ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ್ದ ‘ರಂಗಿತರಂಗ’ ಸಿನಿಮಾದ ಯಶಸ್ವಿ ಜೋಡಿ ನಿರೂಪ್ ಭಂಡಾರಿ ಹಾಗೂ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಹಲವು ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಯಲ್ಲಿ ಒಂದಾಗಿದ್ದಾರೆ. ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾದಲ್ಲಿ ಸಾಯಿಕುಮಾರ್ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸುತ್ತಿದೆ.
ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದ ಟೀಸರ್ಗೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಧ್ವನಿ ನೀಡಿರುವುದು ವಿಶೇಷ. ಅಷ್ಟೇ ಅಲ್ಲದೆ, ಚಿತ್ರದಲ್ಲಿ ಶಿವಣ್ಣ ಅವರು ಅತಿಥಿ ಪಾತ್ರದಲ್ಲೂ ಕಾಣಿಸಿಕೊಳ್ಳುವ ಮೂಲಕ ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ.
ಈ ಚಿತ್ರದ ಬಗ್ಗೆ ಸಾಯಿಕುಮಾರ್ ಏನಂದ್ರು?
ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದ ನಟ ಸಾಯಿಕುಮಾರ್, "ರಾಜಾ ಹರಿಶ್ಚಂದ್ರ ಕಾಲದಿಂದಲೂ ಈ ಸತ್ಯ ಹರಿಶ್ಚಂದ್ರ ಅನ್ನೋ ಹೆಸರಿಗೆ ಅಪಾರವಾದ ಗೌರವವಿದೆ. ಕಥೆ ಕೇಳಿದ ತಕ್ಷಣವೇ ನನಗೆ ತುಂಬಾ ಇಷ್ಟವಾಯಿತು. 'ರಂಗಿತರಂಗ' ನಂತರ ಮತ್ತೆ ನಿರೂಪ್ ಜೊತೆ ನಟಿಸುತ್ತಿರುವುದು ಅಪಾರ ಸಂತಸ ತಂದಿದೆ. ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಹರಿಶ್ಚಂದ್ರ; ನಾನು ಸದಾ ಸತ್ಯವನ್ನೇ ಹೇಳುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ಇದು ಕೇವಲ ಮನರಂಜನೆಯಷ್ಟೇ ಅಲ್ಲದೆ ಗಟ್ಟಿಯಾದ ಕೌಟುಂಬಿಕ ಭಾವನೆಗಳನ್ನು ಒಳಗೊಂಡಿರುವ ಅದ್ಭುತ ಸಿನಿಮಾ" ಎಂದರು.
ಇದೇ ವೇಳೆ ಶಿವಣ್ಣ ಅವರ ಎಂಟ್ರಿಯನ್ನು ಸ್ಮರಿಸಿದ ಅವರು, "ಕಥೆ ಮತ್ತು ಪಾತ್ರದ ಬಗ್ಗೆ ಶಿವಣ್ಣನ ಬಳಿ ಪ್ರಸ್ತಾಪಿಸಿದಾಗ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ತಕ್ಷಣವೇ ಒಪ್ಪಿಕೊಂಡರು. ಅವರ ಉಪಸ್ಥಿತಿಯು ಇಡೀ ಚಿತ್ರತಂಡಕ್ಕೆ ಆನೆಬಲ ತಂದಿದೆ" ಎಂದು ಶಿವಣ್ಣ ಅವರ ಸರಳತೆಯನ್ನು ಕೊಂಡಾಡಿದ್ದಾರೆ ಸಾಯಿಕುಮಾರ್.
ಶಿವಣ್ಣನ ಬಗ್ಗೆ ನಿರೂಪ್ ಹೇಳಿದ್ದೇನು?
