ಕನ್ನಡದ ʻಮುಗಿಲ್‌ಪೇಟೆʼ ಸಿನಿಮಾದಲ್ಲಿ ಮನೋರಂಜನ್ ರವಿಚಂದ್ರನ್‌ಗೆ ನಾಯಕಿಯಾಗಿದ್ದ ಕಯಾದು ಲೋಹರ್ ಅವರು ಸದ್ಯ ದಕ್ಷಿಣ ಭಾರತದಲ್ಲೇ ಟಾಪ್ ನಟಿಯಾಗುವತ್ತ ಹೆಜ್ಜೆ ಹಾಕುತ್ತಿದ್ದಾರೆ. 2021ರಲ್ಲಿ ʻಮುಗಿಲ್‌ಪೇಟೆʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಯಾದು ಲೋಹರ್‌ಗೆ ಕಳೆದ ವರ್ಷ ತೆರೆಕಂಡ 'ಡ್ರಾಗನ್' ಚಿತ್ರ ದೊಡ್ಡ ಗೆಲುವು ತಂದುಕೊಟ್ಟಿತ್ತು. ಈಚೆಗೆ ಸಾಯಿ ಅಭ್ಯಂಕರ್ ಅವರ 'ಪವಳ ಮಲ್ಲಿ' ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದ ಕಯಾದು ಲೋಹರ್, ಅದರಿಂದಲೂ ದೊಡ್ಡ ಸಕ್ಸಸ್ ಪಡೆದುಕೊಂಡರು. ಸದ್ಯ ಸೌತ್ ಇಂಡಿಯಾದ ಸೆನ್ಸೇಷನ್ ಆಗಿ ಮಿಂಚುತ್ತಿದ್ದಾರೆ ಈ ನಟಿ.
ಭರ್ಜರಿ ಗೆಲುವಿನೊಂದಿಗೆ ದಕ್ಷಿಣ ಭಾರತದಲ್ಲಿ ಹವಾ ಮಾಡುತ್ತಿರುವ ನಟಿ ಕಯಾದು ಲೋಹರ್ ಕೈಯಲ್ಲಿ ಸದ್ಯ 7 ಸಿನಿಮಾಗಳಿರುವುದು ವಿಶೇಷ. ಒಟ್ಟೊಟ್ಟಿಗೆ ಇಷ್ಟೊಂದು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಯಾದು ಲೋಹರ್, ಹೊಸ ದಾಖಲೆ ಬರೆಯುತ್ತ ಮುನ್ನುಗ್ಗಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಅವರ ನಾಲ್ಕು ಸಿನಿಮಾಗಳು ತೆರೆಕಾಣುವ ಸಾಧ್ಯತೆ ಇವೆ. ಇಲ್ಲೇ ಗೊತ್ತಗುತ್ತದೆ, ಅವರೆಷ್ಟು ಬ್ಯುಸಿ ಅಂತ. ಹಾಗಾದರೆ, ಕಯಾದು ಲೋಹರ್ ಕೈಯಲ್ಲಿರುವ ಆ ಏಳು ಸಿನಿಮಾಗಳು ಯಾವುವು? ಮುಂದೆ ಓದಿ.
1.ಹೃದಯಂ ಮುರಳಿ (ತಮಿಳು)
ಆಕಾಶ್ ಭಾಸ್ಕರನ್ ನಿರ್ದೇಶನದ 'ಹೃದಯಂ ಮುರಳಿ' ಚಿತ್ರದಲ್ಲಿ ಅಥರ್ವಗೆ ನಾಯಕಿಯಾಗಿದ್ದಾದ್ದಾರೆ ಕಯಾದು. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಪ್ರೀತಿ ಮುಕುಂದನ್, ಥಮನ್, ರಕ್ಷನ್, ದ್ರಾವಿಡ್ ಸೆಲ್ವಂ ಮತ್ತು ಸುಧಾಕರ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾವು ಜುಲೈ 10ರಂದು ತೆರೆಗೆ ಬರುವ ಸಾಧ್ಯತೆ ಇದೆ.
2.ಇಮ್ಮಾರ್ಟಲ್ (ತಮಿಳು)
ಮಾರಿಯಪ್ಪನ್ ಚಿನ್ನಾ ನಿರ್ದೇಶನದ 'ಇಮ್ಮಾರ್ಟಲ್' ಒಂದು ಡಾರ್ಕ್ ಫ್ಯಾಂಟಸಿ ಮತ್ತು ಸೂಪರ್ ನ್ಯಾಚುರಲ್ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ಜಿ.ವಿ. ಪ್ರಕಾಶ್ ಕುಮಾರ್ ಮತ್ತು ಆದಿತ್ಯ ಕತಿರ್ ಅವರೊಂದಿಗೆ ಕಯಾದು ಕೂಡ ನಟಿಸಿದ್ದಾರೆ. ಈ ಸಿನಿಮಾವು ಜುಲೈ 23ರಂದು ತೆರೆಗೆ ಬರಲಿದೆ.
