ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಸ್ಪಾರ್ಕ್ʼ ಸಿನಿಮಾದಲ್ಲಿ ವಕೀಲೆಯಾಗಿ ಸ್ಯಾಂಡಲ್‌ವುಡ್‌ಗೆ ಮರಳಿದ 'ಜಾಕಿ' ಭಾವನಾ; ಸೆ.25ಕ್ಕೆ ಬೆಳ್ಳಿತೆರೆ‌ಗೆ ಎಂಟ್ರಿ!

Spark Kannada movie: ಬಹುಭಾಷಾ ನಟಿ ಭಾವನಾ ಮೆನನ್ ಮತ್ತೆ ಸ್ಯಾಂಡಲ್‌ವುಡ್ ಅಂಗಳಕ್ಕೆ ಪ್ರವೇಶಿಸಿದ್ದಾರೆ. ʻಸ್ಪಾರ್ಕ್‌ʼ ಸಿನಿಮಾದಲ್ಲಿ ಪತ್ರಕರ್ತನ ಪರ ಹೋರಾಡುವ ಧೀಮಂತ ವಕೀಲೆ ವೈದೇಹಿ ಪಾತ್ರದಲ್ಲಿ ಅವರು ನಟಿಸಿದ್ದಾರೆ. ನಿರಂಜನ್ ಸುಧೀಂದ್ರ ನಾಯಕನಾಗಿ, ನೆನಪಿರಲಿ ಪ್ರೇಮ್ ಖಳನಾಯಕನಾಗಿ ನಟಿಸಿರುವ ಈ ಚಿತ್ರವು ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ.

ನಿರಂಜನ್ ಸುಧೀಂದ್ರ ಅಭಿನಯದ ಬಹುನಿರೀಕ್ಷಿತ 'ಸ್ಪಾರ್ಕ್' ಚಿತ್ರತಂಡ ದಿನಕ್ಕೊಂದು ಹೊಸ ಅಪ್‌ಡೇಟ್‌ಗಳ ಮೂಲಕ ಪ್ರೇಕ್ಷಕರ ಗಮನಸೆಳೆಯುತ್ತಿದೆ. ಇತ್ತೀಚೆಗಷ್ಟೇ ಹಾಡುಗಳನ್ನು ಲೋಕಾರ್ಪಣೆಗೊಳಿಸಿ ಸಂಗೀತಪ್ರಿಯರ ಗಮನ ಸೆಳೆದಿದ್ದ ಚಿತ್ರತಂಡ, ಇದೀಗ ಚಿತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಬಹುಭಾಷಾ ತಾರೆ, 'ಜಾಕಿ' ಖ್ಯಾತಿಯ ಭಾವನಾ ಮೆನನ್‌ ಅವರನ್ನು ಸುದ್ದಿಗೋಷ್ಠಿಗೆ ಕರೆತಂದು ಅವರ ಪಾತ್ರವನ್ನು ಪರಿಚಯಿಸಿದೆ. ಈ ಚಿತ್ರದಲ್ಲಿ ಭಾವನಾ ಪತ್ರಕರ್ತನ ಬೆನ್ನಿಗೆ ನಿಲ್ಲುವ 'ವೈದೇಹಿ' ಎಂಬ ಪ್ರಭಾವಿ ವಕೀಲೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ನನಗೆ ಸವಾಲು ಎನಿಸುವಂತಹ ಪಾತ್ರ

ತಮ್ಮ ಪಾತ್ರದ ಕುರಿತು ಮಾತನಾಡಿದ ನಟಿ ಭಾವನಾ, "ಚಿತ್ರದ ಶೀರ್ಷಿಕೆಯಂತೆಯೇ ಕಥೆಯಲ್ಲೂ ಒಂದು ವಿಶಿಷ್ಟವಾದ ಸ್ಪಾರ್ಕ್ ಇದೆ. ಪ್ರತಿಯೊಂದು ಪಾತ್ರದಲ್ಲೂ ಆ ಕಿಚ್ಚು ಎದ್ದು ಕಾಣುತ್ತದೆ; ಅದೇ ಕಾರಣಕ್ಕೆ ನಾನು ಈ ಚಿತ್ರವನ್ನು ಒಪ್ಪಿಕೊಂಡೆ. ನನಗೆ ಸವಾಲು ಎನಿಸುವಂತಹ ಗಟ್ಟಿ ಕಥೆ ಸಿಕ್ಕಾಗ ಮಾತ್ರ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನಿರ್ದೇಶಕರು ಈ ಕಥೆ ವಿವರಿಸಿದಾಗ, ಈವರೆಗೂ ಮಾಡಿರದ ಹೊಸ ಶೈಲಿಯ ಪಾತ್ರ ಇದಾಗಿದೆ ಎಂಬುದು ತಿಳಿಯಿತು. ಬಹಳ ದಿನಗಳ ನಂತರ ನನ್ನ ನಟನಾ ಪ್ರತಿಭೆಯನ್ನು ಹೊರಹಾಕಲು ಅತ್ಯುತ್ತಮ ವೇದಿಕೆ ಸಿಕ್ಕಿದೆ. ಚಿತ್ರದ ನಿರ್ಮಾಪಕರು ಪ್ರತಿದಿನವೂ ಸೆಟ್‌ಗೆ ಬಂದು ಅತ್ಯಂತ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದಾರೆ" ಎಂದು ಹೇಳಿದರು.