ನಾಯಕ ನಟ ನಿರೂಪ್ ಭಂಡಾರಿ ಮಾತನಾಡಿ, "ಈ ಸಿನಿಮಾಗಾಗಿ ನನ್ನ ಜೀವನದ 2 ವರ್ಷಗಳನ್ನು ಮೀಸಲಿಟ್ಟಿದ್ದೇನೆ. ನಿರ್ದೇಶಕ ಸಚಿನ್ ವಾಲಿ ಅವರೊಂದಿಗೆ ಕುಳಿತು ಎರಡು-ಮೂರು ತಿಂಗಳ ಕಾಲ ಚಿತ್ರಕಥೆಯನ್ನು ಹೊಸದಾಗಿ ತಿದ್ದಿ ತೀಡಿದ್ದೇವೆ. ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸಮಯದಲ್ಲೂ ಅವರು ತೋರಿದ ಬದ್ಧತೆ, ಉತ್ಸಾಹ ನಿಜಕ್ಕೂ ಮೈರೋಮಾಂಚನ ಉಂಟುಮಾಡಿತು. ಶಾಟ್ಗೆ ಕರೆದ ತಕ್ಷಣವೇ ಓಡೋಡಿ ಬಂದು ನಟಿಸುತ್ತಿದ್ದರು, ಡೈಲಾಗ್ಗಳನ್ನು ಮೊದಲೇ ಕಂಠಪಾಠ ಮಾಡಿಕೊಂಡು ಸಿದ್ಧರಾಗಿರುತ್ತಿದ್ದರು. ಅದಕ್ಕಾಗಿಯೇ ಅವರು ನಿಜವಾದ ಸೂಪರ್ಸ್ಟಾರ್" ಎಂದಿದ್ದಾರೆ.
ನಿರೂಪ್ಗೆ ಜೋಡಿಯಾದ ಬೃಂದಾ & ಅಂಕಿತಾ
ಈ ಚಿತ್ರದ ನಾಯಕಿಯ ಬೃಂದಾ ಆಚಾರ್ಯ, "ಸಾಯಿಕುಮಾರ್ ಅವರಂತಹ ದಿಗ್ಗಜರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದೇ ಒಂದು ಸೌಭಾಗ್ಯ. ಭಾವನಾತ್ಮಕ ಅಂಶಗಳ ಜೊತೆಗೆ ಸಾಯಿಕುಮಾರ್ ಮತ್ತು ಶಿವಣ್ಣ ಅವರ ಉಪಸ್ಥಿತಿಯಿಂದಾಗಿ ಸಿನಿಮಾ ಭರ್ಜರಿ ಮಾಸ್ ಆಗಿಯೂ ಮೂಡಿಬಂದಿದೆ" ಎಂದರು. ಮತ್ತೊಬ್ಬ ನಾಯಕಿ ಅಂಕಿತಾ ಅಮರ್ ಮಾತನಾಡುತ್ತಾ, "ಚಿತ್ರದಲ್ಲಿ ನಾನು 'ಗಾನ' ಎಂಬ ಪ್ರಾಮಾಣಿಕ ಹಾಗೂ ಶಿಸ್ತಿನ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಸಿನಿಮಾ ಕೇವಲ ಮನರಂಜನೆಯಷ್ಟೇ ಅಲ್ಲದೆ ತಂದೆ-ತಾಯಂದಿರ ಮೇಲಿನ ಪ್ರೀತಿ ಮತ್ತು ಸಂಸ್ಕಾರದ ಮಹತ್ವವನ್ನು ಸಾರುತ್ತದೆ" ಎಂದು ಹೇಳಿದರು.
ನಿರ್ದೇಶಕ ಸಚಿನ್ ವಾಲಿ ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ 'ಅಂಕಿತ್ ಸಿನಿಮಾಸ್' ಬ್ಯಾನರ್ ಅಡಿಯಲ್ಲಿ ಪುಣೆ ಮೂಲದ ಅಂಕಿತ್ ಸೋನಿಗಾರ ಹಣ ಹಾಕಿದ್ದಾರೆ. ಪ್ರಶಾಂತ್ ಮುಲಗೆ ಸಹ-ನಿರ್ಮಾಪಕರಾಗಿದ್ದಾರೆ. ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ, ಶೌರ್ಯ, ಅಭಿಷೇಕ್ ಶ್ರೀಕಾಂತ್, ಅಶ್ವಿನ್ ಹಾಸನ್ ಸೇರಿದಂತೆ ಪ್ರತಿಭಾವಂತ ಕಲಾವಿದರ ತಾರಾಗಣವಿದೆ. ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾವು 2027ರ ಜನವರಿ 22ರಂದು ಅದ್ಧೂರಿಯಾಗಿ ತೆರೆಕಾಣಲಿದೆ.