3.ಐ ಆಮ್ ಗೇಮ್ (ಮಲಯಾಳಂ)
ದುಲ್ಖರ್ ಸಲ್ಮಾನ್, ಕಯಾದು ಲೋಹರ್ ಮುಖ್ಯ ಭೂಮಿಕೆಯಲ್ಲಿರುವ ಐ ಆಮ್ ಗೇಮ್ ಚಿತ್ರವನ್ನು ನಹಾಸ್ ಹಿದಾಯತ್ ನಿರ್ದೇಶಿಸುತ್ತಿದ್ದಾರೆ. ಆಂಟೋನಿ ವರ್ಗೀಸ್ ಪೆಪೆ, ಮಿಸ್ಕಿನ್, ಕತಿರ್ ಮತ್ತು ಸಂಯುಕ್ತಾ ವಿಶ್ವನಾಥನ್ ಕೂಡ ತಾರಾಗಣದಲ್ಲಿದ್ದಾರೆ. ಅದೃಷ್ಟದ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಂಡಿರುವ ಜೂಜುಕೋರನೊಬ್ಬನ ಜೀವನದಲ್ಲಿ ನಡೆಯುವ ಮಹತ್ತರ ಬದಲಾವಣೆಗಳ ಸುತ್ತ ಈ ಚಿತ್ರ ಮೂಡಿಬಂದಿದೆ. ಆಗಸ್ಟ್ 20ರಂದು ಈ ಸಿನಿಮಾ ರಿಲೀಸ್ ಆಗಲಿದೆ.
4.ದಿ ಪ್ಯಾರಡೈಸ್ (ತೆಲುಗು)
ಶ್ರೀಕಾಂತ್ ಒಡೆಲಾ ನಿರ್ದೇಶನದ 'ದಿ ಪ್ಯಾರಡೈಸ್' ಚಿತ್ರದಲ್ಲಿ ನಾನಿ ಅವರಿಗೆ ಜೋಡಿಯಾಗಿ ಕಯಾದು ನಟಿಸುತ್ತಿದ್ದಾರೆ. ಮೋಹನ್ ಬಾಬು ಮತ್ತು ರಾಘವ್ ಜುಯಲ್ ಕೂಡ ಈ ಚಿತ್ರದಲ್ಲಿದ್ದಾರೆ. 1980ರ ದಶಕದ ಸಿಕಂದರಾಬಾದ್ ಹಿನ್ನೆಲೆಯ ಕಥೆಯನ್ನು ಹೊಂದಿರುವ ಈ ಚಿತ್ರವು ಆಗಸ್ಟ್‌ನಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.
5.ಮಂಜನಾತಿ (ತಮಿಳು)
ಮಾರಿ ಸೆಲ್ವರಾಜ್ ನಿರ್ದೇಶನದ 'ಮಂಜನಾತಿ' ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಜೊತೆಗೆ ಕಯಾದು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ರಹಸ್ಯವಾಗಿಡಲಾಗಿದೆ.
6.ಸೂರ್ಯ 48 (ತಮಿಳು)
ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗಷ್ಟೇ ಘೋಷಿಸಿರುವ 'ಸೂರ್ಯ 48' ಚಿತ್ರದ ಮೂಲಕ ಕಯಾದು ಅವರು ಮೊದಲ ಬಾರಿಗೆ ನಟ ಸೂರ್ಯ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಸೂರ್ಯ ಮತ್ತು 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಮತ್ತೆ ಒಂದಾಗಿದ್ದಾರೆ.
7.ತಾರಂ (ಮಲಯಾಳಂ)
2022ರಲ್ಲೇ ಘೋಷಣೆಯಾಗಿದ್ದ 'ತಾರಂ' ಚಿತ್ರದಲ್ಲಿ ನಿವಿನ್ ಪೌಲಿ, ನಿಖಿಲಾ ವಿಮಲ್, ಸಾಯಿ ಪಲ್ಲವಿ ಮತ್ತು ಕಯಾದು ಲೋಹರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿನಯ್ ಗೋವಿಂದ್ ಇದರ ನಿರ್ದೇಶಕರು. ಆದರೆ ಕಳೆದ ಕೆಲವು ವರ್ಷಗಳಿಂದ ಈ ಚಿತ್ರದ ಕುರಿತು ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆ ಇದೆ.