ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಯಾಂಡಲ್‌ವುಡ್ 3 ತಿಂಗಳ ರಿಪೋರ್ಟ್:‌ ಬಿಡುಗಡೆಯಾದ ಕನ್ನಡ ಸಿನಿಮಾಗಳೆಷ್ಟು? ಗೆದ್ದವರು ಯಾರು? ನಿರೀಕ್ಷೆ ಹುಟ್ಟಿಸಿ ಮಕಾಡೆ ಮಲಗಿದ ಚಿತ್ರಗಳೆಷ್ಟು?

Sandalwood Box Office 2026: ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಒಟ್ಟು 72 ಕನ್ನಡ ಸಿನಿಮಾಗಳು ತೆರೆಕಂಡಿದ್ದರೂ, ಗೆಲುವಿನ ಪ್ರಮಾಣ ತೀರಾ ಕಮ್ಮಿ ಇದೆ. ಡಾರ್ಲಿಂಗ್ ಕೃಷ್ಣ ನಟನೆಯ 'ಲವ್ ಮಾಕ್ಟೇಲ್ 3' ಮಾತ್ರ ದೊಡ್ಡ ಮಟ್ಟದ ಯಶಸ್ಸು ಕಂಡು ಈ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ಬಿಡುಗಡೆಯಾದ ಶೇ. 90ರಷ್ಟು ಸಿನಿಮಾಗಳು ಬಂಡವಾಳ ವಾಪಸ್ ಪಡೆಯಲಾಗದೆ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿವೆ.

2026ರ ವರ್ಷದಲ್ಲಿ ಆಗಲೇ ಮೊದಲ ಮೂರು ತಿಂಗಳು ಮುಕ್ತಾಯವಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಹಲವು ದಾಖಲೆ ಸಂಖ್ಯೆಯ ಸಿನಿಮಾಗಳು ತೆರೆಕಂಡಿವೆ. ಆದರೆ ಗೆಲುವಿನ ಪ್ರಮಾಣ ಮಾತ್ರ ಸುಮಾರಾಗಿದೆ. 2026ರಲ್ಲಿ ಈವರೆಗೂ ಸುಮಾರು 70+ ಸಿನಿಮಾಗಳು ತೆರೆಕಂಡಿರುವೆ. ಅದರಲ್ಲಿ ಸದ್ಯ ದೊಡ್ಡಮಟ್ಟದ ಹಿಟ್‌ ಎನಿಸಿಕೊಂಡಿರುವುದು ಡಾರ್ಲಿಂಗ್‌ ಕೃಷ್ಣ ಅವರ ʻಲವ್‌ ಮಾಕ್ಟೇಲ್‌ 3ʼ ಒಂದೇ. ಮಿಕ್ಕ ಸಿನಿಮಾಗಳ ಕಥೆ ಏನು? ಇಲ್ಲಿದೆ ಮೂರು ತಿಂಗಳು ಸಂಪೂರ್ಣ ಮಾಹಿತಿ.

ಮೂರು ತಿಂಗಳಲ್ಲಿ 70+ ಸಿನಿಮಾಗಳು ರಿಲೀಸ್‌

ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಗೆಲುವಿನ ಪ್ರಮಾಣ ಕಡಿಮೆ ಇದ್ದರೂ, ಸಿನಿಮಾಗಳು ತೆರೆಕಂಡಿದ್ದು ಮಾತ್ರ ಜಾಸ್ತಿ. ಸುಮಾರು 72 ಸಿನಿಮಾಗಳು ಬಿಡುಗಡೆ ಆಗಿವೆ. ಜನವರಿಯಲ್ಲಿ 20 ಸಿನಿಮಾಗಳು ತೆರೆಕಂಡಿವೆ. ಅದರಲ್ಲೂ ಜನವರಿ ಕೊನೇ ವಾರದಲ್ಲಿ ಒಟ್ಟಿಗೆ 10 ಸಿನಿಮಾಗಳು ತೆರೆಗೆ ಬಂದಿದ್ದವು. ಆರಂಭದ ಎರಡ್ಮೂರು ವಾರ ಬರೀ ಪರಭಾಷೆಗೆ ಮಣೆ ಹಾಕಿದ್ದರಿಂದ ಕನ್ನಡ ಸಿನಿಮಾಗಳು ಹೆಚ್ಚು ರಿಲೀಸ್‌ ಆಗಲಿಲ್ಲ. ಆದರೆ ಫೆಬ್ರವರಿ ಹಾಗೇ ಇರಲಿಲ್ಲ. ಅದು ಚಿಕ್ಕ ತಿಂಗಳಾದರೂ ತೆರೆಕಂಡ ಸಿನಿಮಾಗಳ ಸಂಖ್ಯೆ 34. ಮೊದಲ ವಾರವೇ ಬರೋಬ್ಬರಿ 12 ಸಿನಿಮಾಗಳು ತೆರೆಕಂಡಿದ್ದು ಹೊಸ ದಾಖಲೆ ಆಗಿದೆ. ಇನ್ನು, ಮಾರ್ಚ್‌ನಲ್ಲಿ 18 ಸಿನಿಮಾಗಳು ತೆರೆಕಂಡಿವೆ. ಮಾರ್ಚ್‌ ಮೊದಲ ವಾರ 9 ಚಿತ್ರಗಳು ರಿಲೀಸ್‌ ಆಗಿದ್ದವು. ಒಟ್ಟು 72 ಸಿನಿಮಾಗಳು ಈ ವರೆಗೂ ರಿಲೀಸ್‌ ಆಗಿವೆ.

