ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ‘ಅನಿರೀಕ್ಷಿತ ಅತಿಥಿಗಳು’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಖ್ಯಾತ ನಟ ಪ್ರಮೋದ್ ಶೆಟ್ಟಿ ಟ್ರೇಲರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, "ಈ ಚಿತ್ರತಂಡ ನನಗೆ ರಂಗಭೂಮಿ ದಿನಗಳಿಂದಲೇ ಆಪ್ತವಾಗಿದೆ. ಸಿನಿಮಾದ ಮೇಕಿಂಗ್ ಬಗ್ಗೆ ಚಿತ್ರರಂಗದ ತಂತ್ರಜ್ಞರೇ ಮುಕ್ತವಾಗಿ ಹೊಗಳುತ್ತಿರುವುದು ಗೆಲುವಿನ ಉತ್ತಮ ಸೂಚನೆ" ಎಂದರು.
ಇದೇ ಸಂದರ್ಭದಲ್ಲಿ ಟ್ರೇಲರ್‌ನಲ್ಲಿರುವ ಕಾಡಿನ ಮಧ್ಯದ ಮನೆಯನ್ನು ಗುರುತಿಸಿದ ಪ್ರಮೋದ್ ಶೆಟ್ಟಿ, "ಇದೇ ಮನೆಯಲ್ಲಿ ರಿಷಬ್ ಶೆಟ್ಟಿ ನಟನೆಯ 'ಹೀರೋ' ಚಿತ್ರೀಕರಣ ನಡೆದು ದೊಡ್ಡ ಯಶಸ್ಸು ಕಂಡಿತ್ತು. ಆ ಜಾಗದಲ್ಲೊಂದು ಪಾಸಿಟಿವ್ ಶಕ್ತಿಯಿದೆ, ಅದೇ ಗೆಲುವು ಈ ತಂಡಕ್ಕೂ ಸಿಗಲಿ" ಎಂದು ಹಾರೈಸಿದರು.
ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಮನೋಜ್ ಅಣ್ಣಯ್ಯ ಮಾತನಾಡಿ, ಚಿತ್ರಕ್ಕೆ 'ಎ' ಪ್ರಮಾಣಪತ್ರ ಸಿಕ್ಕಿದ್ದರೂ ಇದು ಪ್ರತಿಯೊಬ್ಬ ಪ್ರೇಕ್ಷಕನೂ ತನ್ನ ಬದುಕಿನ ನೈಜ ಘಟನೆಗಳನ್ನು ನೆನಪಿಸಿಕೊಳ್ಳುವಂತಹ ಕಥಾಹಂದರ ಹೊಂದಿದೆ ಎಂದರು. ಜೀವನದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಮಹತ್ವದ ಸಂದೇಶವೂ ಚಿತ್ರದಲ್ಲಿದೆ ಎಂದು ವಿವರಿಸಿದರು.
ಚಿತ್ರದ ನಿರ್ಮಾಪಕ ಬಿ. ವಿನೋದ್ ಕುಮಾರ್ ಮಾತನಾಡಿ, ತಮಗಿದ್ದ ನಟನೆಯ ಆಸಕ್ತಿಗೆ ಪೂರಕವಾಗಿ ಈ ಚಿತ್ರದಲ್ಲೂ ಒಂದು ಪಾತ್ರ ನಿಭಾಯಿಸುವ ಅವಕಾಶ ಸಿಕ್ಕಿದೆ ಎಂದು ಹಂಚಿಕೊಂಡರು. ಸಾಹಸ ನಿರ್ದೇಶಕ ಶ್ರೀರಾಮ್ ಸಂಯೋಜನೆಯಲ್ಲಿ ನಾಲ್ಕು ಭರ್ಜರಿ ಸಾಹಸ ದೃಶ್ಯಗಳಿದ್ದು, ಕ್ಲೈಮ್ಯಾಕ್ಸ್ ಫೈಟ್ ವೇಳೆ ನಾಯಕ ಜಗ್ಗಿಗೆ ನೈಜವಾಗಿಯೇ ಪೆಟ್ಟಾಗಿತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದರು.
