ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

The Paradise Review: ಸ್ವರ್ಗದ ಹೆಸರಲ್ಲಿ ನರಕ ತೋರಿಸಿದ ನಾನಿ! ಪ್ರತಿ ದೃಶ್ಯದಲ್ಲೂ ರಾಚುವ ರಕ್ತದ ಹನಿ!

The Paradise Movie Review: ನಟ ನಾನಿ ಮತ್ತು ಶ್ರೀಕಾಂತ್ ಒಡೆಲಾ ಜೋಡಿಯ ‘ದಿ ಪ್ಯಾರಡೈಸ್’ ಚಿತ್ರವು ತೆರೆಕಂಡಿದೆ. ನಟನೆಯಲ್ಲಿ ನಾನಿ ಮಿಂಚಿದ್ದರೂ, ಚಿತ್ರದಲ್ಲಿನ ಮಿತಿಮೀರಿದ ರಕ್ತಪಾತ, ನಿಧಾನಗತಿಯ ದ್ವಿತೀಯಾರ್ಧ ಹಾಗೂ ದುರ್ಬಲ ತಾಯಿ-ಮಗನ ಸೆಂಟಿಮೆಂಟ್‌ ಪ್ರೇಕ್ಷಕರನ್ನು ನಿರಾಸೆಗೊಳಿಸುತ್ತದೆ. ಈ ಚಿತ್ರದ ಪೂರ್ಣ ವಿಮರ್ಶೆ ಇಲ್ಲಿದೆ.

ಸಿನಿಮಾ: ದಿ ಪ್ಯಾರಡೈಸ್‌

ತಾರಾಗಣ: ನಾನಿ, ಮೋಹನ್ ಬಾಬು, ಕಯಾದು ಲೋಹರ್, ಸಂಪೂರ್ಣೇಶ್ ಬಾಬು, ಸೋನಾಲಿ ಕುಲಕರ್ಣಿ, ರಾಘವ್ ಜುಯಾಲ್

ನಿರ್ದೇಶನ: ಶ್ರೀಕಾಂತ್‌ ಒಡೆಲಾ

ಸಂಗೀತ: ಅನಿರುದ್ಧ್‌

ಅವಧಿ: 2 ಗಂಟೆ 54 ನಿಮಿಷ

ರೇಟಿಂಗ್: 2.5/5

‘ದಸರಾ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲಾ ಜೋಡಿ ‘ದಿ ಪ್ಯಾರಡೈಸ್’ ಚಿತ್ರದ ಮೂಲಕ ಮತ್ತೆ ಒಂದಾದಾಗ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿದ್ದವು. ಹಾಡುಗಳು ಹಾಗೂ ನಟ ನಾನಿ ಅವರ ವಿಭಿನ್ನ ಲುಕ್ ಚಿತ್ರದ ಮೇಲಿನ ಹೈಪ್ ಅನ್ನು ದುಪ್ಪಟ್ಟು ಮಾಡಿದ್ದಂತೂ ಸುಳ್ಳಲ್ಲ. ಆದರೆ, ಈ ಎಲ್ಲಾ ನಿರೀಕ್ಷೆಗಳನ್ನು ‘ದಿ ಪ್ಯಾರಡೈಸ್’ ಸಿನಿಮಾ ತಲುಪಿತೇ? ಪ್ರೇಕ್ಷಕರಿಗೆ ಈ ಸಿನಿಮಾ ಖುಷಿ ನೀಡಿತೇ? ಇಲ್ಲಿದೆ ಚಿತ್ರದ ವಿಮರ್ಶೆ.

ಏನಿದು ‘ದಿ ಪ್ಯಾರಡೈಸ್’?

