ತಿರುವನಂತಪುರಂ: ಕ್ರೈಂ ಥ್ರಿಲ್ಲರ್ ಚಿತ್ರಗಳ ಮೂಲಕ ಇಡೀ ಭಾರತೀಯ ಸಿನಿರಸಿಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ, ಸೀಟಿನಂಚಿಗೆ ಕೂರಿಸಿಬಿಡುವ ಮಲಯಾಳಂ ಚಿತ್ರರಂಗದಿಂದ ಮಹತ್ವದ ಅಪ್‌ಡೇಟ್ ಹೊರಬಂದಿದೆ. ಹಲವು ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ʼದೃಶ್ಯಂ 3ʼ (Drishyam 3) ಸಿನಿಮಾದ ಶೂಟಿಂಗ್ ಆರಂಭಿಸುವ ದಿನಾಂಕವನ್ನು ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ. ಬಹುಭಾಷಾ ನಟ, ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) ಮತ್ತು ನಿರ್ದೇಶಕ ಜೀತು ಜೋಸೆಫ್ (Jeethu Joseph) ಜೋಡಿಯ ʼದೃಶ್ಯಂʼ ಮತ್ತು ʼದೃಶ್ಯಂ 2ʼ ಸರಣಿ ಚಿತ್ರಗಳು ಈಗಾಗಲೇ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ರಿಮೇಕ್ ಸೂಪರ್ ಹಿಟ್ ಆಗಿವೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಈ ಚಿತ್ರದ 3ನೇ ಭಾಗಕ್ಕಾಗಿ ಹಲವರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಅವರಿಗೆ ಈಗ ಗುಡ್‌ನ್ಯೂಸ್ ಹೊರ ಬಿದ್ದಿದೆ.
ಈ ಬಗ್ಗೆ ಸ್ವತಃ ಮೋಹನ್ ಲಾಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ʼದೃಶ್ಯಂ 3ʼ ಶೂಟಿಂಗ್ ಆರಂಭವಾಗಲಿದೆ. ಅದಾಗ್ಯೂ ನಿರ್ದಿಷ್ಟ ದಿನಾಂಕವನ್ನು ಘೋಷಿಸಿಲ್ಲ. ಆ ಮೂಲಕ ಕುತೂಹಲವನ್ನು ಹಾಗೇ ಕಾಯ್ದುಕೊಳ್ಳಲಾಗಿದೆ. ಜೋರ್ಜ್ ಕುಟ್ಟಿಯಾಗಿ ಮತ್ತೊಮ್ಮೆ ಮೋಹನ್ ಲಾಲ್ ಕಾಣಿಸಿಕೊಳ್ಳಲಿದ್ದು, ಈ ಬಾರಿ ಯಾವ ರೀತಿಯ ಕಥೆ ಹೇಳಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.
ʼದೃಶ್ಯಂ 3ʼ ಚಿತ್ರದ ಟೀಸರ್:
ಈ ಸುದ್ದಿಯನ್ನೂ ಓದಿ: Drishyam 3 Update: 'ದೃಶ್ಯಂ 3' ಕುರಿತು ನಟ ಮೋಹನ್ ಲಾಲ್ ಕೊಟ್ರು ಬಿಗ್ ಅಪ್‌ಡೇಟ್
ಮೂಲಗಳ ಪ್ರಕಾರ ಮಲಯಾಳಂ ಜತೆಗೆ ಹಿಂದಿಯಲ್ಲೂ ಈ ಸಿನಿಮಾ ತಯಾರಾಗಲಿದೆ. ಹಿಂದಿಯಲ್ಲಿ ನಾಯಕನಾಗಿ ಅಜಯ್ ದೇವಗನ್ ಈ ಭಾಗದಲ್ಲಿಯೂ ಮುಂದುವರಿದಿದ್ದಾರೆ. ಏಕಕಾಲಕ್ಕೆ ಈ ಚಿತ್ರಗಳ ಶೂಟಿಂಗ್ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ʼʼಗಾಂಧಿ ಜಯಂತಿ ದಿನವಾದ ಅ. 2ರಂದು ಹಿಂದಿಯ ʼದೃಶ್ಯಂ 3ʼ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಸುಮಾರು 3 ತಿಂಗಳ ಸುದೀರ್ಘ ಅವಧಿಯಲ್ಲಿ ಚಿತ್ರೀಕರಣ ನಡೆಯಲಿದೆ. ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಶೂಟಿಂಗ್ ನಡೆಸಲಾಗುತ್ತದೆ. ಅಜಯ್ ದೇವಗನ್ ಈಗಾಗಲೇ ಡೇಟ್ ನೀಡಿದ್ದಾರೆʼʼ ಎಂದು ವರದಿಂದು ತಿಳಿಸಿದೆ.
ವಿದೇಶ ಭಾಷೆಗಳಿಗೂ ರಿಮೇಕ್ ಆದ ʼದೃಶ್ಯಂʼ
ಸಾಮಾನ್ಯ ವ್ಯಕ್ತಿಯೊಬ್ಬ (ಜೋರ್ಜು ಕುಟ್ಟಿ) ತನ್ನ ಕುಟುಂಬವನ್ನು ಕಾಪಾಡಲು ಹೋರಾಡುವ ಕಥೆಯೇ ʼದೃಶ್ಯಂʼ. 4ನೇ ತರಗತಿವರೆಗೆ ಮಾತ್ರ ಓದಿದ ಜೋರ್ಜು ಕುಟ್ಟಿ ಇಡೀ ಪೊಲೀಸ್ ವ್ಯವಸ್ಥೆಗೆ ಚಳ್ಳೆ ಹಣ್ಣು ತಿನ್ನಿಸಿ ತನ್ನ ಮನೆಯವರನ್ನು ರಕ್ಷಿಸುವ ಕಥೆಯನ್ನು ಎರಡು ಭಾಗಗಳಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ. ಮಲಯಾಳಂನ ಮೊದಲ ಭಾಗ 2013ರಲ್ಲಿ ತೆರೆಕಂಡರೆ, ʼದೃಶ್ಯಂ 2ʼ 2021ರಲ್ಲಿ ರಿಲೀಸ್ ಆಗಿತ್ತು. ಮೋಹನ್ ಲಾಲ್ ಜತೆಗೆ ಮೀನಾ, ಆಶಾ ಶರತ್, ಸಿದ್ದಿಕ್ ಮತ್ತಿತರರು ನಟಿಸಿದ್ದಾರೆ. ಈ ಎರಡೂ ಭಾಗಗಳು ಕನ್ನಡ, ತಮಿಳು, ತೆಲುಗು, ಹಿಂದಿಗೆ ರಿಮೇಕ್ ಆಗಿವೆ. ಅಲ್ಲದೆ ಸಿಂಹಳ, ಚೈನೀಸ್, ಇಂಡೋನೇಷ್ಯಾ ಮತ್ತು ಕೊರಿಯಾ ಭಾಷೆಗಳಲ್ಲಿಯೂ ತಯಾರಾಗಿವೆ. ಕನ್ನಡದಲ್ಲಿ ರವಿಚಂದ್ರನ್, ನವ್ಯಾ ನಾಯರ್, ಆಶಾ ಶರತ್, ಪ್ರಭು, ಅಚ್ಯುತ್ ಕುಮಾರ್ ಮತ್ತಿತರರು ಅಭಿನಯಿಸಿದ್ದಾರೆ.