ಬೆಂಗಳೂರು, ಅ. 26: ಸದ್ಯ ಬಾಕ್ಸ್ ಆಫೀಸ್‌ನಲ್ಲಿ ʼಕಾಂತಾರ ಚಾಪ್ಟರ್ 1' (Kantara Chapter 1) ಚಿತ್ರದ ಹವಾ ಜೋರಾಗಿಯೇ ಬೀಸುತ್ತಿದೆ. ರಿಲೀಸ್ ಆಗಿ 25 ದಿನ ಕಳೆದಿದ್ದು, ನಾಗಾಲೋಟ ಮುಂದುವರಿಸಿದೆ. ನವರಾತ್ರಿಗೆ ತೆರೆಗೆ ಬಂದ ಈ ಚಿತ್ರ ದೀಪಾವಳಿ ಕಳೆದರೂ ಮುನ್ನುಗ್ಗುತ್ತಲೇ ಇದೆ. ಆ ಮೂಲಕ ಮತ್ತೊಮ್ಮೆ ಜಾಗತಿಕ ಚಿತ್ರೋದ್ಯಮವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ (Hombale Films) ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ (Rishab Shetty) ನಟಿಸುವ ಜತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಜತೆಗೆ 2 ವಿಭಾಗದಲ್ಲಿಯೂ ವಿಮರ್ಶಕರಿಂದ, ಪ್ರೇಕ್ಷಕರಿಂದ ಪೂರ್ಣಾಂಕ ಗಿಟ್ಟಿಸಿಕೊಂಡಿದ್ದಾರೆ. ಇಂತಹದ್ದೊಂದು ಅದ್ಭುತ ಕಲಾಕೃತಿ, ದೃಶ್ಯ ವೈಭವ ತೆರೆಮೇಲೆ ಮೂಡಿ ಬರಲು ಚಿತ್ರತಂಡ ಸಾಕಷ್ಟು ಶ್ರಮವಹಿಸಿದೆ. ಅದರ ಝಲಕ್ ಈಗಾಗಲೇ ಹೊರಬಿದ್ದಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಮೇಕಿಂಗ್ ವಿಡಿಯೊ ರಿಲೀಸ್ ಮಾಡಿ ರಿಷಬ್ ಮತ್ತು ತಂಡ ಚಿತ್ರಕ್ಕಾಗಿ ಯಾವ ರೀತಿ ಹಗಲು-ರಾತ್ರಿ ವ್ಯತ್ಯಾಸವಿಲ್ಲದೆ ಕಷ್ಟಪಟ್ಟಿದೆ ಎನ್ನುವುದನ್ನು ಮುಂದಿಟ್ಟಿದೆ.
ʼಕಾಂತಾರ ಚಾಪ್ಟರ್ 1' ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಅಂದರೆ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ನಾಯಕ ಬೆರ್ಮೆ ಜತೆಗೆ ಪ್ರಮುಖ ಸನ್ನಿವೇಶಗಳಲ್ಲೆಲ್ಲ ಬಂದು ಹೋಗುವ ಮಾಯಾಕಾರನಾಗಿ ಕಾಣಿಸಿಕೊಂಡಿದ್ದಾರೆ.
ಮಾಯಾಕಾರನ ಮೇಕಿಂಗ್ ವಿಡಿಯೊ:
ಅಚ್ಚರಿ ಎಂದರೆ ಮಾಯಾಕಾರ ಪಾತ್ರ ನೋಡಿದವರಿಗೆಲ್ಲ ಆರಂಭದಲ್ಲಿ ಅದು ರಿಷಬ್ ಶೆಟ್ಟಿ ಎನ್ನುವುದು ಗೊತ್ತೇ ಆಗಿಲ್ಲ. ಅಷ್ಟರಮಟ್ಟಿಗೆ ಆ ಪಾತ್ರದ ಲುಕ್, ಮ್ಯಾನರಿಸಂ ವಿಭಿನ್ನವಾಗಿದೆ. ವೃದ್ಧನ ಪಾತ್ರ ಇದಾಗಿದ್ದು, ರಿಷಬ್ ಶೆಟ್ಟಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಗೂನು ಬೆನ್ನಿನ ವೃದ್ಧನಂತೆಯೇ ಕಂಡಿದ್ದಾರೆ.
ಸದ್ಯ ರಿಷಬ್ ಮೇಕಪ್ ಆರ್ಟಿಸ್ಟ್‌ಗಳ ಕೈಚಳಕದಿಂದ ಮಾಯಾಕಾರನಾಗಿ ಬದಲಾಗುತ್ತಿರುವ ಮೇಕಿಂಗ್ ವಿಡಿಯೊ ಹೊರ ಬಿದ್ದಿದೆ. ಚಿತ್ರತಂಡದ ಬದ್ಧತೆ, ಸಿನಿಮಾ ಮೇಲಿನ ಪ್ರೀತಿಯನ್ನು ಸಾರಿ ಹೇಳಲು ಇದೊಂದೇ ವಿಡಿಯೊ ಸಾಕು ಎಂದು ನೋಡುಗರ ಅಭಿಪ್ರಾಯಪಟ್ಟಿದ್ದಾರೆ.
