ಮೋಹನ್‌ಲಾಲ್, ಮೀನಾ ನಟನೆಯ 'ದೃಶ್ಯಂ 3' ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಇನ್ನು ಒಂದು ದಿನ ಬಾಕಿ ಇರುವಾಗಲೇ, ಕ್ರೈಮ್ ಥ್ರಿಲ್ಲರ್ ಸಿನಿಮಾ ವಿಶ್ವಾದ್ಯಂತ ಮುಂಗಡ ಬುಕಿಂಗ್ (Advance Bookings) ಮೂಲಕವೇ ಬರೋಬ್ಬರಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ!
ಬಿರುಸಿನಿಂದ ಆಗುತ್ತಿದೆ ಬುಕಿಂಗ್
ಜಾರ್ಜ್‌ಕುಟ್ಟಿ ಮತ್ತು ಅವರ ಕುಟುಂಬದ ಕಥೆಯನ್ನು ಮತ್ತೆ ಬೆಳ್ಳಿಪರದೆ ಮೇಲೆ ನೋಡಲು ಪ್ರೇಕ್ಷಕರು ಎಷ್ಟು ಕಾತುರರಾಗಿದ್ದಾರೆ ಎಂಬುದಕ್ಕೆ ಈ ಗಳಿಕೆಯೇ ಸಾಕ್ಷಿ. ಕಳೆದ ಕೆಲವು ದಿನಗಳಿಂದ ಟ್ರೇಡ್ ಟ್ರ್ಯಾಕರ್‌ಗಳು ಮತ್ತು ಪ್ರದರ್ಶಕರು ಚಿತ್ರದ ಬುಕಿಂಗ್ ಟ್ರೆಂಡ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಾರತ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಬುಕಿಂಗ್ ಪ್ರಮಾಣ ಭರ್ಜರಿಯಾಗಿ ಏರುತ್ತಲೇ ಇದೆ.
25 ಕೋಟಿ ರೂ. ದಾಟಿದ ಕಲೆಕ್ಷನ್!
'ಸ್ಯಾಕ್ನಿಲ್ಕ್' ಹಂಚಿಕೊಂಡಿರುವ ಅಂದಾಜಿನ ಪ್ರಕಾರ, ಕೇವಲ ಭಾರತದಲ್ಲೇ ಪ್ರೀ-ಸೇಲ್ಸ್ ಮೂಲಕ ಈ ಸಿನಿಮಾ ಸುಮಾರು 10.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆಯಂತೆ. ವಿಶ್ವಾದ್ಯಂತ ಈ ಮೊತ್ತ ಈಗಾಗಲೇ 25 ಕೋಟಿ ರೂಪಾಯಿಯ ಗಡಿ ತಲುಪಿದ್ದು, ಮೇ 21 ರಂದು ಮೊದಲ ಶೋ ಆರಂಭವಾಗುವಷ್ಟರಲ್ಲಿ ಮುಂಗಡ ಬುಕಿಂಗ್ ಕಲೆಕ್ಷನ್ ಇನ್ನು ಭರ್ಜರಿಯಾಗಿ ಏರಿಕೆಯಾಗಲಿದೆ ಎನ್ನುತ್ತವೆ ವರದಿಗಳು.
Drishyam 3: ‘ದೃಶ್ಯಂ 3’ ಹಿಂದಿ ಚಿತ್ರದಲ್ಲಿ ಭಾರೀ ಬದಲಾವಣೆ; ಹೇಗಿರಲಿದೆ?
ಕೇರಳಂ ಪ್ರೇಕ್ಷಕರಿಂದ ಅಭೂತಪೂರ್ವ ರೆಸ್ಪಾನ್ಸ್
ದೃಶ್ಯಂ 3 ಚಿತ್ರಕ್ಕೆ ಸದ್ಯ ಕೇರಳಂ ರಾಜ್ಯದಲ್ಲಿಯೇ ಅತಿ ಹೆಚ್ಚು ಮುಂಗಡ ಟಿಕೆಟ್ ಬುಕಿಂಗ್ ಆಗಿದೆ. ಕೇರಳಂ ರಾಜ್ಯವೊಂದರಲ್ಲೇ ಮುಂಗಡ ಟಿಕೆಟ್ ಮಾರಾಟದಿಂದ ಬರೊಬ್ಬರಿ 6.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಸಿನಿಮಾ ಥಿಯೇಟರ್‌ಗೆ ಬಂದ ನಂತರ ಸ್ಪಾಟ್ ಬುಕಿಂಗ್ ಕೂಡ ಜೋರಾಗಲಿದ್ದು, ಮೊದಲ ದಿನದ ಕಲೆಕ್ಷನ್ ದಾಖಲೆ ಮಟ್ಟದಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ಹೊರಗೂ ಈ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಅದ್ಭುತವಾಗಿದೆ. ಗಲ್ಫ್ ದೇಶಗಳು, ಯುನೈಟೆಡ್ ಕಿಂಗ್‌ಡಮ್ (UK), ಉತ್ತರ ಅಮೇರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಪ್ರೀಮಿಯರ್ ಹಾಗೂ ಮೊದಲ ದಿನದ ಶೋಗಳಿಗೆ ಭರ್ಜರಿ ಆಕ್ಯುಪೆನ್ಸಿ ಕಂಡುಬಂದಿದೆ. ಮೂಲಗಳ ಪ್ರಕಾರ, ವಿಶ್ವಾದ್ಯಂತ ಈಗಾಗಲೇ ಸುಮಾರು 5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ ಎನ್ನಲಾಗಿದೆ.
ಈ ಬಾರಿ ಕನ್ನಡದಲ್ಲೂ ರಿಲೀಸ್!
ದೃಶ್ಯಂ 3 ಚಿತ್ರವು ಇದೇ ಮೊದಲ ಬಾರಿಗೆ ಮಲಯಾಳಂ ಜೊತೆಗೆ ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಮೇ 21 ರಂದು ನಟ ಮೋಹನ್‌ಲಾಲ್ ಅವರ ಜನ್ಮದಿನವಾಗಿದ್ದು, ಅದೇ ದಿನ ಸಿನಿಮಾ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಡಬಲ್ ಗಿಫ್ಟ್ ನೀಡಿದಂತೆ ಆಗಿದೆ.
L2: ಎಂಪುರಾನ್ ದಾಖಲೆ ಉಡೀಸ್ ಆಗಲಿದೆಯಾ?
ಅಂದಹಾಗೆ, ಮಾಲಿವುಡ್‌ನಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆಯು ಮೋಹನ್‌ಲಾಲ್ ಅವರೇ ನಟಿಸಿದ್ದ 'L2: ಎಂಪುರಾನ್' ಹೆಸರಿನಲ್ಲಿ ಇದೆ. ಈ ಸಿನಿಮಾವು ಮೊದಲ ದಿನ ವಿಶ್ವಾದ್ಯಂತ ಸುಮಾರು 68 ರಿಂದ 70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದೀಗ 'ದೃಶ್ಯಂ 3' ಆ ದಾಖಲೆಯನ್ನು ಮುರಿಯುತ್ತಾ ಎಂಬ ಕುತೂಹಲ ಮನೆ ಮಾಡಿದೆ.