Kantara Chapter 1: 'ಕಾಂತಾರ: ಚಾಪ್ಟರ್ 1' ಚಿತ್ರವನ್ನು ಹಾಡಿ ಹೊಗಳಿದ ದೆಹಲಿ ಸಿಎಂ ರೇಖಾ ಗುಪ್ತಾ
ಯಶಸ್ಸಿನ ಉತ್ತುಂಗದಲ್ಲಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡವನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಭೇಟಿಯಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼಕಾಂತಾರʼ ಕನ್ನಡ ಜತೆಗೆ ತೆಲುಗು, ತಮಿಳು, ಮಲಯಾಳಂ, ಬೆಂಗಾಳಿ ಹಾಗೂ ಹಿಂದಿಯಲ್ಲಿಯೂ ಬಿಡುಗಡೆಯಾಗಿದೆ. ಸದ್ಯ ಸಿನಿ ರಸಿಕರು ಈ ಚಿತ್ರದ ಬಗ್ಗೆ ವ್ಯಾಪಕವಾಗಿ ಚರ್ಚಿಸುತ್ತಿದ್ದಾರೆ.

ದೆಹಲಿ ಸಿಎಂ ಭೇಟಿ ಮಾಡಿದ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡ -

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಇಡೀ ಭಾರತವೇ ತಿರುಗಿ ನೋಡುವಂತ ಸಿನಿಮಾವನ್ನು ಮಾಡುತ್ತಿದೆ ಎಂದರೆ ತಪ್ಪಲ್ಲ. ಇತ್ತೀಚೆಗೆ ಬಿಡುಗಡೆಯಾದ ʼಸು ಫ್ರಂ ಸೋʼ, ʼಏಳುಮಳೆʼಯಿಂದ ಹಿಡಿದು ಕಳೆದ ವರ್ಷ ಬಿಡುಗಡೆಯಾದ ʼಮ್ಯಾಕ್ಸ್ʼ, ʼಬಘೀರʼ, ʼಭೈರತಿ ರಣಗಲ್ʼ ಸೇರಿದಂತೆ ಕನ್ನಡದ ಇತರ ಚಿತ್ರಗಳು ಸಿನಿ ಪ್ರಿಯರನ್ನು ಸೆಳೆದಿದೆ. ಇದೀಗ ಅಕ್ಟೋಬರ್ 2ರಂದು ಬಿಡುಗಡೆಯಾದ ʼಕಾಂತಾರ: ಚಾಪ್ಟರ್ 1ʼ ಇದೇ ಸಾಲಿಗೆ ಸೇರಿದ್ದು, ʼಕೆಜಿಎಫ್ʼ, ʼಕೆಜಿಎಫ್ 2ʼ ಮತ್ತು ʼಕಾಂತಾರʼ ಸಿನಿಮಾ ಮೂಲಕ ಬಾಕ್ಸ್ ಆಫೀಸ್ ನಡುಗಿಸಿದ್ದ ಹೊಂಬಾಳೆ ಫಿಲ್ಮ್ಸ್ ಸದ್ಯ ʼಕಾಂತಾರ ಚಾಪ್ಟರ್ 1ʼ ಚಿತ್ರದಿಂದ ಮತ್ತೊಮ್ಮೆ ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.