ಶಿಕಾಂಜ ಮಲಿಕ್ (ಮೋಹನ್ ಬಾಬು) ಎಂಬ ಕ್ರೂರಿಯ ಹಿಡಿತದಲ್ಲಿ ನಲುಗುವ ‘ಸವಾರಿ’ ಸಮುದಾಯಕ್ಕೆ ಯಾವುದೇ ಸೂಕ್ತ ಮಾನ್ಯತೆ ಇರುವುದಿಲ್ಲ. ಕೊಳಚೆ ಪ್ರದೇಶದಂತಿರುವ ಅವರ ಜಾಗದ ಹೆಸರೇ ಪ್ಯಾರಡೈಸ್! ಅಲ್ಲಿರುವ ಜನರಿಗೆ ಒಂದು ಗುರುತು ಸಿಗಬೇಕೆಂದು ಸಮ್ಮಕ್ಕ (ಸೋನಾಲಿ ಕುಲಕರ್ಣಿ) ಹೋರಾಡುತ್ತಿರುತ್ತಾಳೆ. ಆದರೆ ಶಿಕಾಂಜ ಇದನ್ನು ಸಹಿಸದೆ ಆ ಜನರಿಗೆ ಹಿಂಸೆ ನೀಡುತ್ತಾನೆ; ಸಮ್ಮಕ್ಕಳ ಮಗ ಜಡಾಲ್‌ಗೆ (ನಾನಿ) ಸ್ವಂತ ತಾಯಿಯ ಮೇಲೆಯೇ ದ್ವೇಷ ಹುಟ್ಟುವಂತೆ ಮಾಡುತ್ತಾನೆ. ಅತ್ತ ಜಡಾಲ್‌ ಕೂಡ ಶಿಕಾಂಜನ ಕಡೆಯವನೊಬ್ಬನನ್ನು ಕೊಂದು ಜೈಲು ಸೇರುತ್ತಾನೆ.

ಜೈಲಿನಿಂದ ವಾಪಸ್ ಬಂದಮೇಲೆ ಜಡಾಲ್‌ನ ನೇರ ಗುರಿ ಶಿಕಾಂಜ ಮಲಿಕ್ ಮತ್ತು ಅವನ ಮಗ ವಿಕ್ರಮ್ ಮಲಿಕ್ (ರಾಘವ್ ಜುಯಾಲ್)! ಜಡಾಲ್ ಮಲಿಕ್ ಕುಟುಂಬವನ್ನು ಸದೆಬಡಿಯುತ್ತಾನಾ? ಅಮ್ಮನ ತ್ಯಾಗ ಮತ್ತು ಪ್ರೀತಿ ಆತನಿಗೆ ಅರ್ಥವಾಗುತ್ತದೆಯೇ? ಅಂತಿಮವಾಗಿ ಸವಾರಿ ಜನಾಂಗಕ್ಕೆ ಸ್ವಾತಂತ್ರ್ಯ ಮತ್ತು ಗುರುತು ಸಿಗುತ್ತದೆಯೇ? ಎಂಬುದೇ ‘ದಿ ಪ್ಯಾರಡೈಸ್’ ಸಿನಿಮಾದ ಮುಖ್ಯ ಕಥಾವಸ್ತು.

ಸಿನಿಮಾದ ಮೇಕಿಂಗ್ ಹೇಗಿದೆ?

ದಬ್ಬಾಳಿಕೆಗೆ ಒಳಗಾದ ಜನಸಮುದಾಯ, ಒಬ್ಬ ಕ್ರೂರ ಖಳನಾಯಕ ಮತ್ತು ಅವರ ಮಧ್ಯೆಯೇ ಹುಟ್ಟಿಬರುವ ಒಬ್ಬ ರಕ್ಷಕ.. ಇದು ಭಾರತೀಯ ಚಿತ್ರರಂಗ ಕಂಡುಕೊಂಡಿರುವ ಹಳೆಯ ಸೂತ್ರವೇ. ಆದರೆ ಶ್ರೀಕಾಂತ್ ಒಡೆಲಾ ಈ ಸರಳ ಎಳೆಗೆ ತಮ್ಮದೇ ಆದ 'ರಾ ಆ್ಯಂಡ್ ರಸ್ಟಿಕ್' ಮೇಕಿಂಗ್ ಸ್ಪರ್ಶ ನೀಡಿದ್ದಾರೆ. ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ಹಿನ್ನೆಲೆ, ಸಂಘರ್ಷ ಹಾಗೂ ಬಂಡಾಯವನ್ನು ಒಟ್ಟಿಗೇ ತುರುಕಲು ಹೋಗಿರುವುದರಿಂದ, ಇಡೀ ಸಿನಿಮಾದ ಉದ್ದಕ್ಕೂ ಪ್ರತಿಯೊಂದು ಸನ್ನಿವೇಶವೂ ಒಂದೊಂದು ‘ಕ್ಲೈಮ್ಯಾಕ್ಸ್’ನಂತೆ ಭಾಸವಾಗಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಜೊತೆಗೆ, ಕಾಲ್ಪನಿಕ ಕಥೆಗೆ ನೈಜ ತೆಲಂಗಾಣ ಹೋರಾಟದ ಲೇಪನ ನೀಡಲು ಹೋಗಿರುವುದು ಚಿತ್ರಕ್ಕೆ ಮತ್ತೊಂದು ಹಿನ್ನಡೆ. ಮಾಜಿ ಸಿಎಂ ಕೆಸಿಆರ್ ಅವರ ಲುಕ್‌, ಭಾಷಾ ಶೈಲಿ ಹಾಗೂ ಮ್ಯಾನರಿಸಂ ಅನ್ನು ನೇರವಾಗಿ ಹೋಲುವ ಪಾತ್ರವನ್ನಿಟ್ಟುಕೊಂಡು ಕಾಲ್ಪನಿಕ ಕಥೆಯೊಳಗೆ ರಾಜಕೀಯವನ್ನು ಅನಗತ್ಯವಾಗಿ ತುರುಕಿದಂತೆ ಭಾಸವಾಗುತ್ತದೆ.

Actor Nani: 'ಹಿಟ್ 3' ಚಿತ್ರದ ಬೆಚ್ಚಿಬೀಳಿಸುವ ಟೀಸರ್ ಔಟ್‌; ಬರ್ತ್‌ಡೇ ದಿನ ಮಾಸ್ ರೂಪ ತಾಳಿದ ನಾನಿ

ಸುಮಾರು 2 ಗಂಟೆ 54 ನಿಮಿಷಗಳ ಸುದೀರ್ಘ ಸಿನಿಮಾದಲ್ಲಿ ಮೊದಲಾರ್ಧ ಸಹನೀಯವಾಗಿದೆ. ಆದರೆ ದ್ವಿತೀಯಾರ್ಧದಲ್ಲೇ ಇರುವುದು ಅಸಲಿ ಪರೀಕ್ಷೆ! ಚಿತ್ರದ ಆರಂಭದಲ್ಲೇ ಬರುವ ಜೈಲು ಫೈಟ್ ಕ್ಲೈಮ್ಯಾಕ್ಸ್ ಮಟ್ಟದ ತೀವ್ರತೆ ಹೊಂದಿದ್ದು, ಸಿನಿಮಾದ ಗತಿಯನ್ನು ಹೆಚ್ಚಿಸುತ್ತದೆ. ಇಂಟರ್‌ವಲ್‌ಗೂ ಮುಂಚಿನ ದೃಶ್ಯ, ಪ್ರೀ-ಕ್ಲೈಮ್ಯಾಕ್ಸ್ ಹಂತದಲ್ಲಿ ಬರುವ ಆ್ಯಕ್ಷನ್ ಸನ್ನಿವೇಶ ಚಿತ್ರಮಂದಿರದಲ್ಲಿ ರೋಮಾಂಚನ ಉಂಟುಮಾಡುತ್ತದೆ. ಅಲ್ಲಲ್ಲಿ ಕೆಲವು ಬಿಗಿ ದೃಶ್ಯಗಳಿರುವ ಕಾರಣ ಮೊದಲಾರ್ಧ ಸರಾಗವಾಗಿ ಸಾಗುತ್ತದೆಯಾದರೂ, ದ್ವಿತೀಯಾರ್ಧವು ಸುದೀರ್ಘ ಹೊಡೆದಾಟ ಮತ್ತು ಉದ್ದುದ್ದದ ಸಂಭಾಷಣೆಗಳ ಭಾರಕ್ಕೆ ಸಿಲುಕಿ ನಲುಗುತ್ತದೆ.

