ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಾಷ್ಟ್ರಪಿತ ಎನ್ನುವುದು ಅವಮಾನ; ಟಾಲಿವುಡ್ ನಟನ ವಿವಾದಾತ್ಮಕ ಹೇಳಿಕೆಗೆ ಭುಗಿಲೆದ್ದ ಆಕ್ರೋಶ

ರಾಷ್ಟ್ರೀಯ ನಾಯಕ ಮಹಾತ್ಮ ಗಾಂಧಿ ಅವರ ಬಗ್ಗೆ ಟಾಲಿವುಡ್‌ ನಟ ಶ್ರೀಕಾಂತ್ ಅಯ್ಯಂಗಾರ್ ಮಾನಹಾನಿಕಾರಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತೆಲಂಗಾಣದ ಅನೇಕ ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕೀಯ ನಾಯಕರು ಆಗ್ರಹಿಸಿದ್ದಾರೆ.

ರಾಷ್ಟ್ರಪಿತನ ವಿರುದ್ಧ ನಾಲಗೆ ಹರಿಬಿಟ್ಟ ಟಾಲಿವುಡ್ ನಟ

ನಟ ಶ್ರೀಕಾಂತ್ ಅಯ್ಯಂಗಾರ್ -

Profile Sushmitha Jain Oct 11, 2025 11:00 PM

ಹೈದರಾಬಾದ್: ಗಾಂಧೀಜಿಯವರ ಬಗ್ಗೆ ಟಾಲಿವುಡ್ (Tollywood) ನಟ ಶ್ರೀಕಾಂತ್ ಅಯ್ಯಂಗಾರ್ (Srikanth Iyengar) ವಿವಾದಾತ್ಮಕ (Controversy Statment) ಹೇಳಿಕೆಯೊಂದನ್ನು ನೀಡಿದ್ದಾರೆ. "ಗಾಂಧಿಯನ್ನು ರಾಷ್ಟ್ರಪಿತ ಎಂದು ಕರೆಯುವುದು ಎಲ್ಲರಿಗೂ ಮಾಡುವ ಅಪಮಾನ" ಎಂದು ಹೇಳಿಕೆ ನೀಡಿರುವ ಅವರ ವಿಡಿಯೊ ಭಾರಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಟನ ಈ ಹೇಳಿಕೆಯ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದ್ದು, ಗಾಂಧಿ ಅವರ ಅನುಯಾಯಿಗಳು, ರಾಜಕೀಯ ನಾಯಕರು, ನಾಗರಿಕ ಸಮಾಜ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: Deepika Padukone: ದೇಶದ ಮೊದಲ ಮಾನಸಿಕ ಆರೋಗ್ಯದ ರಾಯಭಾರಿಯಾಗಿ ಕನ್ನಡತಿ ದೀಪಿಕಾ ಪಡುಕೋಣೆ ನೇಮಕ

ಅಷ್ಟೇ ಅಲ್ಲದೇ ನಾಥೂರಾಮ್ ಗೋಡ್ಸೆ (Nathuram Godse) ಅವರನ್ನು "ಪರಾವಲಂಬಿ ಜಂತುವನ್ನು ತೆಗೆದುಹಾಕಿದ ಆ್ಯಂಟಿ ಬಯಾಟಿಕ್" ಎಂದು ಬಣ್ಣಿಸಿದ್ದು, ಇದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿವಾದಾತ್ಮಕ ಹೇಳಿಕೆಗಳು ಗೌರವಾನ್ವಿತ ರಾಷ್ಟ್ರೀಯ ನಾಯಕನ ಮಾನಹಾನಿ ಮಾಡುವ ಪ್ರಯತ್ನ ಆಗಿದ್ದು, ಅಧಿಕಾರಿಗಳು ನಟ ಶ್ರೀಕಾಂತ್ ಅಯ್ಯಂಗಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಎಂದು ತೆಲಂಗಾಣದ ಅನೇಕ ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕೀಯ ಮುಖಂಡರು ಒತ್ತಾಯಿಸಿದ್ದಾರೆ.

ನಟ ಶ್ರೀಕಾಂತ್ ಅಯ್ಯಂಗಾರ್ ಅವರ ಹೇಳಿಕೆ:



ಇನ್ನು ಶ್ರೀಕಾಂತ್‌ ಅಯ್ಯಂಗಾರ್ ವಿರುದ್ಧ ಕಾಂಗ್ರೆಸ್ (Congress) ಎಂಎಲ್‌ಸಿ ಬಲ್ಮೂರ್ ವೆಂಕಟ್ (MLC Balmur Venkat), ಹೈದರಾಬಾದ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ನಟನ ಈ ಹೇಳಿಕೆಗಳು ತೀವ್ರ ಆಕ್ಷೇಪಾರ್ಹವಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಚಲನಚಿತ್ರೋದ್ಯಮ ಮತ್ತು ಕಲಾವಿದರ ಸಂಘಗಳು ಅಯ್ಯಂಗಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಅವರು ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದರೆ ಅವರನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಅಥವಾ ಮುಂಬರುವ ಎಲ್ಲ ಸಿನಿಮಾಗಳಿಗೆ ನಿಷೇಧಿಸಬೇಕು ಎಂದು ವೆಂಕಟ್ ಹೇಳಿದ್ದಾರೆ.

ರಾಷ್ಟ್ರಪಿತರನ್ನ ಅವಮಾನಿಸುವ ಹೇಳಿಕೆಗಳನ್ನು ಖಂಡಿಸುವುದು ಚಿತ್ರರಂಗ ಸಂಸ್ಥೆಗಳ ಜವಾಬ್ದಾರಿಯಾಗಿದೆ ಮತ್ತು ಅಂತಹ ಹೇಳಿಕೆ ನೀಡುವ ವ್ಯಕ್ತಿಗಳನ್ನೂ ದೂರವಿರಿಸಬೇಕು ಎಂದು ವೆಂಕಟ್ ಕರೆ ನೀಡಿದ್ದಾರೆ.

ಈ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಶ್ರೀಕಾಂತ್ ಅಯ್ಯಂಗಾರ್ ಆಗಲಿ ಅಥವಾ ಅವರಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳಾಗಲಿ ಈವರೆಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ನಟನ ವಿರುದ್ಧ ಏನಾದರೂ ಕಾನೂನು ಕ್ರಮ ಕೈಗೊಳ್ಳಲಾಗಿದೆಯೋ, ಇಲ್ಲವೋ ಎಂಬ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ.