‘ಹನುಮಾನ್ ಅಂಶ್’ ಚಿತ್ರವು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭಕ್ತರಿಂದ ಭಗವಾನ್ ಹನುಮಂತನ ಅವತಾರವೆಂದೇ ಪೂಜಿಸಲ್ಪಡುವ, ಪ್ರೀತಿ ಹಾಗೂ ನಿಸ್ವಾರ್ಥ ಸೇವೆಗೆ ಹೆಸರಾದ ‘ಮಹಾರಾಜ್ ಜಿ’ ಖ್ಯಾತಿಯ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳ ಆಧಾರದ ಮೇಲೆ ಈ ಚಿತ್ರವನ್ನು ರೂಪಿಸಲಾಗಿದೆ. ವಿಶಾಲ್ ಚತುರ್ವೇದಿ ಕಥೆ ಬರೆದು ನಿರ್ದೇಶಿಸಿದ್ದಾರೆ. "ಈ ಸಿನಿಮಾದ ಯಶಸ್ಸಿಗೆ ಮಹಾರಾಜ್ ಜಿ ಅವರ ಪವಾಡವೇ ಕಾರಣ" ಎಂದು ಚಿತ್ರದ ಸಹ-ನಿರ್ಮಾಪಕಿ ಅನುಪ್ರಿಯಾ ನಗರ್ ಹೇಳಿದ್ದಾರೆ.
ತಂಡದಲ್ಲಿ ನಾನೇ ಕಿರಿಯವಳು
ಚಿತ್ರ ನಿರ್ಮಾಣದ ಹಂತದಲ್ಲಿ ಎದುರಾದ ಸವಾಲುಗಳ ಬಗ್ಗೆ ಮಾತನಾಡಿದ ಅನುಪ್ರಿಯಾ ನಗರ್, ಚಿತ್ರತಂಡ ಎದುರಿಸಿದ ಹಣಕಾಸಿನ ಮುಗ್ಗಟ್ಟಿನ ವಿವರಗಳನ್ನು ಹಂಚಿಕೊಂಡಿದ್ದಾರೆ. "ಈ ಸಿನಿಮಾವನ್ನು ಮೂವರು ಮಹಿಳೆಯರು ಸೇರಿ ನಿರ್ಮಿಸಿದ್ದು, ಅವರಲ್ಲಿ ನಾನೇ ಅತ್ಯಂತ ಕಿರಿಯವಳು. ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್‌ಗೆ ಅಗತ್ಯ ಹಣದ ಕೊರತೆ ಎದುರಾದ ಸಂದರ್ಭದಲ್ಲಿ ನಾನು ತಂಡವನ್ನು ಸೇರಿಕೊಂಡೆ. ಈ ಚಿತ್ರದ ವಿಷಯದೊಂದಿಗೆ ನನಗಿದ್ದ ಗಾಢವಾದ ಭಾವನಾತ್ಮಕ ನಂಟಿನಿಂದಾಗಿ, ನನ್ನೆಲ್ಲ ಉಳಿತಾಯದ ಹಣವನ್ನು ಹೂಡಿಕೆ ಮಾಡಿದೆ. ಸ್ಟೀವ್ ಜಾಬ್ಸ್ ಹಾಗೂ ಲ್ಯಾರಿ ಬ್ರಿಲಿಯಂಟ್ ಅವರಂತಹ ಜಾಗತಿಕ ದಿಗ್ಗಜರಿಗೆ ನೀಮ್ ಕರೋಲಿ ಬಾಬಾ ಪ್ರೇರಣೆಯಾಗಿದ್ದಾರೆ. ಆದರೆ ಭಾರತದಲ್ಲೇ ಅವರ ಬಗ್ಗೆ ತಿಳಿದಿರುವವರ ಸಂಖ್ಯೆ ಕಡಿಮೆ ಇರುವುದರಿಂದ, ಅವರ ಜೀವನ ಚರಿತ್ರೆ ಮತ್ತು ಆಶ್ರಮದ ಮಹತ್ವ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡೆ" ಎಂದು ಅವರು ವಿವರಿಸಿದ್ದಾರೆ.
