ಕನ್ನಡ ಕಿರುತೆರೆಯ ವೀಕ್ಷಕರಿಗೆ ಭರಪೂರ ಮನೋರಂಜನೆ ನೀಡಿದ್ದ ಅತ್ಯಂತ ವಿಭಿನ್ನ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್’ ಈಗ ಎರಡನೇ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಕಿಚನ್‌ನಲ್ಲಿ ಸೃಷ್ಟಿಯಾಗುವ ವಿಚಿತ್ರ ಕ್ವಾಟ್ಲೆಗಳನ್ನು ಸಹಿಸಿಕೊಂಡು, ಸವಾಲಿನ ವಾತಾವರಣದಲ್ಲಿ ರುಚಿಕಟ್ಟಾದ ಅಡುಗೆ ಮಾಡುವ ಶೆಫ್‌ಗಳ ಕೌಶಲ್ಯವನ್ನು ಪರೀಕ್ಷಿಸುವ ಈ ಕಾರ್ಯಕ್ರಮದ ಮೊದಲ ಸೀಸನ್‌ನಲ್ಲಿ ‘ಮ್ಯೂಟೆಂಟ್ ರಘು’ ವಿನ್ನರ್ ಆಗಿದ್ದರು.
ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್’ ಶೋ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಆ ಜಾಗಕ್ಕೆ ‘ಕ್ವಾಟ್ಲೆ ಕಿಚನ್ ಸೀಸನ್ 2’ ಲಗ್ಗೆ ಇಡುತ್ತಿದೆ. ಇದೇ ವಾರಾಂತ್ಯ ಅಂದರೆ ಜೂನ್ 6 ಹಾಗೂ 7 ರಂದು ರಾತ್ರಿ 9 ಗಂಟೆಗೆ ಈ ಶೋ ಗ್ರ್ಯಾಂಡ್ ಲಾಂಚ್ ಆಗಲಿದೆ.
ತೀರ್ಪುಗಾರರಾಗಿ ಬಂದ ನಟಿ ಮೇಘನಾ ರಾಜ್
ಮೊದಲ ಸೀಸನ್‌ನಲ್ಲಿ ‘ಮ್ಯಾಡ್ ಶೆಫ್’ ಖ್ಯಾತಿಯ ಕೌಶಿಕ್ ಶಂಕರ್ ಹಾಗೂ ಹಿರಿಯ ನಟಿ ಶ್ರುತಿ ಜಡ್ಜ್ ಆಗಿದ್ದರು. ಆದರೆ ಈ ಬಾರಿ ದೊಡ್ಡ ಬದಲಾವಣೆಯಾಗಿದ್ದು, ಕೌಶಿಕ್ ಶಂಕರ್ ಜೊತೆಗೆ ನಟಿ ಮೇಘನಾ ರಾಜ್ ಅವರು ಹೊಸ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲೂ ಸಕ್ರಿಯವಾಗಿರುವ ನಟಿ ಮೇಘನಾ, ಈಗ ಕಿರುತೆರೆಯಲ್ಲೂ ಮಿಂಚುವುದಕ್ಕೆ ರೆಡಿಯಾಗಿದ್ದಾರೆ.
Meghana Raj: ಪತಿ ಚಿರಂಜೀವಿ ಸರ್ಜಾ ಕನಸು ಈಡೇರಿಸಿದ ನಟಿ ಮೇಘನಾ ರಾಜ್ ! ರಜನಿ ಜೊತೆಗಿನ ಫೋಟೋ ಶೇರ್ ಮಾಡಿದ್ಯಾಕೆ?
