ತಿರುವನಂತಪುರಂ: ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮಲಯಾಳಂನ ʼಎಲ್ 2 ಎಂಪುರಾನ್ʼ (L2: Empuraan) ತೆರೆಕಂಡಿದೆ. ಬಹುಭಾಷಾ ಕಲಾವಿದ, ಮಾಲಿವುಡ್ ನಟ ಮೋಹನ್‌ಲಾಲ್ (Mohanlal) ನಟನೆಯ, ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ನಿರ್ದೇಶಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. 2 ದಿನಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಿದ ಈ ಚಿತ್ರಕ್ಕೆ ಇದೀಗ ವಿವಾದ ಅಂಟಿಕೊಂಡಿದೆ. ಚಿತ್ರದಲ್ಲಿನ ದೃಶ್ಯವೊಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಬಲಪಂಥೀಯ ರಾಜಕೀಯ ಮತ್ತು 2002ರ ಗುಜರಾತ್ ದಂಗೆಗಳ ರಹಸ್ಯ ಉಲ್ಲೇಖಗಳನ್ನು ಚಿತ್ರಿಸಿದ್ದಕ್ಕಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಮೋಹನ್‌ಲಾಲ್ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದು, ಅಂತಹ ದೃಶ್ಯಗಳನ್ನು ತೆಗೆದು ಹಾಕುವುದಾಗಿ ತಿಳಿಸಿದ್ದಾರೆ.
ವಿವಾದ ಭುಗಿಲೆದ್ದ ಬೆನ್ನಲ್ಲೇ ಈ ಬಗ್ಗೆ ಮೋಹನ್‌ಲಾಲ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಮೋಹನ್‌ಲಾಲ್ ಅವರ ಫೇಸ್‌ಬುಕ್ ಪೋಸ್ಟ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Actor Mohanlal: ಸ್ಯಾಂಡಲ್‌ವುಡ್ ನಿರ್ದೇಶಕನ ಬಳಿ ಅವಕಾಶ ಕೇಳಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಮೋಹನ್‌ಲಾಲ್; ಯಾವ ಚಿತ್ರ?
ಮೋಹನ್‌ಲಾಲ್ ಹೇಳಿದ್ದೇನು?
ʼʼಲೂಸಿಫರ್ʼ ಪ್ರಾಂಚೈಸಿಯ 2ನೇ ಭಾಗವಾದ ʼಎಂಪುರಾನ್ʼ ಚಿತ್ರದಲ್ಲಿ ಕಂಡು ಬಂದಿರುವ ಕೆಲವು ರಾಜಕೀಯ-ಸಾಮಾಜಿಕ ಸನ್ನಿವೇಶಗಳು ನನ್ನ ಅಭಿಮಾನಿಗಳ ಪೈಕಿ ಅನೇಕರಿಗೆ ನೋವುಂಟು ಮಾಡಿದೆ ಎನ್ನುವುದು ತಿಳಿದು ಬಂದಿದೆ. ಓರ್ವ ಕಲಾವಿದನಾಗಿ ನನ್ನ ಸಿನಿಮಾ ಯಾವುದೇ ರಾಜಕೀಯ ಸಿದ್ಧಾಂತ, ಧರ್ಮದ ವಿರುದ್ಧ ಸಂದೇಶ ನೀಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಾದುದು ನನ್ನ ಕರ್ತವ್ಯವೂ ಹೌದು. ಹೀಗಾಗಿ ನನ್ನ ಅಭಿಮಾನಿಗಳಿಗೆ ಉಂಟಾದ ನೋವಿಗೆ ನನಗೆ ಹಾಗೂ ಇಡೀ ʼಎಂಪುರಾನ್ʼ ತಂಡಕ್ಕೆ ವಿಷಾದವಿದೆ. ಇದರ ಜವಾಬ್ದಾರಿಯನ್ನು ಇಡೀ ಚಿತ್ರತಂಡ ಹೊತ್ತುಕೊಳ್ಳುತ್ತಿದೆ ಮತ್ತು ಅಂತಹ ದೃಶ್ಯವನ್ನು ತೆಗೆದು ಹಾಕುವುದಾಗಿ ಎಲ್ಲರೂ ಒಟ್ಟಾಗಿ ತೀರ್ಮಾನಿಸಿದ್ದೇವೆʼʼ ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, ʼʼಕಳೆದ 4 ದಶಕಗಳಲ್ಲಿ ನಾನು ನಿಮ್ಮವರಲ್ಲಿ ಒಬ್ಬನಾಗಿ ಚಿತ್ರರಂಗದಲ್ಲಿ ಸಕ್ರಿಯನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ನಂಬಿಕೆಯೇ ನನ್ನ ಶಕ್ತಿ. ಅದಕ್ಕಿಂತ ಹೊರತಾಗಿ ನಾನಿಲ್ಲʼʼ ಎಂದು ಹೇಳಿದ್ದಾರೆ.
ಏನಿದು ವಿವಾದ?
ಮಾ. 27ರಂದು ತೆರೆ ಕಂಡ ʼಎಲ್ 2: ಎಂಪುರಾನ್ʼ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸದ್ಯ ಈ ಸಿನಿಮಾದಲ್ಲಿ 2002ರ ಗುಜರಾತ್ ಗಲಭೆಯನ್ನು ಉಲ್ಲೇಖಿಸಲಾಗಿದೆ. ಜತೆಗೆ ಈ ಘಟನೆಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ಇದಕ್ಕೆ ನಿರ್ದೇಶಕ, ನಟ ಪೃಥ್ವಿರಾಜ್ ಸುಕುಮಾರನ್ ಒಪ್ಪಿದ್ದಾರೆ.
ʼಎಂಪುರಾನ್ʼ ಚಿತ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗುಜರಾತ್ ಗಲಭೆಗಳನ್ನು ಬಿಂಬಿಸುವ ಕೆಲವು ದೃಶ್ಯಗಳಿವೆ. ಈ ದೃಶ್ಯಗಳಲ್ಲಿ ಗುಜರಾತ್ ಗಲಭೆಯನ್ನು ತಿರುಚಲಾಗಿದೆ ಹಾಗೂ ಬಾಬಾ ಬಜರಂಗಿ ಹೆಸರನ್ನು ಬಳಕೆ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ.
ʼಎಂಪುರಾನ್ʼ ಚಿತ್ರದಲ್ಲಿ ಮಂಜು ವಾರಿಯರ್‌ಮ ಕನ್ನಡ ಕಿಶೋರ್, ಅಭಿಮನ್ಯು ಸಿಂಗ್, ಟೊವಿನೋ ಥಾಮಸ್, ಇಂದ್ರಜಿತ್ ಸುಕುಮಾರನ್, ಸುರಾಜ್ ವೆಂಜಾರ್‌ಮೂಡ್ ಮತ್ತಿತರರು ನಟಿಸಿದ್ದಾರೆ.