ಕಳೆದ ವರ್ಷ ತೆರೆಕಂಡು ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಸಿನಿಮಾ ʻಸು ಫ್ರಮ್ ಸೋʼ. ಜೆಪಿ ತುಮಿನಾಡು ನಟಿಸಿ, ನಿರ್ದೇಶಿಸಿದ್ದ ಈ ಚಿತ್ರ ಮಾಡಿದ್ದ ಮೋಡಿ ಎಲ್ಲರಿಗೂ ಗೊತ್ತಿದೆ. ಇದೀಗ ಕರಾವಳಿ ಸೊಗಡಿನ ಕಾಮಿಡಿ ಸಿನಿಮಾ ಕನ್ನಡಿಗರನ್ನು ನಗಿಸಲು ರೆಡಿಯಾಗುತ್ತಿದೆ. ಯಾವುದು ಆ ಸಿನಿಮಾ? ʻಮ್ಯಾರೇಜ್ ಪಾರ್ಟಿʼ.
ಹೌದು, ರೂಪೇಶ್ ಶೆಟ್ಟಿ ನಟಿಸಿದ್ದ ʻಅಧಿಪತ್ರʼ ಚಿತ್ರದ ಮೂಲಕ ನಿರ್ದೇಶಕರಾಗಿ ಗಮನ ಸೆಳೆದ ಚಯನ್ ಶೆಟ್ಟಿ, ಇದೀಗ ಪಕ್ಕಾ ಕಾಮಿಡಿ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ. ಅದೇ `ಮ್ಯಾರೇಜ್ ಪಾರ್ಟಿ'. ಸದ್ದುಗದ್ದಲವಿಲ್ಲದೆ ʻಮ್ಯಾರೇಜ್ ಪಾರ್ಟಿʼ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇದೊಂದು ಹಾಸ್ಯಪ್ರಧಾನ ಸಿನಿಮಾವಾಗಿದ್ದು, ಸಿನಿಮಾಪೂರ್ತಿ ನಗು ಮಿಸ್ಸೇ ಇಲ್ಲವಂತೆ.
ಕುಂದಾಪುರ ಸುತ್ತಮುತ್ತ ಶೂಟಿಂಗ್
"ಪ್ರತಿ ಹಂತದಲ್ಲಿಯೂ ಕಚಗುಳಿಯಿಡುವ ಕಾಮಿಡಿಯ ಮೂಲಕ ಈ ಚಿತ್ರವನ್ನು ಕಟ್ಟಿ ಕೊಡಲು ನಿರ್ಧರಿಸಿದ್ದೇವೆ. ಇಡೀ ಕಥೆ ಒಂದು ಊರಿನಲ್ಲಿ ನಡೆಯುತ್ತದೆ. ʻಮ್ಯಾರೇಜ್ ಪಾರ್ಟಿʼ ಚಿತ್ರದ ಚಿತ್ರೀಕರಣ ಕುಂದಾಪುರದ ಲೊಕೇಷನ್‌ಗಳಲ್ಲಿ ನಡೆದಿದೆ. ಈಗಾಗಲೇ ಮೊದಲ ಹಂತದಲ್ಲಿ ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಎರಡನೇ ಹಂತದ ಚಿತ್ರೀಕರಣ ಶುರುವಾಗಿದೆ" ಎನ್ನುತ್ತಾರೆ ನಿರ್ದೇಶಕರು. ಮೂಲತಃ ಕುಂದಾಪುರದವರೇ ಆಗಿರುವ ನಿರ್ದೇಶಕ ಚಯನ್ ಶೆಟ್ಟಿ ತಮ್ಮೂರಿನಲ್ಲಿ ನಡೆಯುವ ಮಜವಾದ ಕಥೆಯೊಂದನ್ನು ಮ್ಯಾರೇಜ್ ಸ್ಟೋರಿ ಮೂಲಕ ಹೇಳುತ್ತಿದ್ದಾರಂತೆ.
ʻಮ್ಯಾರೇಜ್ ಪಾರ್ಟಿʼ ಚಿತ್ರದಲ್ಲಿ ವಿನೀತ್ ಕುಮಾರ್ ಹೀರೋ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಹಲವಾರು ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ ವಿನೀತ್, ಮ್ಯಾರೇಜ್ ಪಾರ್ಟಿ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಜೊತೆಗೆ ಸು ಫ್ರಮ್ ಸೋ, ಕಾಂತಾರ ಸಿನಿಮಾಗಳಲ್ಲಿ ನಟಿಸಿದ್ದ ಪ್ರಕಾಶ್ ತುಮಿನಾಡು, ದೀಪಕ್ ರೈ, ರಾಮ್‌ದಾಸ್, ಪುಷ್ಪರಾಜ್ ಬೋಳಾರ್ ಮುಂತಾದವರು ಈ ಚಿತ್ರದಲ್ಲಿದ್ದಾರೆ. ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಘು ಪಾಂಡೇಶ್ವರ ಮುಂತಾದವರು ನಟಿಸುತ್ತಿರುವ ಈ ಚಿತ್ರವನ್ನು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ ಮಾಡಲಾಗುತ್ತಿದೆ.
ವರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್. ವಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ನಿರ್ಮಾಣದ ಮೊದಲ ಸಿನಿಮಾ. ಇನ್ನುಳಿದಂತೆ, ಛಾಯಾಗ್ರಹಣವನ್ನು ಶ್ರೀಕಾಂತ್ ಮಾಡುತ್ತಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಇದೆ. ʻಸು ಫ್ರಂ ಸೋʼ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ ಮಾಡುತ್ತಿದ್ದು, ಹಾಡುಗಳಿಗೆ ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಬರೆಯುತ್ತಿದ್ದಾರೆ.