ʼಕಾಂತಾರʼ ಕನ್ನಡ, ತೆಲುಗು, ತಮಿಳು, ಬೆಂಗಾಳಿ, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ. ಸದ್ಯ ಸಿನಿ ರಸಿಕರು ಈ ಚಿತ್ರದ ಬಗ್ಗೆ ಚರ್ಚಿಸುತ್ತಿರುವಷ್ಟು ಬೇರೆ ಯಾವುದೇ ಚಿತ್ರದ ಕುರಿತೂ ಸಹ ಚರ್ಚಿಸುತ್ತಿಲ್ಲ ಎನ್ನಬಹುದು. ಹೀಗೆ ಅಬ್ಬರಿಸುತ್ತಿರುವ ʼಕಾಂತಾರʼ ಚಿತ್ರದ ಕುರಿತು ಬೇರೆ ಚಿತ್ರರಂಗದ ಸಿನಿ ಪ್ರೇಮಿಗಳು ಹಾಗೂ ವಿಮರ್ಶಕರು ಮಾತ್ರವಲ್ಲದೆ, ಇತರ ಭಾಷೆಯ ಸ್ಟಾರ್‌ಗಳೂ ಮಾತನಾಡುತ್ತಿದ್ದಾರೆ. ಇದಕ್ಕೆ ನೆರೆ ರಾಜ್ಯದ ರಾಜಕೀಯ ನಾಯಕರು ಸೇರಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಸಿಎಂ ರೇಖಾ ಗುಪ್ತಾ ʼಕಾಂತಾರʼ ತಂಡವನ್ನು ಅಭಿನಂದಿಸಿದ್ದಾರೆ.
ದೇಶದಾದ್ಯಂತ ಸೂಪರ್ ಹಿಟ್ ಆಗಿ ಯಶಸ್ಸಿನ ಉತ್ತುಂಗದಲ್ಲಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರ ತಂಡವನ್ನು ರೇಖಾ ಗುಪ್ತಾ ಅವರು ಭೇಟಿಯಾಗಿದ್ದಾರೆ.
ದೆಹಲಿ ಸಿಎಂ ರೇಖಾ ಗುಪ್ತಾ ಅವರ ಎಕ್ಸ್ ಪೋಸ್ಟ್:
Met Rishab Shetty, actor and director of Kantara Chapter 1 and his team at the Mukhyamantri Janseva Sadan today.
— Rekha Gupta (@gupta_rekha) October 7, 2025
The film beautifully reflects India’s spiritual depth and cultural richness, bringing alive the essence of our traditions. Works like Kantara proudly carry the spirit… pic.twitter.com/6TeGsk0BjF
ಈ ಬಗ್ಗೆ ರೇಖಾ ಗುಪ್ತಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಮತ್ತು ತಂಡದ ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. “ಇಂದು ಮುಖ್ಯಮಂತ್ರಿ ಜನಸೇವಾ ಸದನದಲ್ಲಿ ʼಕಾಂತಾರ: ಚಾಪ್ಟರ್ 1ʼ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಅವರ ತಂಡವನ್ನು ಭೇಟಿಯಾದೆ” ಎಂದು ಪೋಸ್ಟ್ ಮಾಡಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಚಿತ್ರವು ಭಾರತದ ಆಧ್ಯಾತ್ಮಿಕ ಆಳ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅಚ್ಚುಕಟ್ಟಾಗಿ ತೋರಿಸಿದೆ ಎಂದು ರೇಖಾ ಗುಪ್ತಾ ಪ್ರಶಂಸೆ ವ್ಯಕ್ತಪಡಿಸಿದ್ದು, ಇಂತಹ ಸಿನಿಮಾಗಳು ನಮ್ಮ ಪರಂಪರೆಯ ಹಿರಿಮೆಯನ್ನು ಹೆಚ್ಚಿಸುತ್ತವೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಕೊಂಡಾಡುವಂತೆ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.
“ಈ ಚಿತ್ರ ಹೊಸ ಮೈಲುಗಲ್ಲು ಸೃಷ್ಟಿಸಲಿ. ರಿಷಬ್ ಶೆಟ್ಟಿ ಮತ್ತು ಸಂಪೂರ್ಣ ತಂಡ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ. ಈ ಸಂದರ್ಭದಲ್ಲಿ ಪ್ರಗತಿ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಸೇರಿದಂತೆ ತಂಡದ ಅನೇಕರು ಹಾಜರಿದ್ದರು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರಸ್ತುತ 7 ಭಾಷೆಗಳಲ್ಲಿ ಬಿಡುಗಡೆಯಾಗಿ, ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಚಿತ್ರವು 273 ಕೋಟಿ ರೂ. ಹೆಚ್ಚು ಕಲೆಕ್ಷನ್ ಗಳಿಸಿದೆ.