ಸಿನಿಮಾ ಲಾಭದ ಹಾದಿಯಲ್ಲಿದೆ
ಇದೇ ವೇಳೆ, ಚಿತ್ರ ನಿರ್ಮಾಣದಲ್ಲಿ ತಮ್ಮ ಪಾತ್ರದ ಕುರಿತಾದ ತಪ್ಪು ಕಲ್ಪನೆಗೂ ಅವರು ಸ್ಪಷ್ಟನೆ ನೀಡಿದ್ದಾರೆ. ಇಡೀ ಸಿನಿಮಾವನ್ನು ತಾವೊಬ್ಬರೇ ನಿರ್ಮಿಸಿಲ್ಲ; ಬದಲಾಗಿ ಒಟ್ಟು ಬಜೆಟ್‌ನಲ್ಲಿ ಮೂರನೇ ಒಂದು ಭಾಗದಷ್ಟನ್ನು ಮಾತ್ರ ತಾನು ಹೂಡಿಕೆ ಮಾಡಿದ್ದಾಗಿ ತಿಳಿಸಿದ ಅವರು, ಹೂಡಿದ ಹಣ ಈಗಾಗಲೇ ವಾಪಸ್ ಬಂದಿದ್ದು, ಸಿನಿಮಾ ಲಾಭದ ಹಾದಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪ್ರವೇಶ
21 ವರ್ಷದ ಅನುಪ್ರಿಯಾ ನಗರ್ ಸಿನಿರಂಗದ ಹಿನ್ನೆಲೆಯಿಂದ ಬಂದವರಲ್ಲ. ಮುಂಬೈನಲ್ಲಿ ಜನಿಸಿದ ಇವರು ಯುಕೆ-ಯ ಬಾತ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿದ್ದಾರೆ. ವಿದ್ಯಾಭ್ಯಾಸದ ಅವಧಿಯಲ್ಲೇ ಅರೆಕಾಲಿಕ ಕೆಲಸ ಮಾಡಿಕೊಂಡಿದ್ದ ಇವರು, ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ಸಿಕ್ಕ ಉದ್ಯೋಗಾವಕಾಶವನ್ನು ಬದಿಗೊತ್ತಿ 2025ರಲ್ಲಿ ಭಾರತಕ್ಕೆ ಮರಳಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 12ನೇ ವಯಸ್ಸಿನಿಂದಲೇ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದ ಇವರ ಸಿನಿರಂಗದ ಪ್ರವೇಶವು, ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಅಸೈನ್‌ಮೆಂಟ್ ಒಂದರ ಮೂಲಕ ಅನಿರೀಕ್ಷಿತವಾಗಿ ಆರಂಭವಾಯಿತು.
