ರಂಗಭೂಮಿ ಹಿನ್ನೆಲೆಯ ಹೊಸಬರ ತಂಡವೇ ಸೇರಿ ನಿರ್ಮಿಸಿರುವ, ಕೃತ್ವಿಕ್ ನಿರ್ದೇಶನದ ‘ಲವ್ ಸೀಸನ್ಸ್’ ಸಿನಿಮಾ ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರೈಸಿದೆ. ಜುಲೈ 3 ರಂದು ತೆರೆಕಂಡಿದ್ದ ಈ ಚಿತ್ರವು ಬಿಡುಗಡೆಯ ಆರಂಭದಲ್ಲಿ ಹಲವು ಸವಾಲು ಮತ್ತು ಅಡೆತಡೆಗಳನ್ನು ಎದುರಿಸಿತಾದರೂ, ತನ್ನ ಗಟ್ಟಿಯಾದ ಕಥಾವಸ್ತು ಹಾಗೂ ಕಂಟೆಂಟ್‌ನ ಬಲದಿಂದಲೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಪ್ರೇಕ್ಷಕರಿಗೂ ಧನ್ಯವಾದ ಅರ್ಪಿಸಿದ ಚಿತ್ರತಂಡ
ಬಿಡುಗಡೆಯಾದ ದಿನದಿಂದಲೇ ಭಿನ್ನ ಪರಿಭಾಷೆಯ ಪ್ರೇಮಕಥೆ ಮತ್ತು ದೃಶ್ಯರೂಪಕ್ಕೆ ನೋಡುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯಾವುದೇ ಭಾರಿ ಪ್ರಚಾರವಿಲ್ಲದಿದ್ದರೂ ಪ್ರೇಕ್ಷಕರ ‘ವರ್ಡ್ ಆಫ್ ಮೌತ್’ ಈ ಸಿನಿಮಾವನ್ನು 25 ದಿನಗಳ ಮೈಲಿಗಲ್ಲು ದಾಟಲು ಪ್ರಮುಖ ಕಾರಣವಾಗಿದೆ. ಈ ಯಶಸ್ವಿ ಘಳಿಗೆಯಲ್ಲಿ ಚಿತ್ರತಂಡವು ಬೆಂಬಲಿಸಿದ ಎಲ್ಲಾ ಪ್ರೇಕ್ಷಕರಿಗೂ ಧನ್ಯವಾದ ಅರ್ಪಿಸಿದೆ.
Love Seasons Review: ಒಲವಿನ ಋತುವಿನಲ್ಲಿ ಮುಳುಗೇಳುವ ನಾಯಕ; ಪ್ರೀತಿಯ ಹುಡುಕಾಟವೇ ಆತನ ಕಾಯಕ
ಹೊಸಬರ ಚಿತ್ರದ ಹೊಸ ಸಾಧನೆ
ಇಂದಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಯಾವುದೇ ಸಿನಿಮಾ 25 ದಿನಗಳನ್ನು ಪೂರೈಸುವುದು ದೊಡ್ಡ ಸಾಹಸ. ಅಂಥದ್ದರಲ್ಲಿ ಸಂಪೂರ್ಣ ಹೊಸಬರ ತಾಂತ್ರಿಕ ಹಾಗೂ ನಟನಾ ಬಳಗವನ್ನು ಹೊಂದಿರುವ 'ಲವ್ ಸೀಸನ್ಸ್' ಈ ಸಾಧನೆ ಮಾಡಿರುವುದು ಕನ್ನಡ ಚಿತ್ರರಂಗದಲ್ಲೊಂದು ಸಕಾರಾತ್ಮಕ ಬೆಳವಣಿಗೆ ಎಂಬುದು ಚಿತ್ರತಂಡದ ಖುಷಿ.
ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದು, ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಸಾಥ್ ನೀಡಿದ್ದಾರೆ. ಜೊತೆಗೆ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತ ಅನಿಲ್, ಜಯತೀರ್ಥ, ಚೇತನ್ ದುರ್ಗ, ʻಕಾಮಿಡಿ ಕಿಲಾಡಿʼ ಸದಾನಂದ, ಹುಲಿ ಕಾರ್ತಿಕ್ ಹಾಗೂ ಬೇಬಿ ರಿತು ಸಿಂಗ್ ಮುಂತಾದವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಎನ್.ಆರ್ ಮಂಜುನಾಥ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಾಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿದೆ.