‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್‌ಕುಮಾರ್ ಅವರು ಹಿಂದಿ ಭಾಷೆಯ ಕುರಿತು ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಒರಿಜಿನಲ್ ಮಾನ್‌ಸ್ಟರ್’ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ್ದ ಶಿವಣ್ಣ, ಹಿಂದಿಯನ್ನು "ನ್ಯಾಷನಲ್ ಲ್ಯಾಂಗ್ವೇಜ್" (ರಾಷ್ಟ್ರಭಾಷೆ) ಎಂದು ಕರೆದಿದ್ದು ಭಾಷಾ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.
ಆದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನವೇ ಎಚ್ಚೆತ್ತ ಅವರು, ಅದೇ ಸಮಾರಂಭದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡು ಕ್ಷಮೆ ಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
‘ಒರಿಜಿನಲ್ ಮಾನ್‌ಸ್ಟರ್’ ಸಮಾರಂಭದಲ್ಲಿ ಶಿವಣ್ಣ ಹೇಳಿದ್ದೇನು?
‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಮುಹೂರ್ತದ ವೇಳೆ ಬಹುಭಾಷಾ ಸಿನಿಮಾಗಳಲ್ಲಿ ಹಿಂದಿ ಸಂಭಾಷಣೆ ಮಾತನಾಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಶಿವಣ್ಣ, "ನನಗೆ ಹಿಂದಿ ಎರಡನೇ ಭಾಷೆಯಾಗಿತ್ತು. ನಾನು ಚೆನ್ನಾಗಿಯೇ ಹಿಂದಿ ಮಾತನಾಡಬಲ್ಲೆ. ಅದು ಸುಲಭವಾದ ಭಾಷೆ ಮತ್ತು ಅದು ನ್ಯಾಷನಲ್ ಲ್ಯಾಂಗ್ವೇಜ್ ಕೂಡ, ನಮಗೆ ಅದು ಗೊತ್ತಿಲ್ಲವೇ?" ಎಂದಿದ್ದರು. ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಕನ್ನಡಿಗರು ಹಾಗೂ ಭಾಷಾಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.
ವೇದಿಕೆ ಮೇಲೆ ಶಿವಣ್ಣ ಹೇಳಿದ್ದೇನು?
ಭಾರತದ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಎಲ್ಲಿಯೂ ಘೋಷಿಸಿಲ್ಲ, ಅದು ಕೇವಲ ಅಧಿಕೃತ ಭಾಷೆಗಳಲ್ಲಿ ಒಂದು ಅಷ್ಟೇ ಎಂದು ನೆನಪಿಸಿದ ನೆಟ್ಟಿಗರು, ಶಿವಣ್ಣ ಅವರಂತಹ ಹಿರಿಯ ನಟರಿಂದ ಈ ರೀತಿಯ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ನಮ್ಮ ಭಾಷೆ ನಮಗೆ ಮುಖ್ಯ
ವಿಷಯದ ಗಂಭೀರತೆ ಅರಿಯುತ್ತಿದ್ದಂತೆ ಅದೇ ಕಾರ್ಯಕ್ರಮದಲ್ಲಿ ತಕ್ಷಣವೇ ಸ್ಪಷ್ಟನೆ ನೀಡಿದ ಶಿವರಾಜ್‌ಕುಮಾರ್, ಕ್ಷಮೆ ಕೋರಿದರು. "ವೇದಿಕೆ ಮೇಲೆ ಮಾತನಾಡುವ ಭರದಲ್ಲಿ ಆಕಸ್ಮಿಕವಾಗಿ ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ಎಂದು ಹೇಳಿಬಿಟ್ಟೆ. ಅದು ಭಾರತದ ಒಂದು ಭಾಷೆ ಅಷ್ಟೇ. 'ಇಂಡಿಯನ್ ಲ್ಯಾಂಗ್ವೇಜ್' ಅಂತರಲ್ಲ, ಆ ಮಾತಿನ ಭರದಲ್ಲಿ ಬಾಯಿತಪ್ಪಿ ಬಂತು, ಕ್ಷಮೆ ಇರಲಿ. ಅವರವರ ಭಾಷೆ ಅವರಿಗೆ ಮುಖ್ಯ. ಕನ್ನಡ ನಮ್ಮ ತಾಯಿ ಭಾಷೆ, ಅದು ನಮಗೆ ಯಾವಾಗಲೂ ಮುಖ್ಯ" ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಸದ್ಯ ಶಿವಣ್ಣ ಕ್ಷಮೆ ಕೋರಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಈಗ ವೈರಲ್ ಆಗುತ್ತಿದೆ.
ಕ್ಲಾರಿಟಿ ಕೊಟ್ಟ ಶಿವಣ್ಣ
ಶಿವಣ್ಣನ ಬೆಂಬಲಕ್ಕೆ ನಿಂತ ಅಭಿಮಾನಿಗಳು
ಇದೇ ವೇಳೆ ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಶಿವಣ್ಣ ಅವರು ಹಿಂದಿಯ ವ್ಯಾಪಕ ಬಳಕೆಯ ಸಂದರ್ಭವನ್ನು ಉಲ್ಲೇಖಿಸಿ ಆಡುಮಾತಿನಲ್ಲಿ ಹಾಗೆ ಹೇಳಿದ್ದಾರೆಯೇ ಹೊರತು, ಯಾವುದೇ ಸಂವಿಧಾನಾತ್ಮಕ ಅಥವಾ ರಾಜಕೀಯ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ ಒಂದು ಸಣ್ಣ ವಿಡಿಯೋ ತುಣುಕನ್ನು ಇಟ್ಟುಕೊಂಡು ಅವರ ಕನ್ನಡಾಭಿಮಾನ ಹಾಗೂ ನಾಡು-ನುಡಿಗೆ ಅವರು ಸಲ್ಲಿಸಿರುವ ