ಬೆಂಗಳೂರು, ಅಕ್ಟೋಬರ್ 08: ಸೆಟ್ಟೇರಿದಾಗಿನಿಂದಲೇ ಭಾರಿ ಕುತೂಹಲ ಕೆರಳಿಸಿದ್ದ ಈ ವರ್ಷದ ಬಹುನಿರೀಕ್ಷಿತ ಚಿತ್ರ ʼಕಾಂತಾರ: ಚಾಪ್ಟರ್ 1' (Kantara: Chapter 1) ವಿವಿಧ ಭಾಷೆಗಳಲ್ಲಿ ತೆರೆಕಂಡಿದೆ. ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishab Shetty) ಕಟ್ಟಿಕೊಟ್ಟ ಹೊಸದೊಂದು ಪ್ರಪಂಚಕ್ಕೆ ವೀಕ್ಷಕರು ಮನಸೋತಿದ್ದು, ಥಿಯೇಟರ್‌ನಲ್ಲಿರುವಷ್ಟು ಹೊತ್ತು ನೇರ 4-5ನೇ ಶತಮಾನಕ್ಕೆ ತೆರಳುತ್ತಾರೆ. ತೆರೆಮೇಲೆ ಮೂಡುವ ಈಶ್ವರನ ಹೂತೋಟ, ಬಾಂಗ್ರಾ ಸಾಮ್ರಾಜ್ಯದಲ್ಲಿ ವಿಹರಿಸುತ್ತಾರೆ. ಅಷ್ಟರ ಮಟ್ಟಿಗೆ ಚಿತ್ರ ಹೊಸದೊಂದು ಅನುಭೂತಿ ನೀಡುತ್ತಿದೆ. ಜತೆಗೆ ಬಾಕ್ಸ್ ಆಫೀಸ್‌ನಲ್ಲಿಯೂ ಅಬ್ಬರಿಸುತ್ತಿದ್ದು, ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದೆ. ಕರ್ನಾಟಕ ಮಾತ್ರವಲ್ಲ ದೇಶ, ವಿದೇಶದಲ್ಲೂ ಮೆಚ್ಚುಗೆ ಪಡೆಯುತ್ತಿದ್ದು, ಜನ ಸಾಮಾನ್ಯರ ಜತೆಗೆ ವಿವಿಧ ಚಿತ್ರರಂಗದ ಗಣ್ಯರು ಹೊಗಳುತ್ತಿದ್ದಾರೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನಕ್ಕೆ ಪೂರ್ಣಾಂಕ ನೀಡುತ್ತಿದ್ದಾರೆ. ಈ ಮಧ್ಯೆ ಮಲಯಾಳಂ ಸೂಪರ್ ಸ್ಟಾರ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಹುಭಾಷಾ ಕಲಾವಿದ ಮೋಹನ್‌ಲಾಲ್ (Actor Mohanlal) ʼಕಾಂತಾರ: ಚಾಪ್ಟರ್ 1' ಚಿತ್ರದ ಬಗ್ಗೆ ಈ ಹಿಂದೆ ಆಡಿದ್ದ ಮಾತು ಮುನ್ನೆಲೆಗೆ ಬಂದಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೋಹನ್‌ಲಾಲ್, 'ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ತಮಗೊಂದು ಪಾತ್ರ ನೀಡುವಂತೆ ರಿಷಬ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಈ ಹಿಂದೆ ಅವರು ಹೇಳಿದ್ದ ಈ ಮಾತು ಮತ್ತೆ ವೈರಲ್ ಆಗುತ್ತಿದೆ.
ಈ ಸುದ್ದಿಯನ್ನೂ ಓದಿ: Actor Mohanlal: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬೆನ್ನಲ್ಲೇ ಪ್ರಧಾನಿ ಮೋದಿಗೆ ಥ್ಯಾಂಕ್ಸ್ ಹೇಳಿದ ಮೋಹನ್‌ಲಾಲ್; ವೈರಲ್ ಪೋಸ್ಟ್‌ನಲ್ಲೇನಿದೆ?
2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಿದ್ದಲ್ಲದೆ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಭಾರಿ ಸಂಚಲನ ಮೂಡಿಸಿದ್ದ ರಿಷಬ್ ಶೆಟ್ಟಿ-ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್‌ನ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಈ ʼಕಾಂತಾರ: ಚಾಪ್ಟರ್ 1'. ಈ ಕಾರಣಕ್ಕೆ ಘೋಷಣೆಯಾದಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕುತೂಹಲ ಕೆರಳಿಸಿತ್ತು. ರಿಷಬ್ ಶೆಟ್ಟಿ ಕಲಾವಿದರ ವಿವರವನ್ನು ಗುಟ್ಟಾಗಿ ಇರಿಸಿ ಶೂಟಿಂಗ್ ಆರಂಭಿಸಿದ್ದರು. ಅವರು ನಟಿಸಿಸುವುದು ಬಿಟ್ಟರೆ ಬೇರೆ ಯಾರೆಲ್ಲ ಅಬಿನಯಿಸುತ್ತಿದ್ದಾರೆ ಎನ್ನುವ ವಿವರ ಹೊರ ಬಿದ್ದಿರಲಿಲ್ಲ. ಹೀಗಾಗಿ ಬೇರೆ ಬೇರೆ ಚಿತ್ರರಂಗದ ಘಟಾನುಘಟಿಗಳ ಹೆಸರು ಕೇಳಿ ಬಂದಿತ್ತು. ಈ ಪೈಕಿ ವ್ಯಾಪಕ ಪ್ರಚಾರ ಪಡೆದಿದ್ದ ಹೆಸರು ಮೋಹನ್‌ಲಾಲ್ ಅವರದ್ದು.
ರಿಷಬ್ ಶೆಟ್ಟಿ ತಂದೆಯ ಪಾತ್ರದಲ್ಲಿ ಮೋಹನ್‌ಲಾಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಇದನ್ನೇ ಒಟಿಟಿಪ್ಲೇ ವೆಬ್‌ಸೈಟ್ ನಡೆಸಿದ ಸಂದರ್ಶನದಲ್ಲಿ ಕೇಳಲಾಗಿತ್ತು. ತಾವು ʼಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ನಟಿಸುತ್ತಿದ್ದೀರಾ? ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಮೋಹನ್‌ಲಾಲ್, ʼʼಇದುವರೆಗೆ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ದಯವಿಟ್ಟು ಅವರ ಚಿತ್ರದಲ್ಲಿ ನನ್ನನ್ನೂ ಸೇರಿಸಿಕೊಳ್ಳುವಂತೆ ಹೇಳಿ. ನನಗೊಂದು ಪಾತ್ರ ನೀಡಿ. ನಾನು ಕೆಟ್ಟ ನಟ ಅಲ್ಲ ಎಂದುಕೊಂಡಿದ್ದೇನೆʼʼ ಎಂದು ಹೇಳಿದ್ದರು. ಸದ್ಯ ಅವರು ಈ ಮಾತು ಮತ್ತೊಮ್ಮೆ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
ಕೆಲವೇ ದಿನಗಳ ಹಿಂದೆ ಮೋಹನ್‌ಲಾಲ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರದಾನ ಮಾಡಿದೆ. ʼಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ಮೋಹನ್‌ಲಾಲ್ ಬದಲು ಮಲಯಾಳಂನ ಮತ್ತೋರ್ವ ಹಿರಿಯ ನಟ ಜಯರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜಶೇಖರ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಚಿತ್ರದುದ್ದಕ್ಕೂ ಅವರ ಪಾತ್ರ ಸಾಗುತ್ತದೆ.