ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಚಿತ್ರ ʼದಿ ಡೆವಿಲ್ʼ (The Devil Movie). ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಲವು ದಿನಗಳ ಬಳಿಕ ತೆರೆಮೇಲೆ ಕಾಣಿಸಿಕೊಳ್ಳುವ ಚಿತ್ರ ಇದಾಗಿದ್ದು, ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಮೆಲೊಡಿ ಸಾಂಗ್ ʼಒಂದೇ ಒಂದು ಸಲʼ (Onde Ondu Sala) ಇದೀಗ ರಿಲೀಸ್ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಕೆಲವು ದಿನಗಳ ಹಿಂದೆ ಹೊರಬಂದಿದ್ದ ಈ ಚಿತ್ರದ ಮೊದಲ ಹಾಡು ʼಇದ್ರೆ ನೆಮ್ದಿಯಾಗ್ ಇರ್ಬೇಕ್ʼ ಲಕ್ಷಗಟ್ಟಲೆ ವೀಕ್ಷಣೆ ಕಂಡು ಟ್ರೆಂಡಿಂಗ್‌ನಲ್ಲಿದೆ.
ʼದಿ ಡೆವಿಲ್ʼ ಚಿತ್ರದ ಈ ʼಒಂದೇ ಒಂದು ಸಲʼ ಎಂಬ ಸುಮಧುರ ಯುಗಳ ಗೀತೆ ಸರಿಗಮಪ ಮ್ಯೂಸಿಕ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಹಾಡಿದ್ದು, ಅಜನೀಶ್ ಲೋಕನಾಥ್ (B. Ajaneesh Loknath) ಸಂಗೀತ ನೀಡಿದ್ದಾರೆ. ಸಂತು ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನಾ ರೈ ಹೆಜ್ಜೆ ಹಾಕಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ʼದಿ ಡೆವಿಲ್ʼ ಚಿತ್ರದ ʼಒಂದೇ ಒಂದು ಸಲʼ ಹಾಡು ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Actor Darshan: ಇದ್ರೆ 'ಜೈಲಲ್ಲಿ' ನೆಮ್ದಿಯಾಗ್ ಇರ್ಬೇಕ್; ದರ್ಶನ್ ಬೇಲ್ ಕ್ಯಾನ್ಸಲ್ ಆಗುತ್ತಿದ್ದಂತೆ ಫುಲ್ ಟ್ರೋಲ್
ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ ʼದಿ ಡೆವಿಲ್ʼ ಚಿತ್ರಕ್ಕೆ ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ. ತಶ್ವಿನಿ ವೀರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದು, ಕಾಂತರಾಜ್ ಎಸ್.ಎಸ್. ಸಂಭಾಷಣೆ ಬರೆದಿದ್ದಾರೆ. ಚೇತನ್ ಹಾಗೂ ತಶ್ವಿನಿ ವಸ್ತ್ರವಿನ್ಯಾಸ ಮಾಡಿದ್ದಾರೆ.
ಕರಾವಳಿ ಬೆಡಗಿ ರಚನಾ ರೈ ಇದೇ ಮೊದಲ ಬಾರಿಗೆ ದರ್ಶನ್‌ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ತುಳಸಿ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಶೇಷ ಎಂದರೆ ಪ್ರಕಾಶ್ ವೀರ್ ಮತ್ತು ದರ್ಶನ್ ಕಾಂಬಿನೇಷನ್‌ನ 2ನೇ ಚಿತ್ರ ಇದಾಗಿದೆ. ಈ ಹಿಂದೆ ಇವರು ʼತಾರಕ್ʼ ಚಿತ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡಿದ್ದರು. ಚಿತ್ರ ಡಿಸೆಂಬರ್ 12ರಂದು ತೆರೆಗೆ ಬರಲಿದೆ.