ಭಾರತೀಯ ಬೆಳ್ಳಿತೆರೆಯಲ್ಲಿ ಹೊಸ ಹೊಸ ಸಾಹಸಮಯ ಪ್ರಯೋಗಗಳಿಗೆ ಭಾಷ್ಯ ಬರೆದ ಲೆಜೆಂಡರಿ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ (95) ವಿಧಿವಶರಾಗಿದ್ದಾರೆ. ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸತತ ಏಳು ದಶಕಗಳ ಕಾಲ ತಮ್ಮದೇ ಆದ ಅಳಿಸಲಾಗದ ಛಾಪು ಮೂಡಿಸಿದ್ದ ಈ ಅದ್ಭುತ ದೂರದೃಷ್ಟಿಯ ಚಲನಚಿತ್ರಕಾರನ ನಿರ್ಗಮನದೊಂದಿಗೆ ದಕ್ಷಿಣ ಭಾರತೀಯ ಚಿತ್ರರಂಗದ ಸುವರ್ಣ ಯುಗವೊಂದು ಅಂತ್ಯಗೊಂಡಂತಾಗಿದೆ.
ದಿಗ್ಗಜ ನಿರ್ದೇಶಕ ಕೆ.ವಿ. ರೆಡ್ಡಿ ಅವರ ಗರಡಿಯಲ್ಲಿ ಪಳಗಿ, 'ಮಾಯಾಬಜಾರ್'ನಂತಹ ಕ್ಲಾಸಿಕ್ ಸಿನಿಮಾದ ಕಾಲದಲ್ಲೇ ಚಲನಚಿತ್ರ ಲೋಕದ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡಿದ್ದ ಸಿಂಗೀತಂ, ಕೇವಲ ನಿರ್ದೇಶಕರಾಗಿ ಮಾತ್ರವಲ್ಲದೆ ಸಂಗೀತ ನಿರ್ದೇಶಕರಾಗಿ, ಬರಹಗಾರರಾಗಿ, ನಟರಾಗಿ ಜೀವನದ ಕೊನೆಯ ಕ್ಷಣದವರೆಗೂ ಸಿನಿಮಾವನ್ನೇ ಉಸಿರಾಗಿಸಿಕೊಂಡು ಬದುಕಿದ ಅಪರೂಪದ ಪ್ರತಿಭೆ.
ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ನಂಟು
ಸಿಂಗೀತಂ ಶ್ರೀನಿವಾಸರಾವ್ ಅವರ ವೃತ್ತಿಜೀವನದಲ್ಲಿ ಕನ್ನಡ ಚಿತ್ರರಂಗಕ್ಕೆ ಅತ್ಯಂತ ವಿಶಿಷ್ಟ ಹಾಗೂ ಗೌರವಾನ್ವಿತ ಸ್ಥಾನವಿದೆ. ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಂಚಲನ ಸೃಷ್ಟಿಸಿದ 'ಸಂಸ್ಕಾರ' (1970) ಚಿತ್ರಕ್ಕೆ ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಕನ್ನಡದ ನಂಟು ಬೆಳೆಸಿಕೊಂಡ ಸಿಂಗೀತಂ, 1982ರಲ್ಲಿ ವರನಟ ಡಾ. ರಾಜ್‌ಕುಮಾರ್ ಅಭಿನಯದ ಕ್ಲಾಸಿಕ್ ಹಿಟ್ 'ಹಾಲು ಜೇನು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಚಂದನವನ ಪ್ರವೇಶಿಸಿದರು. ಅಲ್ಲಿಂದ ಡಾ. ರಾಜ್ ಕುಟುಂಬದೊಂದಿಗೆ ಸಿಂಗೀತಂ ಅವರಿಗೆ ಆರಂಭವಾದ ಬಾಂಧವ್ಯ ಇತಿಹಾಸವಾಗಿ ಉಳಿಯಿತು.
ಅಣ್ಣಾವ್ರಿಗೆ ಒಂದಾದ ಮೇಲೊಂದರಂತೆ 'ಚಲಿಸುವ ಮೋಡಗಳು', 'ಎರಡು ನಕ್ಷತ್ರಗಳು', 'ಶ್ರಾವಣ ಬಂತು', 'ಜ್ವಾಲಾಮುಖಿ', 'ಭಾಗ್ಯದ ಲಕ್ಷ್ಮೀ ಬಾರಮ್ಮ' ಹಾಗೂ 'ಶ್ರುತಿ ಸೇರಿದಾಗ' ಮುಂತಾದ ಸಾರ್ವಕಾಲಿಕ ಹಿಟ್ ಚಿತ್ರಗಳನ್ನು ನೀಡಿ ಕನ್ನಡ ಚಿತ್ರರಂಗದ ಗಲ್ಲಾಪೆಟ್ಟಿಗೆಯಲ್ಲಿ ಇತಿಹಾಸ ಸೃಷ್ಟಿಸಿದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಡಾ. ರಾಜ್‌ಕುಮಾರ್ ಮತ್ತು ಅವರ ಮೂವರೂ ಗಂಡು ಮಕ್ಕಳಿಗೆ ಆ್ಯಕ್ಷನ್-ಕಟ್ ಹೇಳಿದ ಅಪರೂಪದ ನಿರ್ದೇಶಕ ಎಂಬ ಹೆಗ್ಗಳಿಕೆ ಸಿಂಗೀತಂ ಅವರದ್ದು.
1986ರಲ್ಲಿ 'ಆನಂದ್' ಚಿತ್ರದ ಮೂಲಕ ಶಿವಣ್ಣ ಅವರನ್ನು ಬೆಳ್ಳಿತೆರೆಗೆ ನಾಯಕನನ್ನಾಗಿ ಪರಿಚಯಿಸಿ, ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟರು. ನಂತರ ಶಿವಣ್ಣ ನಟನೆಯ ಸಸ್ಪೆನ್ಸ್-ಥ್ರಿಲ್ಲರ್ 'ಸಂಯುಕ್ತ' (1988) ಚಿತ್ರವನ್ನೂ ನಿರ್ದೇಶಿಸಿದರು. 1988ರಲ್ಲಿ 'ಚಿರಂಜೀವಿ ಸುಧಾಕರ್' ಚಿತ್ರದ ಮೂಲಕ ರಾಘಣ್ಣ ಅವರನ್ನು ನಾಯಕನಟನಾಗಿ ಕನ್ನಡ ಪ್ರೇಕ್ಷಕರಿಗೆ ಅರ್ಪಿಸಿದರು. ಬಾಲನಟನಾಗಿದ್ದ ಅಪ್ಪುಗೆ 'ಎರಡು ನಕ್ಷತ್ರಗಳು' ಎಂಬ ಅದ್ಭುತ ಚಿತ್ರವನ್ನು ನೀಡಿದ್ದರು ಸಿಂಗೀತಂ.
Singeetham Srinivasa Rao: ‘ಆನಂದ್’ ಮೂಲಕ ಶಿವಣ್ಣ ಪರಿಚಯಿಸಿದ್ದ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಇನ್ನಿಲ್ಲ
ಅಣ್ಣಾವ್ರ ಕುಟುಂಬದ ಚಿತ್ರಗಳಷ್ಟೇ ಅಲ್ಲದೆ, ಕುಮಾರ್ ಬಂಗಾರಪ್ಪ ಅವರ 'ಬೆಳ್ಳಿಯಪ್ಪ ಬಂಗಾರಪ್ಪ' ಹಾಗೂ ನವರಸ ನಾಯಕ ಜಗ್ಗೇಶ್ ಅವರ 'ಮೇಕಪ್' ಸಿನಿಮಾಗಳ ಮೂಲಕ ಕನ್ನಡದಲ್ಲಿ ಹೊಸ ಬಗೆಯ ಹಾಸ್ಯ ಮತ್ತು ತಾಂತ್ರಿಕ ಪ್ರಯೋಗಗಳನ್ನು ಅವರು ತೆರೆಗೆ ತಂದರು. ಎರಡು ಕನ್ನಡ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ ಕೀರ್ತಿಯೂ ಇವರಿಗಿದೆ.
ಬೆಂಗಳೂರಿನಲ್ಲೇ ಅರಳಿ ಜಾಗತಿಕ ಮನ್ನಣೆ ಪಡೆದ 'ಪುಷ್ಪಕ ವಿಮಾನ'
ವಾಕ್ಚಿತ್ರಗಳ ಭರಾಟೆಯ ಯುಗದಲ್ಲೇ ಯಾವುದೇ ಸಂಭಾಷಣೆ ಇಲ್ಲದ ಮೂಕಿ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದ ಬ್ಲಾಕ್‌ಬಸ್ಟರ್ ಆಗಿ ರೂಪಿಸಿದ ಅಗ್ಗಳಿಕೆ ಸಿಂಗೀತಂ ಅವರ 'ಪುಷ್ಪಕ ವಿಮಾನ'ಕ್ಕೆ ಸಲ್ಲುತ್ತದೆ. ಈ ಐತಿಹಾಸಿಕ ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೆಲ್ ಹಾಗೂ ನಗರದ ಸುತ್ತಮುತ್ತಲೇ ನಡೆದಿತ್ತು. ಈ ಕಲಾಕೃತಿಗೆ ಬಂಡವಾಳ ಹೂಡಿದ ನಿರ್ಮಾಪಕರು ಹಾಗೂ ಇದರಲ್ಲಿ ನಟಿಸಿದ ಬಹುತೇಕ ತಾರಾಬಳಗ ಕನ್ನಡಿಗರೇ ಆಗಿದ್ದರು ಎಂಬುದು ಗಮನಾರ್ಹ.
ಪ್ರಯೋಗಶೀಲತೆಯ ಮೇರು ಪರ್ವತ
ಯಾವುದೇ ಜಾನರ್ ಆಗಿರಲಿ, ಅದಕ್ಕೆ ಜೀವ ತುಂಬುವ ಅಸಾಧಾರಣ ಕಲೆಗಾರಿಕೆ ಅವರ ಸ್ವಂತಿಕೆಯಾಗಿತ್ತು. ಕಮಲ್ ಹಾಸನ್ ಅವರೊಂದಿಗಂತೂ ಸಿಂಗೀತಂ ಅವರದ್ದು ಸುವರ್ಣ ಯುಗ. 'ರಾಜ ಪಾರ್ವೈ'ನಲ್ಲಿ ದೃಷ್ಟಿಹೀನನ ಭಾವನೆಗಳನ್ನು ಕಟ್ಟಿಕೊಟ್ಟಿದ್ದು, 'ಅಪೂರ್ವ ಸಹೋದರಂಗಳ್' ಚಿತ್ರದಲ್ಲಿ ತಂತ್ರಜ್ಞಾನ ಮಿತವಾಗಿದ್ದ ಕಾಲದಲ್ಲೇ ಕಮಲ್ ಅವರನ್ನು ಕುಳ್ಳನಾಗಿ ಮಾರ್ಪಡಿಸಿ ಬೆರಗುಗೊಳಿಸಿದ್ದರು. ಇನ್ನು, ನಾಲ್ವರು ಕಮಲ್ ಹಾಸನ್ ಪಾತ್ರಗಳಿದ್ದ ಸಿಂಗೀತಂ ಅವರ 'ಮೈಕೆಲ್ ಮದನ ಕಾಮರಾಜು' ಚಿತ್ರ ಕಾಮಿಡಿ ಜಾನರ್‌ಗೆ ಒಂದು ಪಠ್ಯಪುಸ್ತಕದಂತಿದೆ,
ಅಪಘಾತದಲ್ಲಿ ಕಾಲು ಕಳೆದುಕೊಂಡ ನೃತ್ಯಗಾರಿ ಸುಧಾಚಂದ್ರನ್ ಅವರ ನೈಜ ಜೀವನದ ಕಥೆಯನ್ನು 'ಮಯೂರಿ' ಸಿನಿಮಾದ ಮೂಲಕ ಪ್ರೇರಣಾದಾಯಕವಾಗಿ ತೆರೆಗಿಳಿಸಿದರು. ನಂದಮೂರಿ ಬಾಲಕೃಷ್ಣ ಅವರೊಂದಿಗೆ ಭಾರತದ ಮೊಟ್ಟಮೊದಲ ಟೈಮ್ ಟ್ರಾವೆಲ್ ಸೈನ್ಸ್ ಫಿಕ್ಷನ್ ಚಿತ್ರ 'ಆದಿತ್ಯ 369' ಮತ್ತು ಜಾನಪದ ಮಾಯಾಲೋಕ ಸೃಷ್ಟಿಸಿದ 'ಭೈರವದ್ವೀಪಂ' ಸಿನಿಮಾಳನ್ನು ನಿರ್ದೇಶಿಸಿ, ಭಾರತೀಯ ಚಿತ್ರರಂಗವೇ ನಿಬ್ಬೆರಗಾಗುವಂತೆ ಮಾಡಿದವರು ನಮ್ಮ ಸಿಂಗೀತಂ. ಲಕ್ಷ್ಮಿ ಅಭಿನಯದ ತಮಿಳಿನ 'ದಿಕ್ಕಟ್ರ ಪಾರ್ವತಿ', 'ಮೇಡಂ', 'ಅಮೆರಿಕಾ ಅಮ್ಮಾಯಿ' ಮುಂತಾದ ಚಿತ್ರಗಳು ಅವರ ಸಾಮಾಜಿಕ ಕಳಕಳಿಯ ನಿರೂಪಣೆಗೆ ಸಾಕ್ಷಿ.
94ರ ಹರೆಯದಲ್ಲೂ ಬತ್ತದ ಸಿನಿಮೋತ್ಸಾಹ
ತೊಂಬತ್ತರ ಹರೆಯ ದಾಟಿದರೂ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿ, ಸದಾ ಯುವಕರಂತೆ ಚಟುವಟಿಕೆಯಿಂದ ಇರುತ್ತಿದ್ದ ಸಿಂಗೀತಂ, ಇತ್ತೀಚೆಗಷ್ಟೇ 94ನೇ ವಯಸ್ಸಿನಲ್ಲಿ 'ಸಿಂಗ್ ಗೀತಂ' ಎಂಬ ಸಿನಿಮಾವನ್ನು ಕೈಗೆತ್ತಿಕೊಂಡು ತಮ್ಮ ಎಂದೂ ಬತ್ತದ ಕಲಾ ದಾಹವನ್ನು ಸಾಬೀತುಪಡಿಸಿದ್ದರು. ತಾಂತ್ರಿಕ ಸೌಲಭ್ಯಗಳ ಕೊರತೆ ಇದ್ದ ಕಾಲದಲ್ಲೇ ತಮ್ಮ ಅಪರಿಮಿತ ಕಲ್ಪನಾಶಕ್ತಿಯಿಂದ ಹಾಲಿವುಡ್ ದರ್ಜೆಯ ಸಿನಿಮಾಗಳನ್ನು ಭಾರತೀಯ ತೆರೆಯ ಮೇಲೆ ಸಾಕಾರಗೊಳಿಸಿದ ಸಿಂಗೀತಂ ಶ್ರೀನಿವಾಸರಾವ್ ಅವರ ನಿಧನ, ಇಡೀ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಮತ್ತು ವಿಶೇಷವಾಗಿ ಚಂದನವನಕ್ಕೆ ಎಂದೂ ತುಂಬಲಾರದ ನಷ್ಟ.