ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಲವ್‌ ಮಾಕ್ಟೇಲ್‌ 3ʼ ಚಿತ್ರದ ಕೃತಿಚೌರ್ಯ ವಿವಾದಕ್ಕೆ‌ ಬಿತ್ತು ಬ್ರೇಕ್; ಫಿಲ್ಮ್‌ ಚೇಂಬರ್‌ನಲ್ಲಿ ನಡೆದಿದ್ದೇನು?

Love Mocktail 3 Story Dispute: ನಟ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಚಿತ್ರದ ಕಥೆಯ ಕುರಿತು ಕೇಳಿಬಂದಿದ್ದ ಕೃತಿಚೌರ್ಯದ ವಿವಾದವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಂತ್ಯಗೊಂಡಿದೆ. ಡಾ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎರಡೂ ಚಿತ್ರಗಳ ಕಥೆಗಳು ವಿಭಿನ್ನವಾಗಿವೆ ಎಂದು ನಿರ್ಧರಿಸಲಾಗಿದೆ.

ನಟ, ನಿರ್ದೇಶಕ ಡಾರ್ಲಿಂಗ್‌ ಕೃಷ್ಣ ಅವರ ಲವ್‌ ಮಾಕ್ಟೇಲ್‌ 3 ಸಿನಿಮಾವು ಕೃತಿಚೌರ್ಯದ ಆರೋಪಕ್ಕೆ ಒಳಗಾಗಿತ್ತು. ಬರಹಗಾರ ರಾಘವೇಂದ್ರ ಎಂ ನಾಯಕ್‌ ಮತ್ತು ಗುರು ದೇಶಪಾಂಡೆ ಅವರು ಈ ಆರೋಪ ಮಾಡಿದ್ದರು. "ಹಿಂದೊಮ್ಮೆ ನಾವು ಹೇಳಿದ್ದ ಕಥೆಯನ್ನು ಚಿತ್ರಕ್ಕೆ ಡಾರ್ಲಿಂಗ್‌ ಕೃಷ್ಣ ಬಳಸಿದ್ದಾರೆ" ಎಂದು ಹೇಳಿದ್ದರು. ಇದಕ್ಕೆ ಡಾರ್ಲಿಂಗ್‌ ಕೃಷ್ಣ ಕಡೆಯಿಂದಲೂ ಖಡಕ್‌ ಪ್ರತ್ಯುತ್ತರ ಬಂದಿತ್ತು. ನಂತರ ಈ ವಿವಾದವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲನ್ನೇರಿತ್ತು. ಇದೀಗ ಫಿಲ್ಮ್‌ ಚೇಂಬರ್‌ನಲ್ಲಿಯೇ ಈ ವಿವಾದಕ್ಕೆ ಬ್ರೇಕ್‌ ಹಾಕಲಾಗಿದೆ.

ಫಿಲ್ಮ್‌ ಚೇಂಬರ್‌ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?

"ದಿನಾಂಕ 27-3-2026ರಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಡಾ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಇಂದಿನ ಸಭೆಯಲ್ಲಿ ಪದಾಧಿಕಾರಿಗಳು, ನಿರ್ಮಾಪಕರ ಸಂಘ, ನಿರ್ದೆಶಕರ ಸಂಘದ ಅಧ್ಯಕ್ಷರು, ಮಾಜಿ - ಅಧ್ಯಕ್ಷರುಗಳು ಹಾಗೂ ನಿರ್ಮಾಪಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ಮಾಪಕ ಗುರು ದೇಶಪಾಂಡೆ, ನಿರ್ದೇಶಕ-ಬರಹಗಾರ ರಾಘವೇಂದ್ರ ಎಂ ನಾಯಕ್ ಹಾಗೂ ಇನ್ನಿತರರು ಹಾಜರಿದ್ದರು. ಅಧ್ಯಕ್ಷರು ಸಭೆಗೆ ಆಗಮಿಸಿರುವ ಸದಸ್ಯರನ್ನು ಸ್ವಾಗತಿಸುತ್ತಾ, ಸಭೆಯು ಉಭಯರ ಅಭಿಪ್ರಾಯ ಗಳನ್ನು ಸಂಗ್ರಹಿಸಿ ಸಭೆಯು ಕೆಳಕಂಡ ತೀರ್ಮಾನಕ್ಕೆ ಬರಲಾಯಿತು"

