ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Mohanlal: ಸ್ಯಾಂಡಲ್‌ವುಡ್‌ ನಿರ್ದೇಶಕನ ಬಳಿ ಅವಕಾಶ ಕೇಳಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಮೋಹನ್‌ಲಾಲ್‌; ಯಾವ ಚಿತ್ರ?

L2: Empuraan: 4 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಬಹುಭಾಷಾ ನಟ, ಮಾಲಿವುಡ್‌ ಸ್ಟಾರ್‌ ಮೋಹನ್‌ಲಾಲ್‌ ಸದ್ಯ ʼಎಲ್‌ 2 ಎಂಪುರಾನ್‌ʼ ಚಿತ್ರದ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಈ ಮಧ್ಯೆ ಅವರು ಸಂದರ್ಶನವೊಂದರಲ್ಲಿ ಕನ್ನಡ ಚಿತ್ರವೊಂದರಲ್ಲಿ ಅವಕಾಶ ನೀಡುವಂತೆ ಹೇಳಿದ್ದಾರೆ. ಅದ್ಯಾವ ಚಿತ್ರ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸ್ಯಾಂಡಲ್‌ವುಡ್‌ ನಿರ್ದೇಶಕನ ಬಳಿ ಅವಕಾಶ ಕೇಳಿದ ಮೋಹನ್‌ಲಾಲ್‌

ಮೋಹನ್‌ಲಾಲ್‌.

Profile Ramesh B Mar 29, 2025 8:27 PM

ಬೆಂಗಳೂರು: 4 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಬಹುಭಾಷಾ ನಟ, ಮಾಲಿವುಡ್‌ ಸ್ಟಾರ್‌ ಮೋಹನ್‌ಲಾಲ್‌ (Actor Mohanlal) ಸದ್ಯ ʼಎಲ್‌ 2 ಎಂಪುರಾನ್‌ʼ (L2: Empuraan) ಚಿತ್ರದ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಮಲಯಾಳಂ ಮೂಲದ ಈ ಪ್ಯಾನ್‌ ಇಂಡಿಯಾ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡುತ್ತಿದೆ. ಮಾಲಿವುಡ್‌ನ ಮತ್ತೊಬ್ಬ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ (Prithviraj Sukumaran) ನಿರ್ದೇಶಿಸಿರುವ ಈ ಪಾಲಿಟಿಕಲ್‌ ಆ್ಯಕ್ಷನ್‌ ಡ್ರಾಮ ರಿಲೀಸ್‌ ಆದ 2 ದಿನಗಳಲ್ಲಿ 100 ಕೋಟಿ ರೂ. ಕ್ಲಬ್‌ ಸೇರುವ ಮೂಲಕ ಇತಿಹಾಸ ಬರೆದಿದೆ. ಇಂತಿಪ್ಪ ನಟ ಕನ್ನಡದ ನಿರ್ದೇಶಕರೊಬ್ಬರ ಬಳಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದರೆ ನಂಬುತ್ತೀರಾ? ಹೌದು, ಇಂತಹದ್ದೊಂದು ಸ್ವಾರಸ್ಯಕರ ಘಟನೆ ನಡೆದಿದೆ.

1980ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಸುಮಾರು 4 ದಶಕಗಳಿಂದಲೂ ಸಕ್ರಿಯರಾಗಿರುವ ಮೋಹನ್‌ಲಾಲ್‌ ಇತ್ತೀಚೆಗೆ ನಡೆದ ʼಎಲ್‌ 2 ಎಂಪುರಾನ್‌ʼ ಚಿತ್ರದ ಪ್ರಮೋಷನ್‌ ವೇಳೆ ಕನ್ನಡ ಚಿತ್ರವೊಂದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮೋಹನ್‌ಲಾಲ್‌ ಅವರ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: L2: Empuraan Movie: 'ಎಲ್ 2 ಎಂಪುರಾನ್' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ

ಮೋಹನ್‌ಲಾಲ್‌ ಹೇಳಿದ್ದು ಯಾವ ಚಿತ್ರದ ಬಗ್ಗೆ?

2022ರಲ್ಲಿ ತೆರೆಕಂಡು ದೇಶಾದ್ಯಂತ ಸಂಚಲನ ಸೃಷ್ಟಿಸಿದ ಕನ್ನಡ ಚಿತ್ರ ʼಕಾಂತಾರʼ. ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿ, ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿದ ಈ ಸಿನಿಮಾಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿ 400 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್‌ ಮಾಡಿದ್ದ ಈ ಚಿತ್ರ ವಿಮರ್ಶಕರ ಗಮನವನ್ನೂ ಸೆಳೆದು ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು. ಹೀಗೆ ಭಾಷೆಯ ಗಡಿಯನ್ನೂ ಮೀರಿ ಸಂಚಲನ ಸೃಷ್ಟಿಸಿದ ʼಕಾಂತಾರʼದ ಪ್ರೀಕ್ವೆಲ್‌ ಈಗ ತಯಾರಾಗುತ್ತಿದೆ.

ರಿಷಬ್‌ ಶೆಟ್ಟಿ ನಿರ್ದೇಶಿಸುತ್ತಿರುವ ʼಕಾಂತಾರ: ಚಾಪ್ಟರ್‌ 1ʼ ಚಿತ್ರದಲ್ಲಿ ನಾಯಕನಾಗಿಯೂ ಅವರು ಮುಂದುವರಿಯುತ್ತಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಗುಟ್ಟು ರಟ್ಟಾಗಿಲ್ಲ. ಈ ಚಿತ್ರದಲ್ಲಿ ಮೋಹನ್‌ಲಾಲ್‌ ನಟಿಸುತ್ತಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹಬ್ಬಿದೆ. ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಘೋಷಣೆಯಾಗಿಲ್ಲ. ಒಟಿಟಿಪ್ಲೇ ಸಂದರ್ಶನದಲ್ಲಿ ಈ ಬಗ್ಗೆ ಮೋಹನ್‌ಲಾಲ್‌ ಬಳಿ ಪ್ರಶ್ನಿಸಲಾಯಿತು.

ʼಕಾಂತಾರ ಚಾಪ್ಟರ್‌ 1ʼ ಚಿತ್ರದಲ್ಲಿ ನಟಿಸುವ ಬಗ್ಗೆ ಕೇಳಿಬರುತ್ತಿರುವ ಗಾಳಿಸುದ್ದಿ ಬಗ್ಗೆ ಮಾತನಾಡಿ, ʼʼಕಾಂತಾರʼದಲ್ಲಿ ನನಗೊಂದು ಅವಕಾಶ ಕೊಡಿ. ಈ ಬಗ್ಗೆ ನೀವೂ ಸ್ವಲ್ಪ ಹೇಳಿ. ನಾನು ಕೆಟ್ಟ ನಟ ಅಲ್ಲ ಎಂದುಕೊಂಡಿದ್ದೇನೆʼʼ ಎಂದಿದ್ದಾರೆ. ಆ ಮೂಲಕ ಚಿತ್ರದ ಭಾಗವಾಗಿದ್ದಾರ ಎನ್ನುವ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಅಡ್ಡ ಗೋಡೆ ಮೇಲೆ ದೀಪವಿರಿಸಿದಂತೆ ಉತ್ತರಿಸಿದ್ದಾರೆ.

ʼಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಶೂಟಿಂಗ್‌ ಅನ್ನು ರಿಷಬ್‌ ಶೆಟ್ಟಿ ಕಳೆದ ವರ್ಷ ಕುಂದಾಪುರದಲ್ಲಿ ಆರಂಭಿಸಿದ್ದರು. ಇದೇ ವೇಳೆ ಮೋಹನ್‌ಲಾಲ್‌ ಅಲ್ಲೇ ಸಮೀಪದ ಕೊಲ್ಲೂರು ದೇಗುಲಕ್ಕೆ ತೆರಳಿದ್ದರು. ಆಗ ರಿಷಬ್‌ ಶೆಟ್ಟಿ ದಂಪತಿ ಮೋಹನ್‌ಲಾಲ್‌ ಅವರನ್ನು ಭೇಟಿಯಾಗಿದ್ದರು. ಅದಾದ ಬಳಿಕ ಮೋಹನ್‌ಲಾಲ್‌ ಈ ಚಿತ್ರದ ಭಾಗವಾಗುತ್ತಿದ್ದಾರೆ ಎನ್ನುವ ವದಂತಿ ಹರಡಿದೆ.