ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madharaasi Box Office Collection: ಕಾಲಿವುಡ್‌ನಲ್ಲೂ ಗೆಲುವಿನ ನಗೆ ಬೀರಿದ ರುಕ್ಮಿಣಿ ವಸಂತ್‌; ʼಮದರಾಸಿʼ ಮೊದಲ ದಿನ ಗಳಿಸಿದ್ದೆಷ್ಟು?

Rukmini Vasanth: ಸದ್ಯ ಪರಭಾಷೆಗಳಲ್ಲೂ ಬೇಡಿಕೆ ಕುರುಸಿಕೊಂಡಿರುವ ಕನ್ನಡತಿ ರುಕ್ಮಿಣಿ ವಸಂತ್‌ ತಮಿಳಿನಲ್ಲಿ ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ. ವರ್ಷಾರಂಭದಲ್ಲಿ ತೆರೆಕಂಡ ತಮಿಳಿನ ಏಸ್‌ ಚಿತ್ರ ವಿಫಲವಾಗಿತ್ತು. ಇದೀಗ ರೆಲೀಸ್‌ ಆಗಿರುವ, ಶಿವಕಾರ್ತಿಕೇಯನ್‌ ಜತೆಗಿನ ʼಮದರಾಸಿʼ ಗೆಲುವಿನ ಹಳಿಯಲ್ಲಿದೆ.

ಕಾಲಿವುಡ್‌ನಲ್ಲೂ ಗಮನ ಸೆಳೆದ ರುಕ್ಮಿಣಿ ವಸಂತ್‌

-

Ramesh B Ramesh B Sep 6, 2025 7:47 PM

ಚೆನ್ನೈ: 2019ರಲ್ಲಿ ತೆರೆಕಂಡ ʼಬೀರ್‌ಬಲ್‌ ತ್ರಯಾಲಜಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರುಕ್ಮಿಣಿ ವಸಂತ್‌ (Rukmini Vasanth) ಸ್ವಲ್ಪ ಗ್ಯಾಪ್‌ ಬಳಿಕ 2023ರಲ್ಲಿ ರಿಲೀಸ್‌ ಆದ ʼಸಪ್ತ ಸಾಗರದಾಚೆ ಎಲ್ಲೋʼ-ಸೈಡ್‌ ಎ ಮತ್ತು ಸೈಡ್‌ ಬಿ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತರಾದರು. ಮಧ್ಯಮ ವರ್ಗದ ಯುವತಿ, ಭಗ್ನ ಪ್ರೇಮಿ ಪಾತ್ರದಲ್ಲಿ ಮೋಡಿ ಮಾಡಿದ್ದ ಅವರು ಆ ಚಿತ್ರದ ಮೂಲಕ ಪರಭಾಷಿಕರ ಗಮನವನ್ನೂ ಸೆಳೆಯಲು ಯಶಸ್ವಿಯಾದರು. ಸದ್ಯ ಅವರು ತಮಿಳು ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ 5ರಂದು ತೆರೆಕಂಡ, ರುಕ್ಮಿಣಿ ನಟಿಸಿರುವ ಶಿವ ಕಾರ್ತಿಕೇಯನ್‌-ಎ.ಆರ್‌.ಮುರುಗದಾಸ್‌ ಕಾಂಬಿನೇಷನ್‌ನ ʼಮದರಾಸಿʼ ಸಿನಿಮಾ (Madharaasi Box Office Collection) ಇದೀಗ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

ಮೇಯಲ್ಲಿ ರಿಲೀಸ್‌ ಆದ ವಿಜಯ್‌ ಸೇತುಪತಿ ಜತೆಗೆ ʼಏಸ್‌ʼ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ರುಕ್ಮಿಣಿಗೆ ಮೊದಲ ಚಿತ್ರದಲ್ಲೇ ನಿರಾಸೆ ಎದುರಾಗಿತ್ತು. ಈ ಚಿತ್ರದಲ್ಲಿನ ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆವಾಗಿದ್ದರೂ ಸಿನಿಮಾ ಬಾಕ್ಸ್‌ ಆಫೀಸ್‌ ಮ್ಯಾಜಿಕ್‌ ಮಾಡಲು ವಿಫಲವಾಗಿತ್ತು. ಇದೀಗ 2ನೇ ಚಿತ್ರದ ಮೂಲಕ ಅವರು ಗೆಲುವಿನ ಹಳಿಗೆ ಮರಳಿದ್ದಾರೆ. ʼಸಿಕಂದರ್‌ʼ ಮೂಲಕ ಬಾಲಿವುಡ್‌ನಲ್ಲಿ ಕೈ ಸುಟ್ಟುಕೊಂಡಿದ್ದ ನಿರ್ದೇಶಕ ಎ.ಆರ್‌. ಮುರುಗದಾಸ್‌ ಈ ಬಾರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.