Love Mocktail 3: ಕಥೆ ಕದ್ದ ಆರೋಪಕ್ಕೆ ಖಡಕ್‌ ತಿರುಗೇಟು ನೀಡಿದ ನಟ ʻಡಾರ್ಲಿಂಗ್‌ʼ ಕೃಷ್ಣ - ಮಿಲನಾ ನಾಗರಾಜ್

ಈ ವಿಷಯವು ಸೌಹಾರ್ದವಾಗಿ ಇತ್ಯರ್ಥವಾಗಿರುತ್ತದೆ

"ನಿರ್ಮಾಪಕ ಡಾರ್ಲಿಂಗ್ ಕೃಷ್ಣ ಅವರು ಗುರು ದೇಶಪಾಂಡೆ ಅವರ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಅದರಿಂದ ಗುರು ದೇಶಪಾಂಡೆ ಅವರ ಮನಸ್ಸಿಗೆ ಬೇಸರವಾಗಿರುವುದರಿಂದ ಕ್ಷಮೆ ಯಾಚಿಸಿದರು. ಈ ಕಥೆಯ ತಿರುಳನ್ನು ಒಂದೇ ಮೂಲದಿಂದ ಇಬ್ಬರೂ ಸ್ಫೂರ್ತಿ ಪಡೆದಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್‌ ಟೇಲ್ 3' ಚಿತ್ರಕಥೆಯೇ ಬೇರೆ. ಗುರು ದೇಶಪಾಂಡೆ ಬಳಿಯಿರುವ ಚಿತ್ರಕಥೆಯೇ ಬೇರೆ. ಆದ್ದರಿಂದ ಇವರಿಬ್ಬರ ಕಥೆಯೂ ಬೇರೆ ಬೇರೆಯಾಗಿರುತ್ತದೆ. ಈ ವಿಷಯವು ವಾಣಿಜ್ಯ ಮಂಡಳಿಯ ಮೂಲಕ ಸೌಹಾರ್ದವಾಗಿ ಇತ್ಯರ್ಥವಾಗಿರುತ್ತದೆ" ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.

Love Mocktail 3 Review: ತಂದೆ - ಮಗಳ ಬಾಂಧವ್ಯದ ಕಥೆಯಲ್ಲಿ ಭಾವನಾತ್ಮಕ ಏರಿಳಿತಗಳು

ಉತ್ತಮ ಪ್ರದರ್ಶನ ಕಾಣುತ್ತಿರುವ ಲವ್ ಮಾಕ್ಟೇಲ್ 3 ಸಿನಿಮಾ

ಮಾ.19ರಂದು ತೆರೆಕಂಡ ʻಲವ್ ಮಾಕ್ಟೇಲ್ 3ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಧುರಂಧರ್‌ 2 ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿಯಂತೆ ಅಬ್ಬರಿಸುತ್ತಿದ್ದರೂ, ʻಲವ್ ಮಾಕ್ಟೇಲ್ 3ʼ ಜಗ್ಗದೇ ಉತ್ತಮ ಗಳಿಕೆ ಮಾಡುತ್ತಿದೆ. ಈ ಮೂಲಕ ನಿರ್ದೇಶಕ ಡಾರ್ಲಿಂಗ್‌ ಕೃಷ್ಣಗೆ ಹ್ಯಾಟ್ರಿಕ್‌ ಗೆಲುವನ್ನು ತಂದುಕೊಟ್ಟಿದೆ ಎನ್ನಬಹುದು.