Pramod Shetty: ಮದುವೆಗೆ ರಶ್ಮಿಕಾ ನಮ್ಮನ್ನೆಲ್ಲಾ ಕರೆಯಲ್ಲ; ಪ್ರಮೋದ್ ಶೆಟ್ಟಿ
ಅಂದು ಅಪ್ಪು ಹೇಳಿದ್ದ ಮಾತೇನು?
'ಮೈತ್ರಿ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಾಯಕ ನಟ ಮೈತ್ರಿ ಜಗ್ಗಿ, ತಮ್ಮ ಸಿನಿಮಾ ಪಯಣವನ್ನು ಭಾವುಕರಾಗಿ ಸ್ಮರಿಸಿಕೊಂಡರು. "ಅಂದು ಪುನೀತ್ ರಾಜ್‌ಕುಮಾರ್ ಅವರ ಬಳಿ ಹೀರೋ ಆಗುವ ಆಸೆ ಹೇಳಿಕೊಂಡಾಗ 'ದೇವ್ರಿದ್ದಾನೆ, ಖಂಡಿತ ಹೀರೋ ಆಗ್ತೀಯ' ಎಂದು ಬೆನ್ನುತಟ್ಟಿದ್ದರು. ರಾಕಿಂಗ್ ಸ್ಟಾರ್ ಯಶ್ ಕೂಡ ನನ್ನ ನಟನೆ ಕಂಡು ಪ್ರಶಂಸಿಸಿದ್ದರು. ಈ ಚಿತ್ರದ ನಾಯಕನ ಪಾತ್ರಕ್ಕಾಗಿ ಬರೋಬ್ಬರಿ 109 ಕೆಜಿಯಿಂದ 72 ಕೆಜಿಗೆ ತೂಕ ಇಳಿಸಿಕೊಂಡು ಕನಸನ್ನು ನನಸು ಮಾಡಿಕೊಂಡಿದ್ದೇನೆ" ಎಂದರು.
ಚಿತ್ರದಲ್ಲಿ ‘ಶಕ್ತಿ’ ಎಂಬ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿವೇಕ್ ಸಿಂಹ, ಈ ಹಿಂದೆ 'ಚೂರಿಕಟ್ಟೆ', 'ಸ್ಪೂಕಿ ಕಾಲೇಜ್' ಮುಂತಾದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ ನಂತರ ಇದರಲ್ಲಿ ಪೂರ್ಣಪ್ರಮಾಣದ ಪ್ರಧಾನ ಪಾತ್ರ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಖತ್ ಬೋಲ್ಡ್ ಪಾತ್ರದಲ್ಲಿ ನಟಿ ಸಂಪ್ರತಿ ಆಳ್ವಾ
ಚಿತ್ರದಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಾಯಕಿ ಸಂಪ್ರತಿ ಆಳ್ವಾ, ಈ ಅವಕಾಶ ದೊರಕಿಸಿಕೊಟ್ಟ ಸಹ ನಟಿ ಹರಿತ ಶಾಗೆ ಧನ್ಯವಾದ ತಿಳಿಸಿದರು. ಕನ್ನಡವೇ ಬಾರದ ಹರಿತ ಶಾ ಸ್ಪಷ್ಟವಾಗಿ ಕನ್ನಡದಲ್ಲೇ ಮಾತನಾಡಿ ಇಡೀ ತಂಡದ ಮೆಚ್ಚುಗೆಗೆ ಪಾತ್ರರಾದರು.
'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ದೈವಿಕ್, ಈ ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡುತ್ತಿರುವುದಾಗಿ ಹೇಳಿದರು. ವೇದಿಕೆಯಲ್ಲಿ ನಟರಾದ ಶ್ರೀದತ್ತ, ದಯಾ ಪಲ್ಲವಗೆರೆ, ಛಾಯಾಗ್ರಾಹಕ ಎರಿಕ್ ಹಾಗೂ ಸಂಗೀತ ನಿರ್ದೇಶಕ ಸ್ವಾಮಿನಾಥನ್ ಉಪಸ್ಥಿತರಿದ್ದು ಸಂಭ್ರಮ ಹಂಚಿಕೊಂಡರು. ಎಲ್ಲರ ಕುತೂಹಲ ಕೆರಳಿಸಿರುವ ‘ಅನಿರೀಕ್ಷಿತ ಅತಿಥಿಗಳು’ ಚಿತ್ರವು ಇದೇ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ.