ಮೈಸೂರಿನ ಕ್ರೈಂ ಜಗತ್ತಿನ ಹಿನ್ನೆಲೆಯಲ್ಲಿನ ಕಥೆಯೊಂದಿಗೆ ಪ್ರೇಕ್ಷಕರ ಗಮನ ಸೆಳೆದಿದ್ದ ಮ್ಯಾಂಗೋ ಪಚ್ಚಾ ಸಿನಿಮಾ ಇಂದಿನಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ (Jio Hot star) ಸ್ಟ್ರೀಮಿಂಗ್ ಆರಂಭಿಸಿದೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ (Sanchit Sanjeeva) ನಾಯಕನಾಗಿ ನಟಿಸಿರುವ ‘ಮ್ಯಾಂಗೋ ಪಚ್ಚಾ’ ಅವರ ಚೊಚ್ಚಲ ಸಿನಿಮಾವಾಗಿದೆ. ಚಿತ್ರದಲ್ಲಿ ಸಂಚಿತ್ ಅವರು ಪ್ರಶಾಂತ್ ಅಲಿಯಾಸ್ ‘ಪಚ್ಚ’ (Pachcha Movie) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಜೀವನ ನಡೆಸುವ ಯುವಕನೊಬ್ಬ ಪರಿಸ್ಥಿತಿಗಳಿಂದಾಗಿ ಅಪರಾಧ ಜಗತ್ತಿನತ್ತ ಹೆಜ್ಜೆ ಇಟ್ಟು, ಕ್ರಮೇಣ ತನ್ನದೇ ಆದ ಪ್ರಭಾವವನ್ನು ಬೆಳೆಸಿಕೊಳ್ಳುವ ಪಯಣವೇ ಚಿತ್ರದ ಪ್ರಮುಖ ಕಥಾಹಂದರ.
ಯಾರು ಯಾವ ಪಾತ್ರದಲ್ಲಿ?
ಸಂಚಿತ್ ಸಂಜೀವ್ – ಪ್ರಶಾಂತ್ ಅಲಿಯಾಸ್ ‘ಪಚ್ಚ’
ಮೈಸೂರಿನ ಸಾಮಾನ್ಯ ಯುವಕನಿಂದ ಕ್ರೈಂ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುವ ವ್ಯಕ್ತಿಯಾಗಿ ಬದಲಾಗುವ ಕೇಂದ್ರ ಪಾತ್ರ. ಮಯೂರ್ ಪಟೇಲ್, ಹಂಸಾ, ಉಗ್ರಂ ಮಂಜು, ಹರಿಣಿ ಶ್ರೀಕಾಂತ್, ಜೈ ಗೋಪಿನಾಥ್ ಸೇರಿದಂತೆ ಪ್ರಮುಖ ತಾರಾಗಣ ಚಿತ್ರದಲ್ಲಿ ಕಾಣಿಸಿಕೊಂಡಿದೆ.
2000ರ ದಶಕದ ಮೈಸೂರಿನ ಕ್ರೈಂ ಜಗತ್ತಿನ ಕಥೆ
2001ರಿಂದ 2011ರ ಅವಧಿಯ ಮೈಸೂರಿನ ಹಿನ್ನೆಲೆಯಲ್ಲಿನ ಕಥೆಯನ್ನು ನಿರ್ದೇಶಕ *ವಿವೇಕ್* ಕಟ್ಟಿಕೊಟ್ಟಿದ್ದಾರೆ. ಕುಟುಂಬ, ಪ್ರೀತಿ, ಸ್ಥಳೀಯ ರಾಜಕೀಯ, ಅಪರಾಧ ಜಗತ್ತು ಮತ್ತು ಗ್ಯಾಂಗ್‌ಗಳ ನಡುವಿನ ಸಂಘರ್ಷಗಳ ನಡುವೆ ಪಚ್ಚನ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಸಿನಿಮಾ ಅನಾವರಣಗೊಳಿಸುತ್ತದೆ.
ಥಿಯೇಟರ್‌ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡ ಪ್ರೇಕ್ಷಕರಿಗೆ ಇದೀಗ ತಮ್ಮ ಮನೆಯಲ್ಲೇ ‘ಪಚ್ಚ’ನ ಮಾಸ್ ಜರ್ನಿಯನ್ನು ಕಣ್ತುಂಬಿಕೊಳ್ಳುವ ಅವಕಾಶ.
ಚಿತ್ರದಲ್ಲಿ ಸಂಚಿತ್ ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿರಲಿದೆ. ಸಂಚಿತ್ ಅವರ ಅಭಿನಯಕ್ಕೆ ಈಗಾಗಲೇ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಒಟಿಟಿ ರಂಗದಲ್ಲೂ ಸಿನಿಮಾ ಹೊಸ ಹವಾ ಸೃಷ್ಟಿಸುವ ನಿರೀಕ್ಷೆಯಿದೆ.