Darling Krishna: ಡಾರ್ಲಿಂಗ್ ಕೃಷ್ಣರಿಂದ ವೈಯಕ್ತಿಕ ತೇಜೋವಧೆ! ಆ ಪದ ಬಳಸಿದ್ದಕ್ಕೆ ಗುರು ದೇಶಪಾಂಡೆ ಗರಂ

ಗೆದ್ದವರು ಯಾರು? ಸೋತವರು ಯಾರು?

ಈ ಮೂರು ತಿಂಗಳಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳಿದ್ದವು. ಮುಖ್ಯವಾಗಿ ಲ್ಯಾಂಡ್‌ಲಾರ್ಡ್‌ ಮೇಲೆ ಸ್ಯಾಂಡಲ್‌ವುಡ್‌ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು. ದುನಿಯಾ ವಿಜಯ್‌, ರಚಿತಾ ರಾಮ್‌, ರಾಜ್‌ ಬಿ ಶೆಟ್ಟಿ, ಉಮಾಶ್ರೀ ಮುಂತಾದ ಅನುಭವಿ ಕಲಾವಿದರಿದ್ದ ಈ ಸಿನಿಮಾದಲ್ಲಿ ದುನಿಯಾ ವಿಜಯ್‌ ಪುತ್ರಿ ರಿತನ್ಯಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಆದರೂ ಅಂದುಕೊಂಡ ಮಟ್ಟಕ್ಕೆ ಈ ಸಿನಿಮಾ ಸದ್ದು ಮಾಡಲಿಲ್ಲ. ಅದರ ಜೊತೆಗೆ ರಿಲೀಸ್‌ ಆಗಿದ್ದ ಕಲ್ಟ್‌ ಚಿತ್ರದ ಕೂಡ ಸಾಧಾರಣ ಯಶಸ್ಸು ಪಡೆಯುವಲ್ಲಿ ಸಫಲವಾಯಿತು. ಈ ಗ್ಯಾಪ್‌ನಲ್ಲಿ ಉಪೇಂದ್ರ, ರಮ್ಯಾ ನಟನೆಯ ಹಳೆಯ ಸಿನಿಮಾ ರಕ್ತ ಕಾಶ್ಮೀರ ಬಂದುಹೋಗಿದ್ದು ಯಾರಿಗೂ ಗೊತ್ತೇ ಆಗಲಿಲ್ಲ.

ಫೆಬ್ರವರಿಯಲ್ಲಿ ಬಂದ ರಾಜ್‌ ಬಿ ಶೆಟ್ಟಿಯ ರಕ್ಕಸಪುರದೋಳ್‌ ಸಿನಿಮಾವು ಎಲ್ಲರ ಗಮನಸೆಳೆದಿತ್ತು. ಹಾಗೆಯೇ, ವಿಜಯ್‌ ರಾಘವೇಂದ್ರ ಅವರ ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್ ಕೂಡ. ಇವೆರಡೂ ಸಿನಿಮಾಗಳಿಗೆ ದೊಡ್ಡಮಟ್ಟದ ಗೆಲುವು ಪಡೆಯುವ ತಾಕತ್‌ ಇತ್ತಾದರೂ, ಅದ್ಯಾಕೋ ಕನ್ನಡ ಪ್ರೇಕ್ಷಕರು ಅಷ್ಟೊಂದು ಪ್ರೀತಿ ತೋರಲಿಲ್ಲ. ಇದ್ದುದರಲ್ಲಿ ರಕ್ಕಸಪುರದೋಳ್‌ ಒಂದು ಮಟ್ಟದ ಗಳಿಕೆ ಮಾಡಿದರೆ, ಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್ ಚಿತ್ರದ ತಮಿಳು ವರ್ಷನ್‌ಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿತ್ತು ಅಚ್ಚರಿ.

Landlord Review: ಉಳ್ಳವರ ಮೇಲೆ ಇಲ್ಲದವರ ಹೋರಾಟ; ಲ್ಯಾಂಡ್‌ಲಾರ್ಡ್‌ನಲ್ಲಿ ರಾಚಯ್ಯನ ಹೊಡೆದಾಟ!

