ಟಾಲಿವುಡ್‌ನ ನಟ ನಂದಮೂರಿ ಬಾಲಕೃಷ್ಣ ಅವರ 112ನೇ ಸಿನಿಮಾಗೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿದೆ. ಈ ಸಮಾರಂಭದಲ್ಲಿ ಆಂಧ್ರಪ್ರದೇಶದ ಸಚಿವರಾದ ನಾರಾ ಲೋಕೇಶ್ ಹಾಗೂ ಕಂದುಲ ದುರ್ಗೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶೇಷವೆಂದರೆ, ಮಾವ ಬಾಲಯ್ಯ ಅವರ ಈ ನೂತನ ಚಿತ್ರಕ್ಕೆ ಅಳಿಯ, ಸಚಿವ ನಾರಾ ಲೋಕೇಶ್ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಸಚಿವ ಕಂದುಲ ದುರ್ಗೇಶ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ಬಾಲಕೃಷ್ಣ ಅವರ ಪುತ್ರಿ ನಂದಮೂರಿ ತೇಜಸ್ವಿನಿ ಚಿತ್ರದ ಮೊದಲ ದೃಶ್ಯವನ್ನು ನಿರ್ದೇಶಿಸಿದರು. ಈ ವೇಳೆ ತೆಲುಗು ಚಿತ್ರರಂಗದ ಗಣ್ಯರಾದ ಸುರೇಶ್ ಬಾಬು, ನಿರ್ದೇಶಕ ಗೋಪಿಚಂದ್ ಮಲಿನೇನಿ, ನಿರ್ಮಾಪಕರಾದ ವೆಂಕಟ ಸತೀಶ್ ಕಿಲಾರು ಹಾಗೂ ಸಾಹು ಗರಪಾಟಿ ಉಪಸ್ಥಿತರಿದ್ದರು.
Urvashi Rautela: ಇದೊಂದು ವಿಚಾರಕ್ಕೆ ಬಾಲಯ್ಯ ನೆನೆದ ಊರ್ವಶಿ ರೌಟೇಲಾ!
ಬಾಲಯ್ಯ-ಕೊರಟಾಲ ಶಿವ ಫಸ್ಟ್ ಕಾಂಬಿನೇಷನ್!
'ಮಿರ್ಚಿ', 'ಶ್ರೀಮಂತುಡು', 'ಜನತಾ ಗ್ಯಾರೇಜ್', 'ಭರತ್ ಅನೆ ನೇನು' ಮುಂತಾದ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಸೆನ್ಸೇಷನಲ್ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಇದೇ ಮೊದಲ ಬಾರಿಗೆ ಬಾಲಯ್ಯ ಹಾಗೂ ಕೊರಟಾಲ ಶಿವ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಎಸ್‌ಎಲ್‌ವಿ ಸಿನಿಮಾಸ್ ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಸುಧಾಕರ್ ಚೆರುಕುರಿ ಹಾಗೂ ಸುಧಾಕರ್ ಮಿಕ್ಕಿಲಿನೇನಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಕೊರಟಾಲ ಶಿವ ಜೊತೆ ಇದು ನನ್ನ ಮೊದಲ ಸಿನಿಮಾ
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಕೃಷ್ಣ, "ಲಕ್ಷಾಂತರ ಅಭಿಮಾನಿಗಳ ಪ್ರೀತಿ, ವಾತ್ಸಲ್ಯ ಗಳಿಸಿರುವ ನಾನು ಅದೃಷ್ಟಶಾಲಿ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರಾದ ನಾರಾ ಲೋಕೇಶ್, ಕಂದುಲ ದುರ್ಗೇಶ್ ಹಾಗೂ ಮೊದಲ ದೃಶ್ಯ ನಿರ್ದೇಶಿಸಿದ ತೇಜಸ್ವಿನಿಗೆ ನನ್ನ ಧನ್ಯವಾದಗಳು. ತೇಜಸ್ವಿನಿ ಈ ಹಿಂದೆ ನನ್ನ 'ಅನ್‌ಸ್ಟಾಪಬಲ್' ಕಾರ್ಯಕ್ರಮದ ಕ್ರಿಯೇಟಿವ್ ವಿಭಾಗದಲ್ಲೂ ಕೆಲಸ ಮಾಡಿದ್ದಳು. ಇದು ಕೊರಟಾಲ ಶಿವ ಅವರೊಂದಿಗಿನ ನನ್ನ ಮೊದಲ ಚಿತ್ರವಾಗಿರುವುದರಿಂದ ಇನ್ನಷ್ಟು ವಿಶೇಷವಾಗಿದೆ" ಎಂದರು.
ಆಂಧ್ರಪ್ರದೇಶದಲ್ಲಿ ಚಿತ್ರರಂಗದ ಅಭಿವೃದ್ಧಿಗೆ ನಾವು ಬದ್ಧ
"ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪ್ರೋತ್ಸಾಹದೊಂದಿಗೆ ರಾಜ್ಯದಲ್ಲಿ ಚಿತ್ರೋದ್ಯಮದ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ವಿಜಯವಾಡವು ಸಿನಿಮಾ ಉದ್ಯಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದೆ. ಚಲನಚಿತ್ರೋದ್ಯಮದ ಬೆಳವಣಿಗೆಯ ಜೊತೆಗೆ, ಮನರಂಜನೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಯನ್ನೂ ನಾವು ಗುರಿಯಾಗಿಸಿಕೊಂಡಿದ್ದೇವೆ. ಎನ್‌ಟಿಆರ್ ಮತ್ತು ಎಎನ್‌ಆರ್‌ರಂತಹ ದಂತಕಥೆಗಳು ಜನಿಸಿದ ಈ ನೆಲದಲ್ಲಿ, ರಾಜ್ಯ ವಿಭಜನೆಯ ನಂತರವೂ ಚಿತ್ರರಂಗ ಬೆಳೆಯಬೇಕೆಂಬುದು ನಮ್ಮ ಆಶಯ" ಎಂದು ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಬಾಲಯ್ಯ ಪ್ರಸ್ತುತ ಗೋಪಿಚಂದ್ ಮಲಿನೇನಿ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಕಾಕಿನಾಡ ಬಂದರಿನಲ್ಲಿ ಇದರ ಚಿತ್ರೀಕರಣ ನಡೆಯುತ್ತಿದೆ. ಈ ಪ್ರಾಜೆಕ್ಟ್ ಮುಗಿದ ಬಳಿಕ ಆಂಧ್ರಪ್ರದೇಶದಲ್ಲಿ ನಡೆಯಲಿರುವ ಕೊರಟಾಲ ಶಿವ ಅವರ ಚಿತ್ರದ ಶೂಟಿಂಗ್‌ನಲ್ಲಿ ಬಾಲಕೃಷ್ಣ ಪಾಲ್ಗೊಳ್ಳಲಿದ್ದಾರೆ.