ಮೊದಲ ದಿನ ಕಲೆಕ್ಷನ್‌

ಕಳೆದ ವರ್ಷ ತೆರೆಕಂಡ ʼಅಮರನ್‌ʼ ಚಿತ್ರದ ಮೂಲಕ ಶಿವಕಾರ್ತಿಕೇಯನ್‌ ಬಹುದೊಡ್ಡ ಯಶಸ್ಸು ಪಡೆದುಕೊಂಡಿದ್ದರು. ಜತೆಗೆ ಅವರ ನಟನೆಗೆ ಭಾರಿ ಪ್ರಶಂಸೆಯೂ ಲಭಿಸಿತ್ತು. ಈ ಚಿತ್ರಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದರೂ ಅಚ್ಚರಿ ಇಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು. ಹೀಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಸಹಜವಾಗಿಯೇ ಕುತೂಹಲವಿತ್ತು. ಇದೇ ಕಾರಣಕ್ಕೆ ʼಮದರಾಸಿʼ ಬಗ್ಗೆ ಹಿಂದಿನಿಂದಲೂ ಬೆಟ್ಟದಷ್ಟು ನಿರೀಕ್ಷೆ ಇತ್ತು. ಇದೀಗ ರಿಲೀಸ್‌ ಆಗಿರುವ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುತ್ತಿದೆ.

ಸಾಮಾನ್ಯ ವ್ಯಕ್ತಿಯೊಬ್ಬ ಅಂಡರ್‌ ವರ್ಲ್ಡ್‌ಗೆ ಕಾಲಿಡುವ ಕಥೆಯನ್ನು ಒಳಗೊಂಡ ಈ ಸೈಕಾಲಜಿಕಲ್‌ ಆ್ಯಕ್ಷನ್ ಥ್ರಿಲ್ಲರ್‌ ಮೊದಲ ದಿನ ತಮಿಳುನಾಡಿನಲ್ಲಿ 9.92 ಕೋಟಿ ರೂ. ಗಳಿಸಿದ್ದು, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸುಮಾರು 15 ಕೋಟಿ ರೂ. ಕಲೆ ಹಾಕಿದೆ. ಇದು ತಮಿಳು ಜತೆಗೆ ಕನ್ನಡ ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲೂ ತೆರೆಕಂಡಿದೆ.

ಇದರೊಂದಿಗೆ 2025ರಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಸಿದ ಟಾಪ್‌ 10 ತಮಿಳು ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ʼಕೂಲಿʼ (44 ಕೋಟಿ ರೂ.), ʼಗುಡ್‌ ಬ್ಯಾಡ್‌ ಅಗ್ಲಿʼ (28 ಕೋಟಿ ರೂ.), ʼವಿಡಾಮುಯರ್ಚಿʼ (25 ಕೋಟಿ ರೂ.) ಮೊದಲ ಸ್ಥಾನದಲ್ಲಿದೆ. ವೀಕೆಂಡ್‌ಗಳಲ್ಲಿ ʼಮದರಾಸಿʼಯ ಕಲೆಕ್ಷನ್‌ ಹೆಚ್ಚಾಗುವ ನಿರೀಕ್ಷೆ ಇದೆ. ಸ್ಯಾಂಡಲ್‌ವುಡ್‌ನ ʼಏಳುಮಲೆʼ ಮತ್ತು ಅನುಷ್ಕಾ ಶೆಟ್ಟಿ ಅವರ ಪ್ಯಾನ್‌ ಇಂಡಿಯಾ ಚಿತ್ರ ʼಘಾಟಿʼ ಬಾಕ್ಸ್‌ ಆಫೀಸ್‌ನಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದು, ಮುಂದಿನ ದಿನಗಳಲ್ಲಿ ಗಳಿಕೆ ಎಷ್ಟಾಗಲಿದೆ ಎನ್ನುವ ಕುತೂಹಲ ಮೂಡಿದೆ.

ಮೊದಲ ಬಾರಿ ಶಿವಕಾರ್ತಿಕೇಯನ್‌-ಎ.ಆರ್‌. ಮುಗುರುದಾಸ್‌ ಒಂದಾಗಿರುವ ಈ ಚಿತ್ರದಲ್ಲಿ ವಿದ್ಯುತ್‌ ಜಮ್ಮ್ವಾಲ್‌, ಬಿಜು ಮೆನನ್‌, ವಿಕ್ರಾಂತ್‌, ಪ್ರೇಮ್‌ ಕುಮಾರ್‌, ವಿನೋದಿನಿ ವೈದ್ಯನಾಥ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.