ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಮೈನಾʼ ಸೀರಿಯಲ್‌ನಲ್ಲಿ ರೋಚಕ ಕಬಡ್ಡಿ ಪಂದ್ಯಾವಳಿ; ತಾಂಡವ್ ಪಾತ್ರದಲ್ಲಿ ಧನುಷ್ ಭರ್ಜರಿ ಎಂಟ್ರಿ, ಸಾಥ್‌ ನೀಡಿದ ದುರ್ಗಾಶ್ರೀ

'ಸನ್ ಉದಯ' ವಾಹಿನಿಯ ಪ್ರಸಿದ್ಧ 'ಮೈನಾ' ಧಾರಾವಾಹಿಯಲ್ಲಿ ಊರಿನ ದೇವಸ್ಥಾನದ ಪವಿತ್ರ ಕಿರೀಟ ಮುಡಿಯುವ ಹಕ್ಕಿಗಾಗಿ ರೋಚಕ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಈ ವಿಶೇಷ ಸಂಚಿಕೆಗಳಿಗೆ 'ತಾಂಡವ್' ಪಾತ್ರದ ಮೂಲಕ ನಟ ಧನುಷ್ ಹಾಗೂ ದುರ್ಗಾಶ್ರೀ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಕಿರುತೆರೆಯ ವೀಕ್ಷಕರಿಗೆ ವಿಭಿನ್ನ ಹಾಗೂ ಮನರಂಜನಾತ್ಮಕ ಕಥೆಗಳನ್ನು ಉಣಬಡಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ‘ಸನ್ ಉದಯ’ ವಾಹಿನಿಯ ಜನಪ್ರಿಯ ಧಾರಾವಾಹಿ 'ಮೈನಾ' ಈಗ ಹೊಸದೊಂದು ರೋಮಾಂಚಕಾರಿ ಪ್ರಯೋಗಕ್ಕೆ ಸಜ್ಜಾಗಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಈ ಸೀರಿಯಲ್‌ನಲ್ಲಿ, ವೀಕ್ಷಕರಿಗೆ ನೈಜ ಅನುಭೂತಿ ನೀಡುವಂತಹ ರೋಚಕ ಕಬಡ್ಡಿ ಪಂದ್ಯಾವಳಿಯನ್ನು ಅಳವಡಿಸಲಾಗಿದ್ದು, ಸದ್ಯದಲ್ಲೇ ಈ ವಿಶೇಷ ಸಂಚಿಕೆಗಳು ಬಿತ್ತರವಾಗಲಿವೆ.

ಕಬಡ್ಡಿ ಅಖಾಡಕ್ಕೆ ಧನುಷ್ ಭರ್ಜರಿ ಎಂಟ್ರಿ

ಈ ಕಬಡ್ಡಿ ಮಹಾ ಕಾದಾಟದ ವಿಶೇಷ ಸಂಚಿಕೆಗಳಿಗೆ ಮತ್ತಷ್ಟು ಮೆರುಗು ನೀಡಲು ನಟ ಧನುಷ್ ಅವರು ‘ತಾಂಡವ್’ ಎಂಬ ಖಡಕ್ ಪಾತ್ರದ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ದುರ್ಗಾಶ್ರೀ ಕಾಣಿಸಿಕೊಂಡಿದ್ದು, ಈ ಜೋಡಿಯ ಆಗಮನ ಧಾರಾವಾಹಿಯ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಪ್ರತಿಷ್ಠೆಯ ಪಂದ್ಯಾವಳಿ, ಗೆಳೆತನದ ಸವಾಲು

ಊರಿನ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕಥೆಗೆ ಭರ್ಜರಿ ಟ್ವಿಸ್ಟ್ ಸಿಗಲಿದೆ. ಮೈನಾ ಧಾರಾವಾಹಿಯ ಇಬ್ಬರು ನಾಯಕರ ಕುಟುಂಬಗಳ ಪ್ರತಿಷ್ಠೆಗಾಗಿ ಈ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿರುತ್ತದೆ. ಅಮ್ಮನೋರಿಗೆ ಪವಿತ್ರ ಕಿರೀಟ ತೊಡಿಸುವ ಪರಮ ಅರ್ಹತೆಯನ್ನು ಗಳಿಸಿಕೊಳ್ಳಬೇಕಾದರೆ, ಈ ಕಬಡ್ಡಿ ಪಂದ್ಯವನ್ನು ಗೆಲ್ಲಲೇಬೇಕು ಎಂಬ ಕಠಿಣ ಷರತ್ತು ವಿಧಿಸಲಾಗಿರುತ್ತದೆ.

