ಕನ್ನಡ ಚಿತ್ರರಂಗದ ಜನಪ್ರಿಯ ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಭರ್ತಿ ಮೂರು ದಶಕಗಳು ಸಂದಿವೆ. ಹಾಡು ಬರೆಯುವುದರ ಜೊತೆಗೆ ನಿರ್ದೇಶನ, ನಟನೆ, ಸಂಭಾಷಣೆ ಹಾಗೂ ಸಂಗೀತ ನಿರ್ದೇಶನದಲ್ಲೂ ತೊಡಗಿಸಿಕೊಂಡು, ವೃತ್ತಿ ಬದುಕಿನಲ್ಲಿ 3,000ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿರುವ ಅವರ ಅಪಾರ ಸಾಧನೆ ಹಾಗೂ 50ನೇ ಜನ್ಮದಿನದ ಅಂಗವಾಗಿ "ಕವಿರತ್ನ ಸಾರ್ಥಕ ಸುವರ್ಣ" ಎಂಬ ಭವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2026ರ ಜುಲೈ 19ರಂದು ಬೆಂಗಳೂರಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಅತ್ಯಂತ ವೈಭವದಿಂದ ಈ ಕಾರ್ಯಕ್ರಮ ನಡೆಯಲಿದೆ.
ನಿರ್ದೇಶಕರು, ನಿರ್ಮಾಪಕರು ಒಗ್ಗೂಡುವ ದೊಡ್ಡ ಸಂಭ್ರಮ
ತಮ್ಮ ಸಿನಿಪಯಣದ ಕುರಿತು ಮಾತನಾಡಿದ ಡಾ. ವಿ. ನಾಗೇಂದ್ರ ಪ್ರಸಾದ್, "ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನಗೆ 'ಕವಿರತ್ನ' ಎಂಬ ಬಿರುದು ನೀಡಲಾಗಿತ್ತು. ಅದು ಹಾಗೇ ಸಿನಿಮಾಗಳಲ್ಲೂ ಮುಂದುವರೆಯಿತು. ಈಗ ಈ ಸಾರ್ಥಕ ಸುವರ್ಣ ಕಾರ್ಯಕ್ರಮದ ಹಂತಕ್ಕೆ ಬಂದು ತಲುಪಿದೆ. ವೀರಲೋಕ ಪ್ರಕಾಶನ, ವಿಷ್ಣು ಸೇನಾ ಸಮಿತಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಆಡಿಯೋ ಕಂಪನಿಗಳು ಹಾಗೂ ಎಫ್.ಎಂ ವಾಹಿನಿಗಳು ಈ ಸಂಭ್ರಮಕ್ಕೆ ಖುಷಿಯಿಂದ ಜೊತೆಯಾಗಿವೆ. ಚಿತ್ರರಂಗದ ಎಲ್ಲಾ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರು ಭಾಗಿಯಾಗುತ್ತಿರುವುದು ದೊಡ್ಡ ಸಂಭ್ರಮ ತಂದಿದೆ" ಎಂದರು.
ಈ ರೀತಿಯ ಕಾರ್ಯಕ್ರಮ ಈ ಹಿಂದೆ ನಡೆದಿರಲಿಲ್ಲ
ಈ ಕುರಿತು ಮಾಹಿತಿ ಹಂಚಿಕೊಂಡ ವೀರಕಪುತ್ರ ಶ್ರೀನಿವಾಸ್, "ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಕಾರ್ಯಕ್ರಮ ಈ ಹಿಂದೆ ನಡೆದಿರಲಿಲ್ಲ. ಬೇರೆ ಭಾಷೆಗಳಲ್ಲಿ ಸಾಹಿತ್ಯ ಮತ್ತು ಸಾಹಿತಿಗಳನ್ನು ದೊಡ್ಡ ಮಟ್ಟದಲ್ಲಿ ಗೌರವಿಸಲಾಗುತ್ತದೆ. ನಾಗೇಂದ್ರ ಪ್ರಸಾದ್ ಅವರು ಸಾವಿರ ಸಿನಿಮಾಗಳಿಗೆ ಹಾಡು ಬರೆದಿದ್ದು, ಆ ಚಿತ್ರಗಳ ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು ಹಾಗೂ ಕಲಾವಿದರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ" ಎಂದರು.
