ಸ್ಯಾಂಡಲ್ವುಡ್ನ ಜನಪ್ರಿಯ ನಟಿಯರಾದ ರಚಿತಾ ರಾಮ್ ಹಾಗೂ ಮಾನ್ವಿತಾ ಕಾಮತ್ ಹೊಸ ಪ್ರಾಜೆಕ್ಟ್ಗಾಗಿ ಕೈಜೋಡಿಸುತ್ತಿದ್ದು, ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಈಗಾಗಲೇ ನಾಯಕಿಯಾಗಿ ಪ್ರೇಕ್ಷಕರ ಮನಗೆದ್ದಿರುವ ಮಾನ್ವಿತಾ ಕಾಮತ್ ಇದೀಗ ಪೂರ್ಣಪ್ರಮಾಣದ ನಿರ್ದೇಶಕಿಯಾಗಿ ಬಡ್ತಿ ಪಡೆಯುತ್ತಿದ್ದು, ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಮೊದಲ ಬಾರಿಗೆ ನಿರ್ದೇಶಕಿಯಾದ ಮಾನ್ವಿತಾ
ಕರಾವಳಿ ಮೂಲದ ಮಾನ್ವಿತಾ ಕಾಮತ್ ಆರಂಭದಲ್ಲಿ ಎಫ್ಎಂ ವಾಹಿನಿಯಲ್ಲಿ ರೇಡಿಯೋ ಜಾಕಿಯಾಗಿ ಅಪಾರ ಜನಪ್ರಿಯತೆ ಗಳಿಸಿದವರು. ಆ ಬಳಿಕ ನಿರ್ದೇಶಕ ದುನಿಯಾ ಸೂರಿ ಅವರ ‘ಕೆಂಡಸಂಪಿಗೆ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಭರ್ಜರಿಯಾಗಿಯೇ ಪದಾರ್ಪಣೆ ಮಾಡಿದರು. ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡ ಮಾನ್ವಿತಾ, ನಂತರ ಸೂರಿ ಅವರದ್ದೇ ನಿರ್ದೇಶನದ ಬ್ಲಾಕ್ಬಸ್ಟರ್ ‘ಟಗರು’ ಚಿತ್ರದ ‘ಪುನರ್ವಸು’ ಪಾತ್ರದ ಮೂಲಕ ಗಟ್ಟಿಯಾದ ಛಾಪು ಮೂಡಿಸಿದರು.
ಕೇವಲ ನಟನೆಯಷ್ಟೇ ಅಲ್ಲದೆ, ಕ್ಯಾಮೆರಾ ಹಿಂದಿನ ಕ್ರಾಫ್ಟ್ ಹಾಗೂ ತಾಂತ್ರಿಕ ಅಂಶಗಳ ಬಗ್ಗೆ ಮೊದಲಿನಿಂದಲೂ ಆಸಕ್ತಿ ಹೊಂದಿದ್ದ ಅವರು, ಇದೀಗ ಕಂಟೆಂಟ್ ಆಧಾರಿತ ಮಹಿಳಾ ಪ್ರಧಾನ ಕಥೆಯೊಂದಿಗೆ ನಿರ್ದೇಶಕಿಯ ಕ್ಯಾಪ್ ಧರಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಸ್ಕ್ರಿಪ್ಟ್ ಬರವಣಿಗೆ ಅಂತಿಮ ಹಂತದಲ್ಲಿದೆ ಎಂಬ ಮಾಹಿತಿ ಸಿಕ್ಕಿದೆ.
‘ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ’ : ಮಾನ್ವಿತಾ ಕಾಮತ್
ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ
ಇನ್ನೊಂದೆಡೆ, ಸ್ಯಾಂಡಲ್ವುಡ್ನ ಬ್ಯುಸಿ ನಟಿ ರಚಿತಾ ರಾಮ್ ತಮ್ಮ ಕಾರ್ಯವ್ಯಾಪ್ತಿಯನ್ನು ಪರಭಾಷೆಗಳಿಗೂ ವಿಸ್ತರಿಸಿಕೊಂಡಿದ್ದಾರೆ. ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ತಮಿಳಿನ ಬಹುನಿರೀಕ್ಷಿತ ‘ಕೂಲಿ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಗಮನ ಸೆಳೆದಿರುವ ಅವರು, ಮೆಗಾಸ್ಟಾರ್ ಚಿರಂಜೀವಿ ನಟನೆಯ ಮುಂಬರುವ ತೆಲುಗು ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ. ಹೀಗೆ ಪರಭಾಷೆಗಳಲ್ಲಿ ದೊಡ್ಡ ಸ್ಟಾರ್ಗಳ ಸಿನಿಮಾಗಳಲ್ಲಿ ಬಿಜಿಯಾಗಿರುವ ಬೆನ್ನಲ್ಲೇ, ಕನ್ನಡದಲ್ಲಿ ಮಹಿಳಾ ಕೇಂದ್ರಿತ ಹಾಗೂ ಗಟ್ಟಿತನದ ಕಥೆಯನ್ನು ಒಪ್ಪಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಕೇವಲ ಗ್ಲಾಮರ್ ಪಾತ್ರಗಳಿಗಷ್ಟೇ ಸೀಮಿತವಾಗದೆ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ರಚಿತಾ ರಾಮ್, ಮಹಿಳಾ ನಿರ್ದೇಶಕಿಯ ಜೊತೆ ಕೆಲಸ ಮಾಡುತ್ತಿರುವುದು ಸ್ಯಾಂಡಲ್ವುಡ್ನಲ್ಲಿ ಹೊಸ ಬೆಳವಣಿಗೆಯಾಗಿದೆ. ಮಾನ್ವಿತಾ ಕಾಮತ್ ಅವರ ಚೊಚ್ಚಲ ನಿರ್ದೇಶನದ ಈ ಪ್ರಾಜೆಕ್ಟ್ನ ಶೀರ್ಷಿಕೆ, ಸಂಪೂರ್ಣ ತಾರಾಗಣ ಹಾಗೂ ಚಿತ್ರೀಕರಣದ ಕುರಿತ ಅಧಿಕೃತ ಮಾಹಿತಿ ಶೀಘ್ರದಲ್ಲೇ ಅಧಿಕೃತವಾಗಿ ಹೊರಬೀಳುವ ಸಾಧ್ಯತೆ ಇದೆ.