ನಿರಂಜನ್ ಸುಧೀಂದ್ರ ಅಪರೂಪದ ಪ್ರತಿಭಾವಂತ

ನಿರಂಜನ್ ಸುಧೀಂದ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಭಾವನಾ, "ನಿರಂಜನ್ ಕೇವಲ ಹ್ಯಾಂಡ್‌ಸಮ್ ಲುಕ್ ಮಾತ್ರವಲ್ಲದೆ, ನಟನೆ, ನೃತ್ಯ ಮತ್ತು ಸಾಹಸ ದೃಶ್ಯಗಳಲ್ಲಿ ಅದ್ಭುತವಾಗಿ ಮಿಂಚಬಲ್ಲ ಅಪರೂಪದ ಪ್ರತಿಭಾವಂತ. ಅವರು ಕನ್ನಡ ಚಿತ್ರರಂಗದ ಭರವಸೆಯ ನಾಯಕ. ಚಿತ್ರದಲ್ಲಿ ದಿಗ್ಗಜ ಕಲಾವಿದರು, ನುರಿತ ತಂತ್ರಜ್ಞರು ಇದ್ದು, ಕೌಟುಂಬಿಕ ಮೌಲ್ಯಗಳು ಹಾಗೂ ಸಾಮಾಜಿಕ ಸಂದೇಶ ಒಳಗೊಂಡ ಸಂಪೂರ್ಣ ಮನರಂಜನೆಯ ಪ್ಯಾಕೇಜ್ ಇಲ್ಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

Spark Movie: ʼಸ್ಪಾರ್ಕ್‌ʼ ಪೋಸ್ಟರ್‌ ವಿವಾದಕ್ಕೆ ತೆರೆ; ರಮೇಶ್‌ ಇಂದಿರಾ ಬಳಿ ಕ್ಷಮೆ ಕೋರಿದ ನಿರ್ದೇಶಕ

ಕಾರ್ಯಕಾರಿ ನಿರ್ಮಾಪಕ ಶುಭಂ ಸಿಂಗ್ ತಾವು ಚಿತ್ರದಲ್ಲಿ ಭಾವನಾ ಅವರ ಸಹೋದರನಾಗಿ ನಟಿಸಿರುವುದಾಗಿ ಹೇಳಿದರೆ, ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ, "ಕಥೆಯ ಒಂದು ಮಹತ್ವದ ತಿರುವಿನಲ್ಲಿ ಪತ್ರಕರ್ತನಾದ ನಾಯಕನಿಗೆ ಕಾನೂನಾತ್ಮಕವಾಗಿ ಆಸರೆಯಾಗಿ ನಿಲ್ಲುವ ಧೀಮಂತ ವಕೀಲೆ 'ವೈದೇಹಿ' ಪಾತ್ರದಲ್ಲಿ ಭಾವನಾ ನಟಿಸಿದ್ದಾರೆ" ಎಂದು ಪಾತ್ರವನ್ನು ಬಿಚ್ಚಿಟ್ಟರು.

ಚಿತ್ರದಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿರುವ ನಾಯಕಿ ರಚನಾ ಇಂದರ್, ಭಾವನಾ ಅವರೊಂದಿಗಿನ ಕಾಂಬಿನೇಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ ಎಂದರು. ಸದ್ಯ ಪ್ರೇಕ್ಷಕರಲ್ಲಿ ಕೌತುಕ ಮೂಡಿಸಿರುವ 'ಸ್ಪಾರ್ಕ್' ಸಿನಿಮಾ ಇದೇ ತಿಂಗಳ 25ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಗಣೇಶ್ ರಾವ್ ಕೇಸರ್ಕರ್, ಅಶ್ವಿನ್ ಹಾಸನ್, ಧರ್ಮಣ್ಣ, ವಿಜಯ್ ಚೆಂಡೂರ್, ಅಶ್ವಥ್ ನೀನಾಸಂ ಹಾಗೂ ಮಹಾಂತೇಶ್ ಹಿರೇಮಠ ಮುಂತಾದವರು ಈ ಸಿನಿಮಾದಲ್ಲಿದ್ದಾರೆ. ನೆನಪಿರಲಿ ಪ್ರೇಮ್‌ ಈ ಸಿನಿಮಾದಲ್ಲಿ ಖಳ ಪಾತ್ರ ಮಾಡಿದ್ದಾರೆ.