ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಜಯ್‌ ದೇವರಕೊಂಡ ಸಿನಿಮಾಗಳ ಮೇಲೆ ಸಂಘಟಿತ ದಾಳಿ; ಆಘಾತಕಾರಿ ವಿಚಾರ ಹೊರಹಾಕಿದ ತೆಲುಗು ನಟ

Actor Vijay Deverakonda: ಚಿರಂಜೀವಿ ಅವರ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರಕ್ಕೆ ಬುಕ್‌ ಮೈ ಶೋನಲ್ಲಿ ರೇಟಿಂಗ್‌ ಬ್ಯಾನ್‌ ಮಾಡಿರುವ ಕೋರ್ಟ್ ಆದೇಶದ ಬಗ್ಗೆ ವಿಜಯ್‌ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ. 'ಡಿಯರ್ ಕಾಮ್ರೇಡ್' ಸಮಯದಿಂದಲೇ ತಮ್ಮ ಮೇಲೂ ಸಂಘಟಿತ ದಾಳಿ ನಡೆಯುತ್ತಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ತೆಲುಗು ನಟ ವಿಜಯ್‌ ದೇವರಕೊಂಡ ಅವರು ತಮ್ಮ ಸಿನಿಮಾಗಳ ಮೇಲೆ ನಡೆಯುವ ಸಂಘಟಿತ ದಾಳಿ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಅವರು ಈಗ ಈ ಬಗ್ಗೆ ಮಾತನಾಡಲು ಕಾರಣ, ಮನ ಶಂಕರ ವರಪ್ರಸಾದ್‌ ಗಾರು ಸಿನಿಮಾ. ಹೌದು, ಚಿರಂಜೀವಿ ನಟನೆಯ ಈ ಸಿನಿಮಾವು ಜನವರಿ 12ರಂದು ತೆರೆಕಾಣುತ್ತಿದ್ದು, ಕನ್ನಡದ ಮಾರ್ಕ್‌, 45, ಡೆವಿಲ್‌ ಸಿನಿಮಾಗಳ ರೀತಿಯಲ್ಲೇ ಈ ಸಿನಿಮಾವನ್ನು ಕೂಡ ಬುಕ್‌ ಮೈ ಶೋನಲ್ಲಿ ರಿವ್ಯೂ ಮತ್ತು ರೇಟಿಂಗ್‌ ನೀಡದಂತೆ ಕೋರ್ಟ್‌ನಿಂದ ಆರ್ಡರ್‌ ತರಲಾಗಿದೆ. ಈ ಬಗ್ಗೆ ವಿಜಯ್‌ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ.

ಸಂತೋಷ & ಬೇಸರ ಎರಡೂ ಆಗುತ್ತಿದೆ

"ಇದನ್ನು ನೋಡಿ ನನಗೆ ಸಂತೋಷವೂ ಆಗುತ್ತಿದೆ ಮತ್ತು ಬೇಸರವೂ ಆಗುತ್ತಿದೆ. ಅನೇಕರ ಕಠಿಣ ಪರಿಶ್ರಮ, ಕನಸುಗಳು ಮತ್ತು ಹಣವು ಯಾವುದೋ ಒಂದು ರೀತಿಯಲ್ಲಿ ಸುರಕ್ಷಿತವಾಗಿದೆ ಎಂದು ತಿಳಿಯಲು ಸಂತೋಷವಾಗುತ್ತಿದೆ. ಆದರೆ, ನಮ್ಮವರೇ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ವಾಸ್ತವವನ್ನು ಕಂಡು ಬೇಸರವಾಗುತ್ತಿದೆ. 'ಬದುಕು ಮತ್ತು ಬದುಕಲು ಬಿಡು' ಹಾಗೂ 'ಎಲ್ಲರೂ ಒಟ್ಟಾಗಿ ಬೆಳೆಯೋಣ' ಎಂಬ ತತ್ವಗಳು ಏನಾದವು" ಎಂದು ವಿಜಯ್‌ ದೇವರಕೊಂಡ ಪ್ರಶ್ನೆ ಮಾಡಿದ್ದಾರೆ.

ಚಿರಂಜೀವಿ ಸಿನಿಮಾಕ್ಕೂ ದ್ವೇಷಿಗಳಿದ್ದಾರಾ? ʻಡೆವಿಲ್‌ʼ, ʻಮಾರ್ಕ್‌ʼ, ʻ45ʼ ಹಾದಿಯನ್ನೇ ತುಳಿದ ʻಮನ ಶಂಕರ ವರಪ್ರಸಾದ್‌ ಗಾರುʼ!