ಗೆದ್ದ ಲವ್‌ ಮಾಕ್ಟೇಲ್ 3‌

ಮಾರ್ಚ್‌ 19ರಂದು ಟಾಕ್ಸಿಕ್‌ ರಿಲೀಸ್‌ ಆಗಬೇಕಿತ್ತು. ಆದರೆ ಅದು ಪೋಸ್ಟ್‌ಪೋನ್‌ ಆಗುತ್ತಿದ್ದಂತೆಯೇ, ಆ ಜಾಗವನ್ನು ಬಳಸಿಕೊಂಡ ಲವ್‌ ಮಾಕ್ಟೇಲ್‌ 3 ಸಿನಿಮಾವು ಈ ವರ್ಷದ ಮೊದಲ ಹಿಟ್‌ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಯಿತು. ಸಿಂಪಲ್‌ ಕಥೆಯೊಂದಿಗೆ ಸಿಂಪಲ್‌ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು 10 ದಿನಗಳಿಗೆ 10+ ಕೋಟಿ ರೂಪಾಯಿಗಳನ್ನು ಗಳಿಸಿದೆ. ಎರಡನೇ ವಾರಕ್ಕೆ ಕಾಲಿಟ್ಟರೂ, ಕಲೆಕ್ಷನ್‌ನಲ್ಲಿ ಪಾಸಿಟಿವ್‌ ನಂಬರ್ಸ್‌ ಕಾಣಿಸುತ್ತಿದೆ. ಹಾಗಾಗಿ, ಈ ಚಿತ್ರವನ್ನು 2026ರ ಮೊದಲ ಸೂಪರ್‌ ಹಿಟ್‌ ಸಿನಿಮಾ ಎಂದು ಕರೆಯಬಹುದಾಗಿದೆ.

ಒಟ್ಟಿನಲ್ಲಿ 70+ ಸಿನಿಮಾಗಳು ತೆರೆಕಂಡಿದ್ದರೂ, ದೊಡ್ಡ ಗೆಲುವು ಅಂತ ಸಿಕ್ಕಿರುವುದು ಒಂದೇ ಸಿನಿಮಾಕ್ಕೆ. ಮೂರ್ನಾಲ್ಕು ಸಿನಿಮಾಗಳು ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸ್‌ ತಂದುಕೊಟ್ಟಿರಬಹುದು. ಆದರೆ ಶೇ.90ಕ್ಕೂ ಅಧಿಕ ಪ್ರಮಾಣದ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯವಾಗಿ ನೆಲಕಚ್ಚಿರುವುದಂತೂ ಪಕ್ಕಾ! ಮುಂದಿನ 9 ತಿಂಗಳಿನಲ್ಲಾದರೂ, ಸ್ಯಾಂಡಲ್‌ವುಡ್‌ ಚೇತರಿಕೆ ಕಾಣಲಿದೆಯಾ? ಕಾದುನೋಡಬೇಕು.

ಪ್ರಮುಖ ಹೈಲೈಟ್ಸ್:

  • ವರ್ಷದ ಆರಂಭದ ವಾರಗಳಲ್ಲಿ ಪರಭಾಷಾ ಚಿತ್ರಗಳಿಗೆ ಹೆಚ್ಚು ಆದ್ಯತೆ ನೀಡಿದ್ದು ಕನ್ನಡ ಸಿನಿಮಾಗಳ ಓಟಕ್ಕೆ ಅಡ್ಡಿಯಾಯಿತು.
  • ಫೆಬ್ರವರಿ ತಿಂಗಳ ಮೊದಲ ವಾರದಲ್ಲೇ 12 ಸಿನಿಮಾಗಳು ಬಿಡುಗಡೆಯಾಗಿದ್ದು ಈ ವರ್ಷದ ಹೊಸ ದಾಖಲೆ.
  • ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮುಂದೂಡಲ್ಪಟ್ಟಿದ್ದರಿಂದ ಸಿಕ್ಕ ಗ್ಯಾಪ್ ಅನ್ನು 'ಲವ್ ಮಾಕ್ಟೇಲ್ 3' ಚಿತ್ರತಂಡ ಸಮರ್ಥವಾಗಿ ಬಳಸಿಕೊಂಡಿತು.
  • 2026ರ ಮೊದಲ ಸೂಪರ್ ಹಿಟ್ ಸಿನಿಮಾ ಲವ್ ಮಾಕ್ಟೇಲ್ 3. ಈ ಚಿತ್ರವು 10 ದಿನಗಳಲ್ಲಿ 10+ ಕೋಟಿ ರೂ. ಗಳಿಸಿ, ಎರಡನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
  • ಈ ವರ್ಷ ಬಿಡುಗಡೆಯಾದ 72 ಚಿತ್ರಗಳಲ್ಲಿ ಶೇ. 90ಕ್ಕೂ ಹೆಚ್ಚು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ನೆಲಕಚ್ಚಿವೆ.