ಬರಲಿದೆ ‘ಹನುಮಾನ್ ಅಂಶ್ 2’
ಮೊದಲ ಭಾಗವು ಸೀಕ್ವೆಲ್ ಬರುವ ಮುನ್ಸೂಚನೆಯೊಂದಿಗೆ ಮುಕ್ತಾಯವಾಗಿದ್ದು, ಇದೀಗ 'ಹನುಮಾನ್ ಅಂಶ್ 2' ಚಿತ್ರವನ್ನು ಅನುಪ್ರಿಯಾ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಚಿತ್ರದ ಎರಡನೇ ಭಾಗದ ಕುರಿತು ಮಾತನಾಡಿದ ಅವರು, "ಮೊದಲ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕಿರುವ ಅಭೂತಪೂರ್ವ ಪ್ರತಿಕ್ರಿಯೆಯನ್ನು ಕಂಡ ಮೇಲೆ ಕಥೆಯನ್ನು ಮುಂದುವರಿಸದಿರಲು ಸಾಧ್ಯವೇ ಇಲ್ಲ. ಮಹಾರಾಜ್ ಜಿ ನಮಗೆ ಅಪಾರವಾಗಿ ಕರುಣಿಸಿದ್ದಾರೆ. ಮೊದಲ ಭಾಗ ಸೂಪರ್ ಹಿಟ್ ಆಯಿತು ಎಂಬ ಕಾರಣಕ್ಕೆ ಬಜೆಟ್ ಅನ್ನು ದುಪ್ಪಟ್ಟು ಮಾಡುವ ಬದಲು, ಕಥೆಯಲ್ಲಿದ್ದ ಸರಳತೆ ಹಾಗೂ ಭಕ್ತಿಯ ಭಾವವನ್ನು ಎರಡನೇ ಭಾಗದಲ್ಲೂ ಹಾಗೆಯೇ ಮುಂದುವರಿಸಿಕೊಂಡು ಹೋಗುವುದೇ ನಮ್ಮ ಮುಖ್ಯ ಆದ್ಯತೆ" ಎಂದು ತಿಳಿಸಿದ್ದಾರೆ.
ಲಾಭದ ಹಣದಲ್ಲಿ ಸಾಮಾಜಿಕ ಕಾರ್ಯಗಳು
ಸಿನಿಮಾವು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವ ಸಂದರ್ಭದಲ್ಲಿ ಅನುಪ್ರಿಯಾ ನಗರ್ ತೆಗೆದುಕೊಂಡಿರುವ ನಿರ್ಧಾರ ಈಗ ಹೆಚ್ಚು ಚರ್ಚೆಯಾಗುತ್ತಿದೆ. ‘ಹನುಮಾನ್ ಅಂಶ್’ ಸಿನಿಮಾದಿಂದ ಬಂದ ಲಾಭದ ಒಂದು ಭಾಗವನ್ನು ಬಡ ಮಕ್ಕಳ ಸಹಾಯಕ್ಕಾಗಿ ಬಳಸುವುದಾಗಿ ಅವರು ಹೇಳಿದ್ದಾರೆ. "ಮಹಾರಾಜ್ ಜಿ ಅವರ ಆಶೀರ್ವಾದದಿಂದ ಬಂದ ಈ ಹಣವನ್ನು ಬಡ ಮಕ್ಕಳ ನೆರವಿಗೆ ಹಾಗೂ ದಾನಧರ್ಮದ ಕಾರ್ಯಗಳಿಗೆ ಬಳಸುವ ಯೋಜನೆ ಇದೆ. ನನಗಿನ್ನೂ 21 ವರ್ಷ ವಯಸ್ಸು; ಬಂದಿರುವ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೇಗೆ ಬಳಸಬೇಕೆಂಬ ಬಗ್ಗೆ ಆರಂಭದಲ್ಲಿ ಸ್ಪಷ್ಟತೆ ಇರಲಿಲ್ಲ. ಆದರೆ ಇದೀಗ ಅದನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲು ಯೋಜನೆ ರೂಪಿಸಿಕೊಂಡಿದ್ದೇವೆ" ಎಂದು ಅನುಪ್ರಿಯಾ ತಿಳಿಸಿದ್ದಾರೆ.
250+ ಕೋಟಿ ದಾಟಿದ ಕಲೆಕ್ಷನ್
ಸುಮಾರು 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾವು ವಿಶ್ವಾದ್ಯಂತ 250+ ಕೋಟಿ ಬಾಚಿಕೊಂಡಿದೆ. ಈ ವರ್ಷದಲ್ಲಿ ಅತಿ ದೊಡ್ಡ ಲಾಭ ತಂದುಕೊಟ್ಟ ಭಾರತೀಯ ಸಿನಿಮಾಗಳ ಸಾಲಿನಲ್ಲಿ ‘ಹನುಮಾನ್ ಅಂಶ್’ ಮುಂಚೂಣಿಯಲ್ಲಿದೆ.