Actor Nani: 10 ಭಾಗಗಳ ಸರಣಿಯಾಗಿ ಬರಲಿದೆ ರಾಜಮೌಳಿಯ ʼಮಹಾಭಾರತʼ
Actor Nani: ಭಾರತದ ಅತ್ಯಂತ ಪ್ರಮುಖ ಸಿನಿಮಾ ನಿರ್ದೇಶಕ ಎಸ್.ಎಸ್ ರಾಜಮೌಳಿ ತಮ್ಮ ಕನಸಿನ ಯೋಜನೆಯಾದ ‘ಮಹಾಭಾರತ’ದಲ್ಲಿ ನಟ ನಾನಿ ಖಂಡಿತವಾಗಿಯೂ ನಟಿಸಲಿದ್ದಾರೆ ಎಂದು ದೃಢಪಡಿಸಿದ್ದಾರೆ. ಈ ಕುರಿತು ರಾಜಮೌಳಿ ಮಾಹಿತಿ ಹಂಚಿಕೊಂಡಿದ್ದು, ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ನಾನಿ - ರಾಜಮೌಳಿ

ಹೈದರಾಬಾದ್: ಭಾರತದ ಅತ್ಯಂತ ಪ್ರಮುಖ ಸಿನಿಮಾ ನಿರ್ದೇಶಕ ಎಸ್.ಎಸ್. ರಾಜಮೌಳಿ (Director SS Rajamouli) ತಮ್ಮ ಕನಸಿನ ಯೋಜನೆಯಾದ ‘ಮಹಾಭಾರತ’ದಲ್ಲಿ (Mahabharatha) ನಟ ನಾನಿ (Actor Nani) ಖಂಡಿತವಾಗಿಯೂ ನಟಿಸಲಿದ್ದಾರೆ ಎಂದು ದೃಢಪಡಿಸಿದ್ದಾರೆ. ಎಲ್ಲ ಕಾಲದ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ಮಹಾಭಾರತವನ್ನು 10 ಭಾಗಗಳ ಸರಣಿಯಾಗಿ ನಿರ್ಮಿಸುವ ಬಯಕೆಯನ್ನು ರಾಜಮೌಳಿ ಹಲವು ಬಾರಿ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ, ಹೈದರಾಬಾದ್‌ನಲ್ಲಿ ನಡೆದ ‘ಹಿಟ್: ದಿ ಥರ್ಡ್ ಕೇಸ್’ ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜಮೌಳಿಯನ್ನು ಸಂದರ್ಶಕರು, ನಾನಿ ಈ ಸರಣಿಯಲ್ಲಿ ಯಾವ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಗುಸುಗುಸಿನ ಸತ್ಯಾಂಶದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಜಮೌಳಿ, ಪಾತ್ರವನ್ನು ಇನ್ನೂ ನಿಗದಿಪಡಿಸಲಾಗಿಲ್ಲವಾದರೂ, ನಾನಿ ಈ ಸರಣಿಯ ಭಾಗವಾಗಿರುವುದು ಖಚಿತ ಎಂದು ಸ್ವಲ್ಪ ಹಿಂಜರಿಕೆಯಿಂದ ಬಹಿರಂಗಪಡಿಸಿದರು.
ಪ್ರಸ್ತುತ ರಾಜಮೌಳಿ ನಟ ಮಹೇಶ್ ಬಾಬು ಅವರೊಂದಿಗೆ ‘ಎಸ್‌ಎಸ್‌ಎಂಬಿ29’ ಚಿತ್ರದಲ್ಲಿ ಕಾರ್ಯನಿರತರಾಗಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಹೆಚ್ಚು ಭಾಗವನ್ನು ಒಡಿಶಾದಲ್ಲಿ ಚಿತ್ರೀಕರಿಸಲಾಗಿದೆ. ಮಹೇಶ್ ಬಾಬು ಜತೆಗೆ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತಿಹಾಸ ಮತ್ತು ಪೌರಾಣಿಕತೆಯ ಮಿಶ್ರಣವಿರುವ ಈ ಚಿತ್ರವು 2027ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ನಾನಿ ಈ ಹಿಂದೆ ರಾಜಮೌಳಿಯೊಂದಿಗೆ ಬ್ಲಾಕ್‌ಬಸ್ಟರ್ ಚಿತ್ರ ‘ಈಗ’ದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ, ಅವರ ‘ಹಿಟ್: ದಿ ಥರ್ಡ್ ಕೇಸ್’ ಚಿತ್ರವು ಮೇ 1ರಂದು ತೆರೆಕಾಣಲು ಸಿದ್ಧವಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಾನಿ, ತಾವು ನಿರ್ಮಿಸಿದ್ದ ‘ಕೋರ್ಟ್: ಸ್ಟೇಟ್ ವರ್ಸಸ್ ಎ ನೋಬಡಿ’ ಚಿತ್ರದ ಬಿಡುಗಡೆ ವೇಳೆಯ ಘಟನೆಯನ್ನು ನೆನಪಿಸಿಕೊಂಡರು. ಆ ಚಿತ್ರವು ಪ್ರೇಕ್ಷಕರನ್ನು ಮೆಚ್ಚಿಸುತ್ತದೆ ಎಂದು ಭರವಸೆ ನೀಡಿದ್ದ ನಾನಿ, ಕೋರ್ಟ್ ಚಿತ್ರವು ಭರವಸೆಗೆ ತಕ್ಕಂತಿರದಿದ್ದರೆ ತಮ್ಮ ಮುಂದಿನ ಚಿತ್ರ ‘ಹಿಟ್: ದಿ ಥರ್ಡ್ ಕೇಸ್’ ಅನ್ನು ವೀಕ್ಷಿಸದಿರುವಂತೆ ಹೇಳಿದ್ದರು. ಆದರೆ ಕೋರ್ಟ್ ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು.
ಈ ಸುದ್ದಿಯನ್ನು ಓದಿ: Viral Video: ಟಿಕೆಟ್ ವಿಚಾರಕ್ಕೆ ಮಹಿಳೆ-ಟಿಟಿಇ ನಡುವೆ ಭಾರಿ ಜಗಳ; ಕೊನೆಗೆ ಆಗಿದ್ದೇನು?
ಈ ಘಟನೆಯನ್ನು ಸ್ಮರಿಸಿದ ನಾನಿ, ಕೋರ್ಟ್ ಮತ್ತು ಹಿಟ್ 3 ಎರಡರ ನಿರ್ಮಾಪಕರಾಗಿದ್ದ ಕಾರಣ ಆ ರೀತಿಯ ಭರವಸೆಯನ್ನು ನೀಡಿದ್ದೆ. ಆದರೆ ಈ ಬಾರಿ ತಮ್ಮ ಮುಂದಿನ ಚಿತ್ರವನ್ನು ಬೇರೊಬ್ಬ ನಿರ್ಮಾಪಕರು ನಿರ್ಮಿಸುತ್ತಿರುವ ಕಾರಣ ಅಂತಹ ಅಪಾಯಕ್ಕೆ ಒಡ್ಡಿಕೊಳ್ಳಲಾಗದು ಎಂದರು. “ಹಿಟ್ 3 ನಿಮ್ಮ ನಿರೀಕ್ಷೆಗೆ ತಕ್ಕಂತಿರದಿದ್ದರೆ, ಮುಂದಿನ ವರ್ಷ ಬಿಡುಗಡೆಯಾಗುವ #SSM ಚಿತ್ರವನ್ನು ನೋಡಬೇಡಿ” ಎಂದು ರಾಜಮೌಳಿಯತ್ತ ತಿರುಗಿ ತಮಾಷೆಯಾಗಿ ಹೇಳಿದರು. ನಂತರ ಗಂಭೀರವಾಗಿ ಮಾತನಾಡಿದ ನಾನಿ, “ಎಸ್‌ಎಸ್‌ಎಂಬಿ29 ಚಿತ್ರವನ್ನು ಯಾರೂ ವೀಕ್ಷಿಸದಿರಲು ಸಾಧ್ಯವಿಲ್ಲ. ಕೇವಲ ತೆಲುಗು ಅಥವಾ ಭಾರತೀಯ ಪ್ರೇಕ್ಷಕರಲ್ಲ, ವಿಶ್ವದಾದ್ಯಂತ ಪ್ರೇಕ್ಷಕರು ಇದನ್ನು ಖಂಡಿತವಾಗಿ ನೋಡುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.