ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‘ಮೂಕುತಿ ಅಮ್ಮನ್ 2’ ಟ್ರೇಲರ್ ರಿಲೀಸ್: ದ್ವಿಪಾತ್ರದಲ್ಲಿ ಅಬ್ಬರಿಸಿದ ನಯನತಾರಾ, ಖಳನಾಯಕರಾಗಿ ಮಿಂಚಿದ ‘ದುನಿಯಾ’ ವಿಜಯ್!

Mookuthi Amman 2 Trailer: ‘ಮೂಕುತಿ ಅಮ್ಮನ್ 2’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಲೇಡಿ ಸೂಪರ್‌ಸ್ಟಾರ್ ನಯನತಾರಾ ಪೊಲೀಸ್ ಪೇದೆ ಹಾಗೂ ಶಕ್ತಿಶಾಲಿ ದೇವತೆಯಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಪೌರಾಣಿಕ ರಾಕ್ಷಸನಾಗಿ ಕನ್ನಡದ ದುನಿಯಾ ವಿಜಯ್ ಅಬ್ಬರಿಸಿದ್ದಾರೆ.

ಲೇಡಿ ಸೂಪರ್‌ಸ್ಟಾರ್ ನಯನತಾರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಮೂಕುತಿ ಅಮ್ಮನ್ 2’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಸಿದ್ಧವಾಗಿರುವ ಈ ಸೀಕ್ವೆಲ್‌ನಲ್ಲಿ ನಯನತಾರಾ ಪೊಲೀಸ್ ಅಧಿಕಾರಿ ಹಾಗೂ ದೇವತೆಯಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಜೊತೆಗೆ ಕನ್ನಡದ ಖ್ಯಾತ ನಟ ‘ದುನಿಯಾ’ ವಿಜಯ್ ಪ್ರಮುಖ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಿರುವುದು ಸ್ಯಾಂಡಲ್‌ವುಡ್ ಪ್ರೇಕ್ಷಕರಲ್ಲೂ ಚಿತ್ರದ ಬಗೆಗಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

ಎರಡು ಪಾತ್ರಗಳಲ್ಲಿ ನಯನತಾರಾ

ಟ್ರೇಲರ್‌ನಲ್ಲಿ ಪರಿಚಯಿಸಿರುವ ಕಥಾಹಂದರದ ಪ್ರಕಾರ, ಭೂಮಿಯ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ದುರುದ್ದೇಶದಿಂದ ಧರೆಗಿಳಿಯುವ ಪೌರಾಣಿಕ ರಾಕ್ಷಸರಾಗಿ ರೆಜಿನಾ ಕ್ಯಾಸಂಡ್ರಾ ಹಾಗೂ ದುನಿಯಾ ವಿಜಯ್ ಅಬ್ಬರಿಸಿದ್ದಾರೆ. ಇವರ ಅಟ್ಟಹಾಸ ಮಿತಿಮೀರಿ ಮಕ್ಕಳು ಸೇರಿದಂತೆ ಮುಗ್ಧ ಜನರ ಪ್ರಾಣಕ್ಕೆ ಕುತ್ತು ಬಂದಾಗ, ರಕ್ಷಣೆಗೆ ನಿಲ್ಲುವುದು ಅಂಜುಬುರುಕ ಪೊಲೀಸ್ ಸಿಬ್ಬಂದಿ. ಒಂಟಿಯಾಗಿ ಮಲಗಲು ಕೂಡ ಭಯಪಡುವ ಸ್ವಭಾವದ ಪೇದೆಯಾಗಿ ನಯನತಾರಾ ಹಾಸ್ಯ ಮತ್ತು ಮುಗ್ಧತೆಯಿಂದ ರಂಜಿಸಿದ್ದಾರೆ. ಆದರೆ ಅದೇ ಸಮಯದಲ್ಲಿ ಶಕ್ತಿಶಾಲಿ ‘ಮೂಕುತಿ ಅಮ್ಮನ್’ ದೇವತೆಯಾಗಿ ಪ್ರತ್ಯಕ್ಷಳಾಗುವ ಮತ್ತೊಂದು ಅವತಾರವು ರಾಕ್ಷಸರ ಸಂಹಾರಕ್ಕೆ ಮುನ್ನುಡಿ ಬರೆಯುತ್ತದೆ.

