ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಆ ಪ್ರಕರಣ ಮುಗಿದುಹೋಗಿದೆ, ನ್ಯಾಯಾಂಗದಿಂದಲೇ ಇತ್ಯರ್ಥವಾಗಿದೆ’; ತನುಶ್ರೀ ದತ್ತಾ ಆರೋಪಗಳಿಗೆ ನಾನಾ ಪಾಟೇಕರ್‌ ಪುತ್ರ ಮಲ್ಹಾರ್ ಖಡಕ್ ಪ್ರತ್ಯುತ್ತರ

Nana Patekar: ಈಚೆಗೆ ನಿಧನರಾದ ನಟ ನಾನಾ ಪಾಟೇಕರ್‌ ಅವರ ಮೇಲಿನ ಆರೋಪಗಳ ಕುರಿತು ಅವರ ಪುತ್ರ ಮಲ್ಹಾರ್ ಪಾಟೇಕರ್ ಸ್ಪಷ್ಟನೆ ನೀಡಿದ್ದು, ನ್ಯಾಯಾಲಯದಲ್ಲಿ ಈಗಾಗಲೇ ಇತ್ಯರ್ಥವಾಗಿರುವ ಹಳೆಯ ವಿಷಯಗಳನ್ನು ಮತ್ತೆ ಕೆದಕಬೇಡಿ ಎಂದು ಎಚ್ಚರಿಸಿದ್ದಾರೆ. ಜೊತೆಗೆ ಅವರ ಕುಟುಂಬದ ಬಗೆಗಿನ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಬಾಲಿವುಡ್‌ನ ಹಿರಿಯ ನಟ ದಿವಂಗತ ನಾನಾ ಪಾಟೇಕರ್ ಅವರ ನಿಧನದ ಬೆನ್ನಲ್ಲೇ ನಟಿ ತನುಶ್ರೀ ದತ್ತಾ ಮಾಡಿರುವ ಆರೋಪಗಳು ಹಾಗೂ ಕುಟುಂಬದ ಸುತ್ತ ಹಬ್ಬಿರುವ ವದಂತಿಗಳ ಕುರಿತು ಅವರ ಪುತ್ರ ಮಲ್ಹಾರ್ ಪಾಟೇಕರ್ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ, ಹಳೆಯ ಪ್ರಕರಣವನ್ನು ಅನಗತ್ಯವಾಗಿ ಮತ್ತೆ ಎಳೆದು ತರುತ್ತಿರುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ನ್ಯಾಯಾಂಗದ ಮೂಲಕ ಈಗಾಗಲೇ ಆ ಪ್ರಕರಣ ಇತ್ಯರ್ಥಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಂತಿಮವಾಗಿ ಸತ್ಯವೇ ಉಳಿಯುತ್ತದೆ

"ಯಾರ ಹೆಸರನ್ನೂ ಹೇಳದೆ ನಾನು ಸ್ಪಷ್ಟಪಡಿಸುವುದೇನೆಂದರೆ, ಜನರು ಅನಗತ್ಯವಾಗಿ ಪ್ರಸ್ತಾಪಿಸುತ್ತಿರುವ ಆ ವಿಷಯ ಈಗಾಗಲೇ ಮುಗಿದ ಅಧ್ಯಾಯ. ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಅದು ಸಂಪೂರ್ಣವಾಗಿ ಇತ್ಯರ್ಥವಾಗಿದೆ. ಪ್ರಕರಣ ಮುಕ್ತಾಯಗೊಂಡಿದ್ದರೂ ಕೆಲವರು ಇನ್ನೂ ಮಾತನಾಡುತ್ತಲೇ ಇದ್ದಾರೆ. ಅಂತಹವರಿಗೆ ನಾನೇನನ್ನೂ ಹೇಳಲು ಬಯಸುವುದಿಲ್ಲ. ಅಂತಿಮವಾಗಿ ಸತ್ಯವೇ ಉಳಿಯುತ್ತದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ, ನಾನು ಅವರಿಗೆ ಇಷ್ಟನ್ನೇ ಹಾರೈಸಬಲ್ಲೆ" ಎಂದು ಮಲ್ಹಾರ್ ಹೇಳಿದ್ದಾರೆ.

2018ರಲ್ಲಿ ‘ಹಾರ್ನ್ ಓಕೆ ಪ್ಲೀಸ್’ ಚಿತ್ರದ ಸೆಟ್‌ನಲ್ಲಿ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ತನುಶ್ರೀ ಆರೋಪಿಸಿದ್ದರು. ಇತ್ತೀಚೆಗೆ ನಾನಾ ಪಾಟೇಕರ್ ನಿಧನರಾದ ಬಳಿಕ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ತನುಶ್ರೀ, ಅವರನ್ನು ‘ಈವಿಲ್ ಡೆಡ್’ ಎಂದು ಕರೆದು, ತಮಗಾದ ಆಘಾತವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮತ್ತೆ ಆಕ್ರೋಶ ಹೊರಹಾಕಿದ್ದರು.