ನಿರೂಪಣೆಯ ಹೊಣೆ ಸುಷ್ಮಾ ಕೆ ರಾವ್‌ಗೆ ಸಿಕ್ತು
ಕ್ವಾಟ್ಲೆ ಕಿಚನ್ ಸೀಸನ್ 1ರಲ್ಲಿ ಕುರಿ ಪ್ರತಾಪ್ ಹಾಗೂ ಅನುಪಮಾ ಗೌಡ ನಿರೂಪಣೆ ಮಾಡಿದ್ದರು. ಪ್ರಸ್ತುತ ಕುರಿ ಪ್ರತಾಪ್ ಅವರು ಜೀ ಕನ್ನಡದ ‘ಜೋಡಿ ನಂ 1’ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಅನುಪಮಾ ಗೌಡ ಅವರ ಅನುಪಸ್ಥಿತಿಯಲ್ಲಿ ‘ಭಾಗ್ಯಲಕ್ಷ್ಮೀ’ ಸೀರಿಯಲ್ ಖ್ಯಾತಿಯ ಸುಷ್ಮಾ ಕೆ ರಾವ್ ಅವರು ಆಂಕರಿಂಗ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇತ್ತೀಚೆಗಷ್ಟೇ ‘ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್’ ಫಿನಾಲೆಯನ್ನು ಸುಷ್ಮಾ ಅವರೇ ನಡೆಸಿಕೊಟ್ಟಿದ್ದರು. ಅನುಪಮಾ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಸುಷ್ಮಾ ಅವರು ವೇದಿಕೆ ಏರಿದ್ದರು ಎನ್ನಲಾಗಿದ್ದು, ಕ್ವಾಟ್ಲೆ ಕಿಚನ್ ಸೀಸನ್ 2ರಲ್ಲಿ ಅನುಪಮಾ ಬರುತ್ತಾರಾ ಅಥವಾ ಸುಷ್ಮಾ ಅವರೇ ಕೊನೇ ತನಕ ಮುಂದುವರಿಯುತ್ತಾರಾ ಎಂಬ ಕುತೂಹಲ ಮೂಡಿದೆ.
ಖ್ಯಾತ ತಾರೆಯರ ದಂಡು
ಈ ಬಾರಿಯ ಸ್ಪರ್ಧಿಗಳ ಪಟ್ಟಿ ಸಾಕಷ್ಟು ಬಲಿಷ್ಠವಾಗಿದೆ. ‘ನಂದಗೋಕುಲ’ ಸೀರಿಯಲ್ ನಟಿ ಮೇಘಾ, ಕಾವ್ಯಶ್ರೀ ಗೌಡ, ‘ಬಿಗ್ ಬಾಸ್ 12’ ಸ್ಪರ್ಧಿ ರಕ್ಷಿತಾ ಶೆಟ್ಟಿ, ‘ಪವಿತ್ರ ಬಂಧನ’ ಖ್ಯಾತಿಯ ಸೂರಜ್ ಸಿಂಗ್ ಹಾಗೂ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಶೆಫ್‌ಗಳಾಗಿ ಅಡುಗೆ ಮನೆ ಪ್ರವೇಶಿಸುತ್ತಿದ್ದಾರೆ. ಇವರ ಜೊತೆಗೆ ಕ್ವಾಟ್ಲೆ ಕೊಡಲು ನವಾಜ್, ಪ್ರಿಯಾಂಕಾ, ಭವಿಷ್ ಹಾಗೂ ಕರಿಬಸಪ್ಪ ಕೂಡ ಸಾಥ್ ನೀಡಲಿದ್ದಾರೆ. ಇನ್ನು, ಗ್ರ್ಯಾಂಡ್ ಲಾಂಚ್ ಎಪಿಸೋಡ್‌ನಲ್ಲಿ ‘ಬಿಗ್ ಬಾಸ್ 11’ ವಿನ್ನರ್ ಹನುಮಂತ ಕೂಡ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಳೆದ ಸೀಸನ್‌ನಲ್ಲಿ ಕ್ವಾಟ್ಲೆ ಕೊಟ್ಟು ಗಮನ ಸೆಳೆದಿದ್ದ, ನಂತರ ಬಿಗ್ ಬಾಸ್ 12 ರ ವಿನ್ನರ್ ಆದ ‘ಗಿಲ್ಲಿ ನಟ’ ಈ ಬಾರಿಯೂ ಶೋಗೆ ಮರಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಜೂನ್ 6 ರಿಂದ ವೀಕ್ಷಕರಿಗೆ ವೀಕೆಂಡ್ ಬಿಗ್ ಎಂಟರ್ಟೈನರ್ ಸಿಗುವುದಂತೂ ಗ್ಯಾರಂಟಿ.