ಅನೇಕ ರಾತ್ರಿಗಳು ನಿದ್ದೆಯಿಲ್ಲದೆ ಯೋಚಿಸಿದ್ದೇನೆ

"ನನ್ನ ʻಡಿಯರ್ ಕಾಮ್ರೇಡ್' ದಿನಗಳಿಂದಲೂ ಸಂಘಟಿತ ದಾಳಿಗಳ ಆಘಾತಕಾರಿ ರಾಜಕೀಯವನ್ನು ನಾನು ಮೊದಲ ಬಾರಿಗೆ ನೋಡಲಾರಂಭಿಸಿದೆ. ಒಳ್ಳೆಯ ಸಿನಿಮಾವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ನನಗೆ ಹೇಳಲಾಗಿತ್ತು. ಆದರೆ ನನ್ನ ಜೊತೆ ಸಿನಿಮಾ ಮಾಡುವ ಪ್ರತಿಯೊಬ್ಬ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಈ ಸಮಸ್ಯೆಯ ತೀವ್ರತೆ ಶೀಘ್ರದಲ್ಲೇ ಅರಿವಾಗುತ್ತದೆ. ಇಂತಹ ಕೆಲಸಗಳನ್ನು ಎಂತಹ ಜನರು ಮಾಡುತ್ತಾರೆ ಮತ್ತು ನನ್ನ ಕನಸುಗಳನ್ನು ಹಾಗೂ ನನ್ನಂತೆ ಮತ್ತು ನನ್ನ ನಂತರ ಬರುವ ಅನೇಕರ ಕನಸುಗಳನ್ನು ರಕ್ಷಿಸಲು ಇವರನ್ನು ಹೇಗೆ ಎದುರಿಸಬೇಕು ಎಂದು ನಾನು ಅನೇಕ ರಾತ್ರಿಗಳು ನಿದ್ದೆಯಿಲ್ಲದೆ ಯೋಚಿಸಿದ್ದೇನೆ" ಎಂದು ವಿಜಯ್‌ ದೇವರಕೊಂಡ ಹೇಳಿದ್ದಾರೆ.

ವಿಜಯ್‌ ದೇವರಕೊಂಡ ಟ್ವೀಟ್‌



ತೆಲುಗು ಸಿನಿಮಾಗಳಿಗೆ ಒಳ್ಳೆಯದಾಗಲಿ

"ಇದು ಈಗ ಬಹಿರಂಗವಾಗಿ ಚರ್ಚೆಗೆ ಬರುತ್ತಿರುವುದು ಮತ್ತು ಮೆಗಾಸ್ಟಾರ್‌ನಂತಹ ದೊಡ್ಡ ಮತ್ತು ಶಕ್ತಿಯುತ ವ್ಯಕ್ತಿಯ ನಟನೆಯ ಸಿನಿಮಾಗಳಿಗೂ ಇಂತಹ ಬೆದರಿಕೆ ಇದೆ ಎಂಬುದನ್ನು ನ್ಯಾಯಾಲಯವು ಈಗ ಗುರುತಿಸಿರುವುದು ನನಗೆ ಸಂತೋಷ ತಂದಿದೆ. ಇದು ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವುದಿಲ್ಲ, ಆದರೆ ಕನಿಷ್ಠ ಚಿಂತಿಸಲು ಒಂದು ವಿಷಯ ಕಡಿಮೆಯಾಗುತ್ತದೆ. ಸದ್ಯಕ್ಕೆ, ಮನ ಶಂಕರ ವರಪ್ರಸಾದ್‌ ಗಾರು ಮತ್ತು ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಉಳಿದೆಲ್ಲಾ ಸಿನಿಮಾಗಳು ಈ ರಜಾದಿನಗಳಲ್ಲಿ ನಮ್ಮನ್ನೆಲ್ಲಾ ರಂಜಿಸುವ ಮೂಲಕ ಅದ್ಭುತ ಯಶಸ್ಸು ಕಾಣಲಿ ಎಂದು ಹಾರೈಸೋಣ" ಎಂದು ವಿಜಯ್‌ ದೇವರಕೊಂಡ ಹೇಳಿದ್ದಾರೆ.