ಹಿರಿಯ ನಟ ನಾನಾ ಪಾಟೇಕರ್ ನಿಧನ; ಗೋವಾ ಪೊಲೀಸರಿಂದ ಅಸ್ವಾಭಾವಿಕ ಸಾವು ಪ್ರಕರಣ ದಾಖಲು!

ನನ್ನ ಪೋಷಕರ ನಡುವೆ ಅತ್ಯುತ್ತಮ ಬಾಂಧವ್ಯವಿತ್ತು

ಇನ್ನು, ಇದೇ ವೇಳೆ ತಮ್ಮ ಪೋಷಕರ ವೈವಾಹಿಕ ಜೀವನದ ಕುರಿತು ಹಬ್ಬಿದ್ದ ವದಂತಿಗಳಿಗೂ ಮಲ್ಹಾರ್ ತೆರೆ ಎಳೆದಿದ್ದಾರೆ. ನಾನಾ ಪಾಟೇಕರ್ ಮತ್ತು ನೀಲಕಾಂತಿ ಪಾಟೇಕರ್ ಬೇರ್ಪಟ್ಟಿದ್ದರಿಂದ ಕುಟುಂಬದಲ್ಲಿ ಕಹಿ ವಾತಾವರಣವಿತ್ತು ಎಂಬ ವರದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, "ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುವುದಿಲ್ಲ ಎಂದ ತಕ್ಷಣ ಸಂಬಂಧ ಚೆನ್ನಾಗಿಲ್ಲ ಎಂದರ್ಥವಲ್ಲ. ದೂರವಾದ ನಂತರವೂ ನನ್ನ ಪೋಷಕರ ನಡುವೆ ಅತ್ಯುತ್ತಮ ಬಾಂಧವ್ಯವಿತ್ತು. ಸುಮಾರು ನಾಲ್ಕು ದಶಕಗಳ ಕಾಲದ ಆ ಸುದೀರ್ಘ ಒಡನಾಟದಲ್ಲಿ, ಇಬ್ಬರೂ ನನಗೆ ಪ್ರೀತಿಯಿಂದ ತುಂಬಿದ ಸುಂದರ ಬಾಲ್ಯವನ್ನು ನೀಡಿದ್ದಾರೆ. ಹೊರಗಿನಿಂದ ಕಾಣುವ ಊಹಾಪೋಹಗಳೆಲ್ಲವೂ ಸತ್ಯವಾಗಿರುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಅದು ನನ್ನ ಜವಾಬ್ದಾರಿ

ತಂದೆಯ ಆರೋಗ್ಯ ಹಾಗೂ ಅವರು ಕೊನೆಯ ದಿನಗಳಲ್ಲಿ ಒಂಟಿಯಾಗಿದ್ದರು ಎಂಬ ಮಾತುಗಳನ್ನೂ ಮಲ್ಹಾರ್ ತಳ್ಳಿಹಾಕಿದ್ದಾರೆ. "ಅವರು ಎಂದಿಗೂ ಒಂಟಿಯಾಗಿರಲಿಲ್ಲ, ಅಸ್ವಸ್ಥರೂ ಆಗಿರಲಿಲ್ಲ. ಕುಟುಂಬದಲ್ಲಿ ಯಾರಾದರೊಬ್ಬರು ಸದಾ ಅವರ ಜೊತೆಯಲ್ಲೇ ಇರುತ್ತಿದ್ದೆವು. ದಿನಕ್ಕೆ ಎರಡೂವರೆ ಗಂಟೆ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದ ಅವರ ಫಿಟ್‌ನೆಸ್ ಯುವಕರಿಗೂ ಸ್ಫೂರ್ತಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಮಾಜ ಸೇವೆಯೇ ಅವರಿಗೆ ಅಪಾರ ನೆಮ್ಮದಿ ನೀಡಿತ್ತು. ಕಾಶ್ಮೀರದಲ್ಲಿ ಶಾಲೆಗಳನ್ನು ನಿರ್ಮಿಸುವುದು ಮತ್ತು ರೈತರ ಕಲ್ಯಾಣಕ್ಕಾಗಿ ಶ್ರಮಿಸುವುದೇ ಅವರ ಮುಖ್ಯ ಧ್ಯೇಯವಾಗಿತ್ತು. ಈಗ ಅವರ ಆ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿಯಾಗಿದೆ" ಎಂದು ಮಲ್ಹಾರ್ ತಿಳಿಸಿದ್ದಾರೆ.

ಅ.8ರಂದು ಸಾವನ್ನಪ್ಪಿದ್ದ ನಟ ನಾನಾ ಪಾಟೇಕರ್

ಅ.8 ರಂದು ಗೋವಾದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯು ಪುಣೆಯಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತ್ತು.