ನವದೆಹಲಿ: ಅಕ್ಕಿನೇನಿ ನಾಗಚೈತನ್ಯ (Naga Chaitanya) ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ವಿಚಾರದಲ್ಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸಮಂತಾ (Samantha) ಅವರಿಂದ ವಿಚ್ಛೇದನ ಪಡೆದಾಗಿನಿಂದ ಡಿವೋರ್ಸ್‌ಗೆ ಕಾರಣ ಏನೆಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಲೆ ಇದ್ದಾರೆ. ಆದರೆ ಕಾರಣ ಏನೆಂದು ಇಬ್ಬರು ಉತ್ತರ ನೀಡಿಲ್ಲ. ಇತ್ತೀಚೆಗೆ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ (Sobhita Dhulipala) ಅವರನ್ನು ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದು ಸುಖವಾದ ಸಂಸಾರ ನಡೆಸುತ್ತಿದ್ದಾರೆ. ಈ ನಡುವೆ ನಾಗ ಚೈತನ್ಯ ಅವರು ತಮ್ಮ ಪತ್ನಿ, ಶೋಭಿತಾ ಧೂಳಿಪಾಲ ಅವರನ್ನು ಭೇಟಿಯಾಗಿದ್ದು ಹೇಗೆ? ಎಲ್ಲಿ ಎಂದು ಇಂಟ್ರಸ್ಟಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಈ ಜೋಡಿಯ ಪ್ರೀತಿಯು ಸಿನಿಮಾ ಶೂಟಿಂಗ್ ಸೆಟ್‌ಗಳಲ್ಲಲ್ಲದೆ, ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭವಾಯಿತು ಎಂದು ನಾಗ ಚೈತನ್ಯ ಬಹಿರಂಗ ಪಡಿಸಿದ್ದಾರೆ. ಜಗಪತಿ ಬಾಬು ಅವರ 'ಜಯಮ್ಮು ನಿಶ್ಚಯಮ್ಮು ರಾ' ಟಾಕ್ ಶೋನಲ್ಲಿ ಪಾಲ್ಗೊಂಡ ನಾಗ ಚೈತನ್ಯ, "ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಶೋಭಿತಾಳನ್ನು ಪರಿಚಯ ಮಾಡಿಕೊಂಡೆ. ನಾನು ನನ್ನ ಸಂಗಾತಿಯನ್ನು ಅಲ್ಲಿ ಭೇಟಿಯಾಗುತ್ತೇನೆ ಎಂದು ಊಹಿಸಿರಲಿಲ್ಲ,"ಎಂದಿದ್ದಾರೆ. ನಾಗ ಚೈತನ್ಯ ಅವರು ತಮ್ಮ 'ಕ್ಲೌಡ್ ಕಿಚನ್ ಶೋ' ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದಾಗ ಶೋಭಿತಾ ಅದಕ್ಕೆ ಒಂದು ಎಮೋಜಿಯೊಂದಿಗೆ ಕಾಮೆಂಟ್ ಮಾಡಿದರು. ಅಲ್ಲಿಂದಲೇ ಶೋಭಿತಾ ಅವರೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿ, ನಂತರ ಖುದ್ದಾಗಿ ಭೇಟಿಯಾದೆವು ಎಂದು ಹೇಳಿಕೊಂಡಿದ್ದಾರೆ.
ತಮ್ಮ ಪತ್ನಿ ಬಗ್ಗೆ ಮಾತನಾಡಿದ ಅವರು ತಮ್ಮ ಜೀವನದ ಅತಿದೊಡ್ಡ ಬೆಂಬಲ ಶೋಭಿತಾ ಎಂದು ಬಣ್ಣಿಸಿದ್ದಾರೆ. ರಾಪಿಡ್-ಫೈರ್ ಪ್ರಶ್ನೆಯೊಂದರಲ್ಲಿ, 'ನೀವು ಯಾವುದಿಲ್ಲದೆ ಬದುಕಲು ಸಾಧ್ಯವಿಲ್ಲ?' ಎಂದು ಕೇಳಿದಾಗ, ಅವರು ತಕ್ಷಣವೇ "ಶೋಭಿತಾ, ನನ್ನ ಹೆಂಡತಿ ಅವರಿಲ್ಲದೆ ಬದುಕಲು ಸಾಧ್ಯ ಇಲ್ಲ ಎಂದು ಉತ್ತರಿಸಿದ್ದಾರೆ.
ಶೋಭಿತ ಕೂಡ ತಮ್ಮ ಪ್ರೇಮಕಥೆಯನ್ನು ಈ ಹಿಂದೆ ಬಿಚ್ಚಿಟ್ಟಿದ್ದರು. 2022 ರಿಂದ ನಾನು ಚೈತನ್ಯ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಮುಂಬೈನ ಒಂದು ಕೆಫೆಯಲ್ಲಿ ನಾವಿಬ್ಬರೂ ಮೊದಲ ಬಾರಿಗೆ ಭೇಟಿಯಾದೆವು.. ಸುಮಾರು ಒಂದು ವಾರದ ನಂತರ ಮುಂಬೈನಲ್ಲಿ ನಡೆದ ಅಮೆಜಾನ್ ಪ್ರೈಮ್ ಸಮಾರಂಭದಲ್ಲಿ ಮತ್ತೆ ಇಬ್ಬರು ಭೇಟಿ ಯಾದೆವು, ನಾನು ಕೆಂಪು ಉಡುಪಿನಲ್ಲಿದ್ದೆ ಅವರು ನೀಲಿ ಸೂಟ್‌ನಲ್ಲಿದ್ದರು ಎಂದು ಶೋಭಿತಾ ಪ್ರೀತಿ ವಿಚಾರ ಬಹಿರಂಗಪಡಿಸಿದ್ದರು.. ನಾಗ ಚೈತನ್ಯ ಮತ್ತು ಶೋಭಿತ ಧೂಳಿಪಾಳ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಪ್ರೀತಿಸಿ, ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ವಿವಾಹವಾದರು.