ಭಾರತೀಯ ಚಿತ್ರರಂಗ ಕಂಡ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾಗಿದ್ದಾರೆ. ಸುಮಾರು 20ಕ್ಕೂ ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದ ಆಶಾ ಭೋಸ್ಲೆ, ಹಲವು ಪ್ರಶಸ್ತಿ, ಗೌರವಗಳಿಗೂ ಪಾತ್ರವಾಗಿದ್ದಾರೆ. ಅಂದಹಾಗೆ, ಕನ್ನಡ ಚಿತ್ರರಂಗದೊಟ್ಟಿಗೂ ಆಶಾ ಭೋಸ್ಲೆ ಅವರಿಗೆ ನಂಟು ಇತ್ತು. ಕನ್ನಡದ ಮೂರು ಹಾಡುಗಳನ್ನ ಆಶಾ ಭೋಸ್ಲೆ ಅವರು ಹಾಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ
1967ರಲ್ಲಿ ತೆರೆಕಂಡ ʻಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣʼ ಸಿನಿಮಾದ ಮೂಲಕ ಆಶಾ ಭೋಸ್ಲೆ ಅವರು ಕನ್ನಡಕ್ಕೆ ಗಾಯಕಿಯಾಗಿ ಪಾದರ್ಪಣೆ ಮಾಡಿದ್ದರು. ವಿಶೇಷವೆಂದರೆ, ಆಶಾ ಭೋಸ್ಲೆ ಅವರ ಸಹೋದರಿಯರಾದ ಲತಾ ಮಂಗೇಶ್ಕರ್ ಮತ್ತು ಉಷಾ ಮಂಗೇಶ್ಕರ್ ಅವರು ಕೂಡ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಒಂದೇ ಚಿತ್ರದ ಹಾಡುಗಳನ್ನು ಮೂವುರ ಸಹೋದರಯರು ಹಾಡಿದ್ದು ವಿಶೇಷವಾಗಿತ್ತು. ʻಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣʼ ಸಿನಿಮಾದ ʻಯಾಕೋ ಏನೋ ಸೆರ್ಗ ನಿಲ್ಲವಲ್ದು..ʼ ಹಾಡನ್ನು ಆಶಾ ಭೋಸ್ಲೆ ಹಾಡಿದ್ದರು. ಆ ಮೂಲಕ ಕನ್ನಡಕ್ಕೆ ಅಧಿಕೃತವಾಗಿ ಗಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಈ ಹಾಡಿಗೆ ಸಂಗೀತ ನೀಡಿದವರು ಲಕ್ಷ್ಮಣ್ ಬರಲೇಕರ್.
ಭಾರತೀಯ ಸಂಗೀತ ಲೋಕದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ; ಗಾಯನ ನಿಲ್ಲಿಸಿದ ʻಮೆಲೋಡಿ ಕ್ವೀನ್ʼ
ದೂರದ ಬೆಟ್ಟ
ಡಾ. ರಾಜ್‌ಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಅಭಿನಯದ ʻದೂರದ ಬೆಟ್ಟʼ ಸಿನಿಮಾವು 1973ರಲ್ಲಿ ತೆರೆಕಂಡಿತ್ತು. ಈ ಸಿನಿಮಾದ ʻಸವಾಲು ಹಾಕಿ ಸೋಲಿಸಿ ಎಲ್ಲರ..ʼ ಹಾಡನ್ನು ಆಶಾ ಭೋಸ್ಲೆ ಹಾಡಿದ್ದರು. ಜಿ ಕೆ ವೆಂಕಟೇಶ್ ಅವರು ಸಂಗೀತ ಸಂಯೋಜಿಸಿದ್ದರು. ಈ ಹಾಡಿನ ನಂತರ ಸುಮಾರು ವರ್ಷಗಳ ತನಕ ಕನ್ನಡ ಚಿತ್ರರಂಗದತ್ತ ಆಶಾ ಮುಖ ಮಾಡಿರಲಿಲ್ಲ.
ಮತ್ತೆ ಮುಂಗಾರು
ದೂರದ ಬೆಟ್ಟ ತೆರೆಕಂಡು 37 ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಆಶಾ ಭೋಸ್ಲೆ ಮರಳಿದರು. ಅದಕ್ಕೆ ಕಾರಣವಾದ ಸಿನಿಮಾದ ʻಮತ್ತೆ ಮುಂಗಾರುʼ. ರಾಘವ ದ್ವಾರ್ಕಿ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ, ರಚನಾ ಮಲ್ಹೋತ್ರಾ ಮುಖ್ಯಭೂಮಿಕೆಯಲ್ಲಿದ್ದರು. ಈ ಚಿತ್ರದ ʻಹೇಳದೇ ಕಾರಣ..ʼ ಹಾಡನ್ನು ಆಶಾ ಭೋಸ್ಲೆ ಹಾಡಿದ್ದರು. ಎಕ್ ಪೌಲ್ ರಾಜ್ ಸಂಗೀತ ನೀಡಿದ್ದ ಈ ಹಾಡು ಹಿಟ್ ಆಗಿತ್ತು. ನಿರ್ದೇಶಕ ರಾಘವ ದ್ವಾರ್ಕಿ ಅವರೇ ಈ ಹಾಡನ್ನು ಬರೆದಿದ್ದರು.
Mohammed Siraj: ಆಶಾ ಭೋಸ್ಲೆ ಮೊಮ್ಮಗಳ ಜತೆ ರಕ್ಷಾಬಂಧನ ಆಚರಿಸಿದ ಸಿರಾಜ್
ಇವಿಷ್ಟು ಕನ್ನಡ ಚಿತ್ರರಂಗದಲ್ಲಿ ಆಶಾ ಭೋಸ್ಲೆ ಅವರು ಹಾಡಿದ ಹಾಡುಗಳ ವಿವರ. ಮಂಗೇಶ್ಕರ್ ಸಹೋದರಿಯರಲ್ಲಿ ಕನ್ನಡದಲ್ಲಿ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಆಶಾ ಭೋಸ್ಲೆ ಅವರಿಗೆ ಸಲ್ಲುತ್ತದೆ. ಲತಾ ಮತ್ತು ಉಷಾ ಅವರು ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ನಂತರ ಬೇರಾವ ಕನ್ನಡ ಹಾಡುಗಳನ್ನು ಹಾಡಿಲ್ಲ.