ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕನ್ನಡಕ್ಕೆ ನಟಿ ಮಾಧುರಿ ದೀಕ್ಷಿತ್ ಎಂಟ್ರಿ; ಶಿವಣ್ಣನ ʻಎ ಫಾರ್‌ ಆನಂದ್‌ʼ ಚಿತ್ರಕ್ಕಾಗಿ ಬರ್ತಾರಾ ʻಧಕ್ ಧಕ್ʼ ಬ್ಯೂಟಿ?

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಹಾಗೂ ಶ್ರೀನಿ ನಿರ್ದೇಶನದ 'ಎ ಫಾರ್ ಆನಂದ್' ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಕರೆತರಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಗುರು-ಶಿಷ್ಯರ ಕಥೆ ಇದೆ.

ʻಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಎ ಫಾರ್ ಆನಂದ್' (A for Anand) ಸಿನಿಮಾದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಅವರನ್ನು ಕರೆತರಲು ಚಿತ್ರತಂಡ ಬಿಗ್ ಪ್ಲ್ಯಾನ್ ನಡೆಸಿದೆ. ʻಘೋಸ್ಟ್ʼ ಸಿನಿಮಾದ ಭಾರಿ ಯಶಸ್ಸಿನ ಬಳಿಕ ನಿರ್ದೇಶಕ ಶ್ರೀನಿ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಗೀತಾ ಶಿವರಾಜ್‌ಕುಮಾರ್ ಅವರು 'ಗೀತಾ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ಮಾತುಕತೆ ರಹಸ್ಯ, ಸ್ಯಾಂಡಲ್‌ವುಡ್‌ಗೆ ಮಾಧುರಿ ಬರ್ತಾರಾ?

ಚಿತ್ರತಂಡದ ಮೂಲಗಳ ಪ್ರಕಾರ, ನಿರ್ದೇಶಕ ಶ್ರೀನಿ ಅವರು ಈಗಾಗಲೇ ಮಾಧುರಿ ದೀಕ್ಷಿತ್ ಅವರನ್ನು ಸಂಪರ್ಕಿಸಿ ಕಥೆ ಹಾಗೂ ಪಾತ್ರದ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಚರ್ಚೆಗಳು ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದು, ಮಾಧುರಿ ದೀಕ್ಷಿತ್ ಅವರಿಂದ ಇನ್ನು ಅಧಿಕೃತ ಗ್ರೀನ್‌ ಸಿಗ್ನಲ್‌ ಇನ್ನಷ್ಟೇ ಸಿಗಬೇಕಿದೆ.

ಕಳೆದ ಹಲವು ವರ್ಷಗಳಿಂದ ದಕ್ಷಿಣ ಭಾರತದ ಚಿತ್ರರಂಗದಿಂದ ಮಾಧುರಿ ದೀಕ್ಷಿತ್ ಅವರಿಗೆ ಸಾಲು ಸಾಲು ಆಫರ್‌ಗಳು ಹೋಗಿದ್ದರೂ, ಯಾವುದೂ ಅಂತಿಮ ಹಂತಕ್ಕೆ ತಲುಪಿರಲಿಲ್ಲ. ಇದೀಗ ಶ್ರೀನಿ ಅವರು ಈ ಬಾಲಿವುಡ್ ದಿಗ್ಗಜ ನಟಿಯನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಒಂದೇ ತೆರೆಯಲ್ಲಿ ‌ಇಬ್ಬರು ಸ್ಟಾರ್‌ಗಳು

ಒಂದೊಮ್ಮೆ ಈ ಮಾತುಕತೆಗಳು ಫಲಪ್ರದವಾದರೆ, 'ಎ ಫಾರ್ ಆನಂದ್' ಚಿತ್ರದ ಮೂಲಕ ಶಿವರಾಜ್‌ಕುಮಾರ್ ಮತ್ತು ಮಾಧುರಿ ದೀಕ್ಷಿತ್ ಮೊದಲ ಬಾರಿಗೆ ತೆರೆಹಂಚಿಕೊಳ್ಳಲಿದ್ದಾರೆ. ದಶಕಗಳಿಂದ ತಮ್ಮದೇ ಆದ ಅಪಾರ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವ ಭಾರತೀಯ ಚಿತ್ರರಂಗದ ಇಬ್ಬರು ಹಿರಿಯ ಕಲಾವಿದರನ್ನು ಒಂದೇ ಫ್ರೇಮ್‌ನಲ್ಲಿ ನೋಡುವುದು ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ನಿಜಕ್ಕೂ ಕಣ್ಣಿನ ಹಬ್ಬವಾಗಲಿದೆ.

‘ಸೋಲ್‌ಮೇಟ್’ ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್

ಗುರು-ಶಿಷ್ಯರ ಬಾಂಧವ್ಯದ ವಿಶಿಷ್ಟ ಕಥಾಹಂದರ

'ಆನಂದ್' ಎಂಬ ಶೀರ್ಷಿಕೆ ಶಿವಣ್ಣನ ವೃತ್ತಿಜೀವನದಲ್ಲಿ ಅತ್ಯಂತ ವಿಶೇಷ ಸ್ಥಾನ ಪಡೆದಿದೆ. ಈ ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ನಿರ್ದೇಶಕ ಶ್ರೀನಿ, "ಇದು ಗುರು-ಶಿಷ್ಯರ ಅಪೂರ್ವ ಬಾಂಧವ್ಯವನ್ನು ಸಂಭ್ರಮಿಸುವ ಕಥೆ. ಶಿವರಾಜ್‌ಕುಮಾರ್ ಅವರಲ್ಲಿರುವ ಆತ್ಮೀಯತೆ ಮತ್ತು ಅವರ ವಿಶಿಷ್ಟ ಸ್ಕ್ರೀನ್ ಪ್ರೆಸೆನ್ಸ್ ಈ 'ಆನಂದ್' ಪಾತ್ರಕ್ಕೆ ಅತ್ಯಂತ ಸೂಕ್ತವಾಗಿದೆ" ಎಂದು ತಿಳಿಸಿದ್ದರು.

ಕಳೆದ ತಿಂಗಳು ಶಿವರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ಬಿಡುಗಡೆಯಾಗಿದ್ದ ಚಿತ್ರದ ಆಕರ್ಷಕ ಪ್ರೋಮೋ ಗ್ಲಿಂಪ್ಸ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲಿರುವ ಈ ಚಿತ್ರದ ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ವಿವರಗಳನ್ನು ಚಿತ್ರತಂಡ ಸದ್ಯಕ್ಕೆ ರಹಸ್ಯವಾಗಿಟ್ಟಿದೆ.