ಇಲ್ಲಿ ತಾಯಿ-ಮಗನ ಕಥೆಗೆ ಹೆಚ್ಚಿನ ಅವಕಾಶವಿದೆ. ಆದರೆ, ಆ ಬಾಂಧವ್ಯವನ್ನು ಮನಮುಟ್ಟುವಂತೆ ತೋರಿಸಲು ಬೇಕಾದ ಗಟ್ಟಿ ದೃಶ್ಯಗಳೇ ಇಲ್ಲ; ನಿರ್ದೇಶಕ ಶ್ರೀಕಾಂತ್ ಇಷ್ಟೊಂದು ಅಜಾಗರೂಕತೆಯನ್ನು ಏಕೆ ತೋರಿದರೋ ತಿಳಿಯದು! ಇಡೀ ಸಿನಿಮಾ ಬೇಡವೆಂದರೂ ಕನ್ನಡದ ‘ಕೆಜಿಎಫ್’ ಚಿತ್ರದ ತಿರುಳನ್ನು ನೆನಪಿಸುತ್ತದೆ. ಇನ್ನು, ಅನಿರುದ್ಧ್ ಅವರ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳು ಉತ್ತಮವಾಗಿದ್ದು, ಹಿನ್ನೆಲೆ ಸಂಗೀತ ಕೂಡ ಕಿಕ್‌ ನೀಡುವಂತೆ ಇದೆ.

ಜಡಾಲ್ ಆಗಿ ನಾನಿ ಖಡಕ್!

ನಟ ನಾನಿ ರಗಡ್ ಲುಕ್, ಮಾಸ್ ಮ್ಯಾನರಿಸಂ ಮತ್ತು ಭಾವನಾತ್ಮಕ ದೃಶ್ಯಗಳಲ್ಲಿ ಮಿಂಚಿದ್ದಾರೆ. ಆದರೆ ತೆಲಂಗಾಣ ಹಿನ್ನೆಲೆಯ ಕಥೆಯಾಗಿದ್ದರೂ, ಅವರ ಸಂಭಾಷಣೆಯಲ್ಲಿ ಆ ನೆಲದ ಭಾಷಾ ಶೈಲಿಯ ಕೊರತೆ ಎದ್ದು ಕಾಣುತ್ತದೆ. ಶಿಕಾಂಜ ಮಲಿಕ್ ಆಗಿ ಮೋಹನ್ ಬಾಬು ತಮ್ಮ ಖಳನಾಯಕನ ಪಾತ್ರದ ಮೂಲಕ ಪರದೆಯ ಮೇಲೆ ಆವರಿಸಿಕೊಳ್ಳುತ್ತಾರೆ. ಆದರೆ ಆರಂಭದಲ್ಲಿ ಖಡಕ್ ಎನಿಸುವ ಅವರ ಪಾತ್ರ, ಕಡೆಕಡೆಗೆ ಪೇಲವವಾಗುವುದು ಬೇಸರ ಮೂಡಿಸುತ್ತದೆ. ಕಯಾದು ಲೋಹರ್ ಗ್ಲಾಮರ್‌ಗೆ ಮಾತ್ರ ಸೀಮಿತವಾಗಿದ್ದಾರೆ. ರಾಘವ್ ಜುಯಾಲ್, ಸೋನಾಲಿ ಕುಲಕರ್ಣಿ, ಈಶ್ವರಿ ರಾವ್ ಮತ್ತು ಸಂಪೂರ್ಣೇಶ್ ಬಾಬು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಕೊನೆಯದಾಗಿ, ಸಿನಿಮಾದಲ್ಲಿ ವಿಪರೀತ ಹಿಂಸೆಯಿದೆ. ಆ ಪ್ರಮಾಣದಲ್ಲಿ ರಕ್ತ ಹರಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಪದೇಪದೇ ಕಾಡುತ್ತದೆ. ಮನುಷ್ಯರ ದೇಹಗಳನ್ನು ಹೇಗೆಲ್ಲಾ ಡಿಸೈನ್‌ ಡಿಸೈನ್ ತುಂಡರಿಸಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಅತಿಯಾದ ಹಿಂಸೆ ಹಾಗೂ ರಕ್ತಪಾತವನ್ನು ನೋಡಲಾಗದವರು ಈ ಸಿನಿಮಾದಿಂದ ದೂರವಿರುವುದೇ ಒಳಿತು!‌