ನಂದಮೂರಿ ಬಾಲಕೃಷ್ಣ ಅವರ ಬಹುನಿರೀಕ್ಷಿತ ಚಿತ್ರ 'ಅಖಂಡ 2' ಡಿಸೆಂಬರ್ 12ರಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ನಿರ್ದೇಶಕ ಬೋಯಪಟಿ ಶ್ರೀನು ಮತ್ತು ಬಾಲಯ್ಯ ನಾಲ್ಕನೇ ಬಾರಿಗೆ ಜೊತೆಯಾಗಿ ಈ ಸಿನಿಮಾವನ್ನು ಮಾಡಿದ್ದಾರೆ. ಆದರೆ ಈ ಸಿನಿಮಾವು ಸಿಕ್ಕಾಪಟ್ಟೆ ನೆಗೆಟಿವ್ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೂ ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಹಿಂದೆ ಬಿದ್ದಿಲ್ಲ.
ಎಷ್ಟಾಗಿದೆ ಅಖಂಡ 2 ಕಲೆಕ್ಷನ್?
ನಂದಮೂರಿ ಬಾಲಕೃಷ್ಣ ಅಭಿನಯದ ʻಅಖಂಡ 2ʼ ಸಿನಿಮಾಕ್ಕೆ ರಿಲೀಸ್‌ಗೂ ಮುನ್ನವೇ ಪೇಯ್ಡ್ ಪ್ರೀಮಿಯರ್ ಶೋ ಮಾಡಲಾಗಿತ್ತು. ಅದರಿಂದಲೇ 8 ಕೋಟಿ ರೂ. ಹಣ ಹರಿದುಬಂದಿತ್ತು. ಬಳಿಕ ರಿಲೀಸ್ ಆದ ಮೊದಲ ದಿನ 22.50 ಕೋಟಿ ರೂ. ಸಿಕ್ಕಿದರೆ, ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಒಂಚೂರು ಕುಸಿತ ಕಂಡಿತು. ಎರಡನೇ ದಿನ 15.60 ಕೋಟಿ ರೂ. ಗಳಿಕೆಯಾಗಿದೆ. ಒಟ್ಟು ಮೊದಲ ಎರಡು ದಿನಗಳಿಗೆ ಈ ಚಿತ್ರವು 45+ ಕೋಟಿ ರೂ. ಗಳಿಕೆ ಮಾಡಿದೆ ಎಂದು Sacnilk ವರದಿ ಮಾಡಿದೆ.
ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಇದ್ದಾಗ್ಯೂ ಇಷ್ಟೊಂದು ಗಳಿಕೆ ಆಗುತ್ತಿರುವುದು ಅಚ್ಚರಿ ಎಂದೇ ಹೇಳಬಹುದು. ಆದರೆ ಚಿತ್ರತಂಡದ ಪ್ರಕಾರ, ಮೊದಲ ದಿನ + ಪೇಯ್ಡ್ ಪ್ರೀಮಿಯರ್ ಶೋ ಮೂಲಕವೇ ʻಅಖಂಡ 2ʼ ಸಿನಿಮಾವು 59.50 ಕೋಟಿ ರೂ. ಗಳಿಸಿದೆಯಂತೆ. ಆದರೆ ಎರಡನೇ ದಿನದ ಗಳಿಕೆಯನ್ನು ಚಿತ್ರತಂಡ ಘೋಷಿಸಿಲ್ಲ.
ಇನ್ನು, ಭಾನುವಾರ ರಜಾ ದಿನವಾದ್ದರಿಂದ ಇಂದು (ಡಿ.14) ಕೂಡ ಸುಮಾರು 15-20 ಕೋಟಿ ರೂ. ಗಳಿಕೆ ಆಗುವ ನಿರೀಕ್ಷೆ ಇದೆ. ಅಲ್ಲಿಗೆ ಮೊದಲ ವಾರಾಂತ್ಯಕ್ಕೆ ಸುಮಾರು 60+ ಕೋಟಿ ರೂ. ಗಳಿಕೆ ಆಗುವ ಸಾಧ್ಯತೆಗಳಿವೆ. ಈ ಚಿತ್ರವನ್ನು ವಿತರಕರು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.
ಅಲ್ಲದೆ, ಈ ಸಿನಿಮಾಕ್ಕೆ ಸುಮಾರು 150 ಕೋಟಿ ರೂ. ಬಜೆಟ್ ಹೂಡಿಕೆ ಮಾಡಲಾಗಿದೆ. ಹಾಗಾಗಿ, ಈ ಪ್ರಮಾಣದ ಗಳಿಕೆಯಿಂದ ನಿರ್ಮಾಪಕರು ಲಾಭ ನೋಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ಯಾವ ರೀತಿಯ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ʻಅಖಂಡ 2ʼ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ಸಂಯುಕ್ತ ಮೆನನ್, ಆದಿ ಪಿನಿಸೆಟ್ಟಿ, ಹರ್ಷಾಲಿ ಮಲ್ಹೋತ್ರಾ, ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್ ಮತ್ತು ಶಾಶ್ವತಾ ಚಟರ್ಜಿ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು 14 ರೀಲ್ಸ್ ಪ್ಲಸ್ ಮತ್ತು IV ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.