ʻಮಹಾಲಕ್ಷ್ಮೀ ಮದುವೆʼ ಸೀರಿಯಲ್ ಪ್ರಸಾರಕ್ಕೆ ಮುಹೂರ್ತ ಫಿಕ್ಸ್; ಸನ್ ಉದಯ ಟಿವಿಗೆ ನಟಿ ಅಮೂಲ್ಯ ಗೌಡ ಗ್ರ್ಯಾಂಡ್ ಎಂಟ್ರಿ

ಇಲ್ಲಿ ಒಂದು ಕುಟುಂಬದ ತಂಡಕ್ಕೆ 'ತಾಂಡವ್' ನಾಯಕನಾದರೆ, ಮತ್ತೊಂದು ತಂಡಕ್ಕೆ 'ಪುಷ್ಪಕ್' ಕ್ಯಾಪ್ಟನ್ ಆಗಿರುತ್ತಾನೆ. ಅಸಲಿಗೆ ಸ್ನೇಹಿತರಾಗಿರುವ ಇವರಿಬ್ಬರು, ಈಗ ಕೌಟುಂಬಿಕ ಪ್ರತಿಷ್ಠೆಗಾಗಿ ಅಖಾಡದಲ್ಲಿ ಪರಸ್ಪರ ಕಾದಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದೇ ವೇಳೆ ದೇವಸ್ಥಾನದಲ್ಲಿ ನಡೆಯುವ ಒಂದು ನಿಗೂಢ ಅನಾಹುತಕ್ಕೆ ಧ್ರುವನನ್ನು ಹೊಣೆಗಾರನನ್ನಾಗಿ ಮಾಡಿ, ಆತನಿಗೆ ಛಡಿಯೇಟಿನ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ದೇಹದ ತುಂಬಾ ಗಾಯಗಳಾಗಿದ್ದರೂ ಲೆಕ್ಕಿಸದ ಧ್ರುವ, ಕೊನೆಯ ಕ್ಷಣದಲ್ಲಿ ಕಬಡ್ಡಿ ಆಟಕ್ಕೆ ಮಿಂಚಿನ ಪ್ರವೇಶ ಪಡೆದು ಎಲ್ಲರ ಹುಬ್ಬೇರಿಸುತ್ತಾನೆ. ಆದರೆ ಅಸಲಿ ಟ್ವಿಸ್ಟ್ ಸಿಗುವುದೇ ಕ್ಲೈಮ್ಯಾಕ್ಸ್‌ನಲ್ಲಿ! ಅಂತಿಮ ಸಮರದಲ್ಲಿ ಮೈನಾ ಹಾಗೂ ದುರ್ಗಾ ಇಬ್ಬರೂ ರಣಕಹಳೆ ಊದಿ ನೇರವಾಗಿ ಕಬಡ್ಡಿ ಅಖಾಡಕ್ಕೆ ಧುಮುಕುತ್ತಾರೆ. ಇವರಿಬ್ಬರು ಕಣಕ್ಕಿಳಿದಿದ್ದರ ಹಿಂದಿನ ರಹಸ್ಯವೇನು? ಈ ಪಂದ್ಯದ ಹಿಂದೆ ನಡೆದ ರಾಜಕೀಯ ಕುತಂತ್ರಗಳೇನು? ಅಂತಿಮವಾಗಿ ಗೆಲುವು ಯಾರ ಪಾಲಾಗಲಿದೆ? ಎಂಬ ರೋಚಕ ಪ್ರಶ್ನೆಗಳಿಗೆ ‘ಮೈನಾ- ಧ್ರುವ ತಾಂಡವ’ ವಿಶೇಷ ಸಂಚಿಕೆಗಳು ಉತ್ತರ ನೀಡಲಿವೆ.

ಕೋಮಲ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಯನ್ನು ಸಂತೋಷ್ ಗೌಡ ಹಾಸನ ನಿರ್ದೇಶಿಸುತ್ತಿದ್ದಾರೆ. ವಾಲಿ-ದಯಾಕರ್ ಅವರ ಆಕರ್ಷಕ ಛಾಯಾಗ್ರಹಣ ಹಾಗೂ ಗಿರೀಶ್ ಅವರ ಚುರುಕಾದ ಸಂಭಾಷಣೆ ಚಿತ್ರಕಥೆಗೆ ಬಲ ತುಂಬಿದೆ. ತಾರಾಗಣದಲ್ಲಿ ಧನುಷ್-ದುರ್ಗಾಶ್ರೀ ಜೊತೆಗೆ ವಿಜಯಲಕ್ಷ್ಮೀ, ಸಿದ್ದಾರ್ಥ, ಅರಾಫತ್ ಷರೀಪ್, ಜೆ.ಎಸ್.ವಾಲಿ, ಕಾರ್ತಿಕ್, ಆಯುಧ್, ಶಿಲ್ಪಾ, ನವ್ಯಾ ಮುಂತಾದ ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕಿರುತೆರೆಯಲ್ಲಿ ಈ ಕಬಡ್ಡಿ ಹಬ್ಬವನ್ನು ವೀಕ್ಷಿಸಲು ವೀಕ್ಷಕರು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಕ್ಕೆ ಸನ್ ಉದಯ ಟಿವಿಯಲ್ಲಿ ವೀಕ್ಷಿಸಬಹುದು.