ಬಾಕ್ಸ್‌ ಆಫೀಸ್‌ ಫೈಟ್‌ ಗ್ಯಾರಂಟಿ

ಈ ಚಿತ್ರವು ನವೆಂಬರ್ 6 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರಕ್ಕೆ ತೀವ್ರ ಪೈಪೋಟಿ ಎದುರಾಗಲಿದ್ದು, ನಟ ಸೂರ್ಯ ಅಭಿನಯದ ‘ಸೀನ್’ ಹಾಗೂ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ರಾಮಾಯಣ: ಪಾರ್ಟ್ 1’ ಸಿನಿಮಾಗಳ ಜೊತೆ ಗಲ್ಲಾಪೆಟ್ಟಿಗೆಯಲ್ಲಿ ನೇರ ಮುಖಾಮುಖಿಯಾಗಲಿದೆ.

Nayanthara: ಪತ್ನಿಯಾಗಿ ವೇದಿಕೆ ಏರಿದ ನಯನತಾರಾ! ವಿಘ್ನೇಶ್ ಶಿವನ್ ಭಾವುಕ

ವಿಶೇಷವೆಂದರೆ, ಮೊದಲ ಭಾಗವನ್ನು ನಿರ್ದೇಶಿಸಿ ನಾಯಕನಾಗಿಯೂ ನಟಿಸಿದ್ದ ಆರ್‌ಜೆ ಬಾಲಾಜಿ ಈ ಚಿತ್ರತಂಡದಿಂದ ದೂರ ಉಳಿದಿದ್ದು, ತಮಗೂ ಈ ಸೀಕ್ವೆಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಬಾರಿ ಚಿತ್ರವನ್ನು ಸಂಪೂರ್ಣವಾಗಿ ಸುಂದರ್ ಸಿ. ಅವರು ತಮ್ಮದೇ ಶೈಲಿಯಲ್ಲಿ ನಿರ್ದೇಶಿಸಿದ್ದಾರೆ.

ಹಿಪ್‌ಹಾಪ್ ತಮಿಳ ಸಂಗೀತ ಸಂಯೋಜನೆ

ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಕಾಣಿಸಿಕೊಂಡಿದ್ದು, ಊರ್ವಶಿ, ಯೋಗಿ ಬಾಬು, ಮೈನಾ ನಂದಿನಿ, ‘ಕೆಜಿಎಫ್’ ಖ್ಯಾತಿಯ ಗರುಡ ರಾಮ್, ಅಭಿನಯ, ಶ್ರುತಿ ಎಸ್, ಸಿಂಗಂಪುಲಿ ಅಣ್ಣಾವಿ, ಸುನಿಲ್ ವರ್ಮಾ, ಪಳ ಕರುಪ್ಪಯ್ಯ, ನಿತಿನ್ ಸತ್ಯ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ತಾಂತ್ರಿಕವಾಗಿಯೂ ಚಿತ್ರ ಶ್ರೀಮಂತವಾಗಿದ್ದು, ಸುಂದರ್ ಸಿ ಅವರ ಆಪ್ತ ಹಿಪ್‌ಹಾಪ್ ತಮಿಳ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೋಪಿ ಅಮರನಾಥ್ ಛಾಯಾಗ್ರಹಣ, ಫೆನ್ನಿ ಆಲಿವರ್ ಸಂಕಲನ, ರಾಜಶೇಖರ್ ಕೆ ಸಾಹಸ ನಿರ್ದೇಶನ ಹಾಗೂ ವೆಂಕಟ್ ರಾಘವನ್ ಸಂಭಾಷಣೆ ಒದಗಿಸಿದ್ದಾರೆ. ವೇಲ್ಸ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಐಶಾರಿ ಕೆ. ಗಣೇಶ್ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.