‌ ಆಗುತ್ತಿರುವ, ʼಬುರ್ಖಾ ಸಿಟಿʼ ಕಿರುಚಿತ್ರದ ದೃಶ್ಯದೊಂದಿಗೆ ಸಾಮ್ಯತೆ ಇರುವ ಸನ್ನಿವೇಶ ಇದೆ. ವೇಲ್‌ ಸುತ್ತಿಕೊಂಡಿದ್ದ ಕಾರಣ ಮುಖ ಸರಿಯಾಗಿ ಕಾಣಿಸದೆ ವರ ಬೇರೊಬ್ಬ ವಧುವನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ. ಮನೆಗೆ ತಲುಪಿದ ಬಳಿಕ ಆತನಿಗೆ ಸತ್ಯ ತಿಳಿದು ಆಘಾತವಾಗುತ್ತದೆ. ಹೀಗೆ ಕಥೆ ಆರಂಭವಾಗುತ್ತದೆ. ಇದನ್ನು ನಾನು ಮೊದಲೇ ಸ್ಪಷ್ಟವಾಗಿ ಬರೆದಿದ್ದೇನೆʼʼ ಎಂದಿದ್ದಾರೆ.

ʼʼಬಳಿಕ ವರ ಪೊಲೀಸ್‌ ಠಾಣೆಗೆ ತೆರಳಿ ವೇಲ್‌ ಸುತ್ತಿದ್ದ ವಧುವಿನ ಪೋಟೊ ತೋರಿಸಿ ಹುಡುಕಿ ಕೊಡುವಂತೆ ಮನವಿ ಸಲ್ಲಿಸುತ್ತಾನೆ. ಆಗ ಹಾಸ್ಯದ ಸನ್ನಿವೇಶ ಸೃಷ್ಟಿಯಾಗುತ್ತದೆ. ಈ ಅಂಶಗಳೆಲ್ಲ ಕಥೆಯಲ್ಲಿ ಇದೆʼʼ ಎಂದು ವಿವರಿಸಿದ್ದಾರೆ.

ಹಿಂದೆಯೇ ಇತ್ತು

ʼʼವೇಲ್‌ ಮತ್ತು ಮುಸುಕು ಧರಿಸಿ ಗುರುತು ಮರೆಮಾಚುವ ಸನ್ನಿವೇಶ ಸೃಷ್ಟಿಸುವ ತಂತ್ರವನ್ನು ಬಹಳ ಹಿಂದಿನಿಂದಲೂ ಜಗತ್ತಿನಾದ್ಯಂತ ಪ್ರಸಿದ್ಧ ಲೇಖಕರು ಅನುಸರಿಸಿದ್ದಾರೆ. ರವೀಂದ್ರನಾಥ್‌ ಠಾಗೂರ್‌ ಅವರಿಂದ ಹಿಡಿದು ವಿಲಿಯನ್‌ ಶೇಕ್ಸ್‌ಪಿಯರ್‌ ಮತ್ತಿತರರು ತಮ್ಮ ಕ್ಲಾಸ್‌ ಕೃತಿಗಳನ್ನು ಇದನ್ನು ಬರೆದಿದ್ದಾರೆ. ಇದನ್ನೇ ನಾನೂ ಬಳಸಿದ್ದೇನೆʼʼ ಎಂದು ಹೇಳಿದ್ದಾರೆ.

ʼʼಕಥೆ, ಸಂಭಾಷಣೆ, ಪಾತ್ರ ಮತ್ತು ದೃಶ್ಯಗಳನ್ನು ಹಲವು ವರ್ಷಗಳ ಸಂಶೋಧನೆಯ ಬಳಿಕ ರಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಲಿಂಗ ಅಸಮಾನತೆ, ಪುರುಷ ಪ್ರಧಾನ ಸಮಾಜ ಇತ್ಯಾದಿಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಶ್ರಮ ಹಾಕಿದ್ದೇನೆ. ನಮ್ಮ ಕಥೆ, ಪಾತ್ರ ಮತ್ತು ಸಂಭಾಷಣೆ ಶೇ. 100ರಷ್ಟು ಒರಿಜಿನಲ್‌. ಯಾವುದೇ ಕಥೆ ನಕಲಲ್ಲ. ಕೃತಿ ಚೌರ್ಯದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಕಲು ಆರೋಪ ಮಾಡಿದರೆ ನನ್ನ ಮತ್ತು ಚಿತ್ರ ತಂಡದ ಶ್ರಮವನ್ನು ಅವಮಾನಿಸಿದಂತಾಗುತ್ತದೆʼʼ ಎಂದು ತಿಳಿಸಿದ್ದಾರೆ. ಜತೆಗೆ 2014ರಲ್ಲಿ ತಾವು ಸಲ್ಲಿಸಿದ ಕಥೆಯ ಮೂಲ ಪ್ರತಿಯನ್ನೂ ನಮೂದಿಸಿದ್ದಾರೆ. ಆಮೂಲಕ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.