ಸಾಹಿತ್ಯ ಶ್ರೀಮಂತಗೊಳಿಸಿದವರಿಗೆ ಪ್ರಶಸ್ತಿ ಸಿಗಲಿ
ನಟ ನೆನಪಿರಲಿ ಪ್ರೇಮ್, "ಸ್ಟಾರ್ ನಟರ ಮೆರವಣಿಗೆಯ ಹಿಂದೆ ಇವರ ಬರವಣಿಗೆಯ ಶ್ರಮವಿದೆ. ನಮ್ಮ ಚಿತ್ರರಂಗದಲ್ಲಿ 3,000 ಹಾಡು ಬರೆದ ನಾಗೇಂದ್ರ ಪ್ರಸಾದ್ ಅವರಿಗೆ ಹಾಗೂ 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ-ಸಂಗೀತ ನೀಡಿರುವ ಹಂಸಲೇಖ ಅವರಂತಹ ದಿಗ್ಗಜರಿಗೆ ಪದ್ಮಶ್ರೀ ಪ್ರಶಸ್ತಿ ದೊರಕದೇ ಇರುವುದು ಶೋಚನೀಯ. ಬೇರೆ ಭಾಷೆಗಳಲ್ಲಿ ಯಾರ್ ಯಾರಿಗೋ ಪ್ರಶಸ್ತಿಗಳು ಸಿಗುತ್ತವೆ. ನಮ್ಮ ಚಿತ್ರರಂಗದ ಈ ಸಾಹಿತ್ಯ ಶ್ರೀಮಂತಿಕೆಯನ್ನು ಉಳಿಸಿದವರಿಗೆ ಸೂಕ್ತ ಗೌರವ ಮತ್ತು ಪ್ರಶಸ್ತಿಗಳು ಸಿಗಬೇಕು" ಎಂದು ಆಗ್ರಹಿಸಿದರು.
ತಾರೆಗಳ ಮೆರುಗು, 100 ಗೀತೆಗಳ ಗಾಯನ
ಈ ಮಹೋತ್ಸವದಲ್ಲಿ ಕನ್ನಡ ಚಿತ್ರರಂಗದ ಸುಮಾರು 1,000ಕ್ಕೂ ಹೆಚ್ಚು ನಟರು, ತಂತ್ರಜ್ಞರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಜೊತೆಗೆ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನಾಗೇಂದ್ರ ಪ್ರಸಾದ್ ಅವರು ಬರೆದಿರುವ 100ಕ್ಕೂ ಹೆಚ್ಚು ಜನಪ್ರಿಯ ಗೀತೆಗಳನ್ನು ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸೇರಿದಂತೆ ಅನೇಕರು ಪ್ರಸ್ತುತಪಡಿಸಲಿದ್ದಾರೆ.
ಈ ಅಪೂರ್ವ ಗೀತ ನಮನಕ್ಕೆ ಸಾಕ್ಷಿಯಾಗಲು ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್ ಜನ್ಯ, ವಿ. ಹರಿಕೃಷ್ಣ, ವಿ. ಮನೋಹರ್, ಗುರುಕಿರಣ್ ಹಾಗೂ ಸಾಹಿತಿಗಳಾದ ಕೆ. ಕಲ್ಯಾಣ್, ಕವಿರಾಜ್ ಸೇರಿದಂತೆ ಹಲವು ದಿಗ್ಗಜರು ಒಂದೇ ವೇದಿಕೆಗೆ ಬರಲಿದ್ದಾರೆ.