ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾವು ಮಾರ್ಚ್ 19ರಂದು ತೆರೆಗೆ ಬರಲು ಸಜ್ಜಾಗುತ್ತಿದ್ದು, ಚಿತ್ರದ ಮೇಲಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸುತ್ತಿರುವ ಚಿತ್ರತಂಡ, ಇದೀಗ ನಟಿ ನಯನತಾರಾ ಅವರ 'ಗಂಗಾ' ಪಾತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಗಂಗಾ ಪಾತ್ರವು ಟಾಕ್ಸಿಕ್ ಸಿನಿಮಾದಲ್ಲಿನ ಪ್ರಬಲ ಪಾತ್ರ ಎಂದು ಹೇಳಲಾಗಿದೆ.
ಬಹುಮುಖ ಪ್ರತಿಭೆಯಿಂದಾಗಿ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಯನತಾರಾ ಅವರು 'ಟಾಕ್ಸಿಕ್' ಮೂಲಕ ಕನ್ನಡಕ್ಕೆ ಮರಳಿದ್ದಾರೆ. ಈ ಹಿಂದೆ ಉಪೇಂದ್ರ ಅವರ ಸೂಪರ್ ಸಿನಿಮಾದಲ್ಲಿ ನಯನತಾರಾ ನಟಿಸಿದ್ದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಯನತಾರಾ ದಂಪತಿ, ಸರ್ಪಸಂಸ್ಕಾರದಲ್ಲಿ ಭಾಗಿ
ಟಾಕ್ಸಿಕ್ ಸಿನಿಮಾದಲ್ಲಿನ ಅವರ ಪಾತ್ರವು ಪ್ರೇಕ್ಷಕರಿಗೆ ಸಂಪೂರ್ಣವಾಗಿ ಹೊಸ ನಯನತಾರಾ ಅವರನ್ನು ಪರಿಚಯ ಮಾಡಿಸಲಿದೆಯಂತೆ. ಗಂಗಾ ಪಾತ್ರದಲ್ಲಿ ನಯನತಾರಾ ಅವರ ರೂಪವು ಕಣ್ಮನ ಸೆಳೆಯುವಂತಿದೆ. ಜೊತೆಗೆ ಅವರ ಭಯರಹಿತ ವ್ಯಕ್ತಿತ್ವ ಈ ಫಸ್ಟ್‌ಲುಕ್‌ನಲ್ಲಿ ಎದ್ದು ಕಾಣುತ್ತಿದೆ. ಕೈಯಲ್ಲಿ ಗನ್ ಹಿಡಿದು ಅವರು ನೀಡಿರುವ ಪೋಸ್ ಆಕರ್ಷಕವಾಗಿದೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಏನಂದ್ರು?
"ನಮಗೆಲ್ಲರಿಗೂ ತಿಳಿದಿರುವಂತೆ ನಯನತಾರಾ ಕಳೆದ ಎರಡು ದಶಕಗಳಿಂದ ಅದ್ಭುತ ವೃತ್ತಿಜೀವನ ಹೊಂದಿರುವ ಪ್ರಖ್ಯಾತ ತಾರೆ. ಆದರೆ ಪ್ರೇಕ್ಷಕರು ನೋಡಲು ಕಾಯುತ್ತಿದ್ದ ಅವರೊಳಗಿನ ಒಂದು ವಿಶೇಷ ಪ್ರತಿಭೆಯನ್ನು 'ಟಾಕ್ಸಿಕ್'ನಲ್ಲಿ ಕಾಣಲಿದ್ದಾರೆ. ನಯನತಾರಾ ಅವರನ್ನು ಹಿಂದೆಂದೂ ತೋರಿಸದ ರೀತಿಯಲ್ಲಿ ತೆರೆಯ ಮೇಲೆ ತರಬೇಕೆಂಬುದು ನನ್ನ ಆಸೆಯಾಗಿತ್ತು. ಚಿತ್ರೀಕರಣ ಸಾಗುತ್ತಿದ್ದಂತೆ, ಅವರ ಸ್ವಂತ ವ್ಯಕ್ತಿತ್ವವು ಪಾತ್ರದ ಆತ್ಮಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದು ನನಗೆ ಅರಿವಾಯಿತು" ಎಂದು ಗೀತು ಹೇಳಿದ್ದಾರೆ.
Toxic: 'ಟಾಕ್ಸಿಕ್' ಸಿನಿಮಾ ನಾಯಕಿಯ ಫಸ್ಟ್ ಲುಕ್ ರಿಲೀಸ್; Nadia ಪಾತ್ರದಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ
"ನಯನತಾರಾ ಅವರದ್ದು ಕೇವಲ ಅಭಿನಯವಾಗಿರಲಿಲ್ಲ, ಬದಲಾಗಿ ಪಾತ್ರದೊಂದಿಗಿನ ಸಮನ್ವಯವಾಗಿತ್ತು. ಅವರ ಪ್ರಾಮಾಣಿಕತೆ, ಸಂಯಮ ಮತ್ತು ಭಾವನಾತ್ಮಕ ಸ್ಪಷ್ಟತೆ ಆ ಪಾತ್ರಕ್ಕೆ ಜೀವ ತುಂಬಿವೆ. ಈ ಮೂಲಕ ನನಗೆ ಕೇವಲ ಒಬ್ಬ ಅದ್ಭುತ 'ಗಂಗಾ' ಮಾತ್ರ ಸಿಗಲಿಲ್ಲ, ಅನಿರೀಕ್ಷಿತವಾಗಿ ಒಬ್ಬ ಆತ್ಮೀಯ ಗೆಳತಿಯೂ ಸಿಕ್ಕಳು" ಎಂದು ಗೀತು ಮೋಹನ್‌ದಾಸ್ ಹೊಗಳಿದ್ದಾರೆ.
ಯಶ್ ಅವರ ಟ್ವೀಟ್
ಈಗಾಗಲೇ ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರ ಪಾತ್ರಗಳ ಪರಿಚಯವನ್ನು ಮಾಡಲಾಗಿದೆ. ಇದೀಗ ಹೊಸ ವರ್ಷಕ್ಕೆ ಮುನ್ನ ದಿನ ನಯನತಾರಾ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಮುಂದಿನ ಸರದಿ ಯಾರದ್ದು ಎಂಬ ಪ್ರಶ್ನೆ ಅಭಿಮಾನಿಗಳದ್ದು. ಅಲ್ಲದೆ, ಜನವರಿ 8ರಂದು ಯಶ್ ಅವರ ಹುಟ್ಟುಹಬ್ಬ ಇರುವುದರಿಂದ, ಅಂದು ಏನಾದರೂ ವಿಶೇಷವಾದದ್ದೇ ರಿಲೀಸ್ ಆಗಲಿದೆ ಎಂಬ ನಂಬಿಕೆಯಲ್ಲಿದ್ದಾರೆ ರಾಕಿ ಭಾಯ್ ಫ್ಯಾನ್ಸ್.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ನಿರ್ಮಿಸಿರುವ 'ಟಾಕ್ಸಿಕ್' ಚಿತ್ರವು ಈದ್, ಯುಗಾದಿ ಮತ್ತು ಗುಡಿ ಪಾಡ್ವಾ ಹಬ್ಬಗಳ ಪ್ರಯುಕ್ತ ಮಾರ್ಚ್ 19ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ತೆರೆಕಾಣಲಿದೆ.