6 ಗಂಟೆಗಳ ಪರಿಶ್ರಮ
ಮಾಯಾಕಾರ-ಚರ್ಮ ಸುಕ್ಕುಗಟ್ಟಿದ, ಬಿಳಿಗಡ್ಡದ, ದೊಣ್ಣೆಯ ಸಹಾಯದಿಂದ ಬಾಗಿ ನಡೆಯುವ ಹಣ್ಣು ಹಣ್ಣು ಮುದುಕ. ಕಾಂತಾರ ಕಾನನದಲ್ಲಿ ಆತನ ವಾಸ. ಸಾಮಾನ್ಯವಾಗಿ ಯಾರ ಕಣ್ಣಿಗೂ ಬೀಳದ ಆತ ಪ್ರಮುಖ ಸನ್ನಿವೇಶಗಳಲ್ಲಿ, ಚಿತ್ರಕ್ಕೆ ತಿರುವು ನೀಡುವ ದೃಶ್ಯಗಳಲ್ಲಿ ಪ್ರತ್ಯಕ್ಷವಾಗುತ್ತಾನೆ. ಆತನ ಕೃಶ ದೇಹ ನೋಡಿದರೆ, ಮುಖವನ್ನು ಗಮನಿಸಿದರೆ ರಿಷಬ್ ಶೆಟ್ಟಿ ಎಂದು ಗುರುತಿಸಲು ಸಾಧ್ಯವೇ ಆಗುವುದಿಲ್ಲ. ಈ ಬದಲಾವಣೆಯ ಹಿಂದೆ 6 ಗಂಟೆಗಿಂತಲೂ ಹೆಚ್ಚಿನ ಸಮಯದ ಪರಿಶ್ರಮವಿದೆ. ಮೇಕಿಂಗ್ ವಿಡಿಯೊದಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
2024ರ ಸೆಪ್ಟೆಂಬರ್ 14ರಂದು ರಿಷಬ್ ಮಾಯಾಕಾರನಾಗಿ ಬದಲಾಗಿದ್ದಾರೆ. ಅಂದು ಮುಂಜಾನೆ 3 ಗಂಟೆಗೆ ಅವರು ಮೇಕಪ್ ಮಾಡಿಕೊಳ್ಳಲು ಆಗಮಿಸುವುದನ್ನು ತೋರಿಸುವ ಮೂಲಕ ಮೇಕಿಂಗ್ ವಿಡಿಯೊ ಆರಂಭವಾಗುತ್ತಿದೆ. 3 ಗಂಟೆಗೆ ಹಲವು ಮೇಕಪ್ ಆರ್ಟಿಸ್ಟ್‌ಗಳು ರಿಷಬ್‌ನಲ್ಲಿರುವ ಮಾಯಾಕಾರನನ್ನು ಹೊರ ತೆಗೆಯಲು ಆರಂಭಿಸುತ್ತಾರೆ. ಅಂದರೆ ಮೇಕಪ್ ಮಾಡಲು ತೊಡಗುತ್ತಾರೆ. ಕಣ್ಣಿನಿಂದ ಹಿಡಿದು, ತಲೆಕೂದಲು, ಹುಬ್ಬು, ಗಡ್ಡ, ಚರ್ಮ, ಮುಖ ಎಲ್ಲವನ್ನೂ ಬದಲಾಯಿಸಿದ್ದಾರೆ. ಇದಕ್ಕೆ ಸತತ 6 ಗಂಟೆ ತಗುಲಿದೆ. ಅಷ್ಟೂ ಹೊತ್ತು ತಾಳ್ಮೆಯಿಂದ ಕೂತು ರಿಷಬ್ ಸಹಕರಿಸಿದ್ದಾರೆ.
ಸದ್ಯ ಈ ಮೇಕಿಂಗ್ ವಿಡಿಯೊ ನೋಡಿ ರಿಷಬ್ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ಹಲವರಂತೂ ರಿಷಬ್ ಶೆಟ್ಟಿ ಪ್ರಯತ್ನಕ್ಕೆ, ಬದ್ಧತೆಗೆ ಹ್ಯಾಟ್ಯಾಫ್ ಹೇಳಿದ್ದಾರೆ. ʼʼ3 ಬಾರಿ ಚಿತ್ರ ನೋಡಿದರೂ ಮಾಯಾಕಾರನೇ ರಿಷಬ್ ಎನ್ನುವುದು ಗೊತ್ತಾಗಿಲ್ಲʼʼ ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ʼʼಬೇರೆಯದೇ ಕಲಾವಿದ ಮಾಯಾಕಾರನ ಪಾತ್ರ ಮಾಡಿರಬಹುದು ಎಂದುಕೊಂಡಿದ್ದೆ. ಮೇಕಪ್ ಆರ್ಟಿಸ್ಟ್‌ಗಳಿಗೆ ದೊಡ್ಡ ಸಲಾಂʼʼ ಎಂದಿದ್ದಾರೆ. ರಿಷಬ್‌ಗೆ ಖಂಡಿತ ಪ್ರಶಸ್ತಿ ಸಿಗಲೇ ಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.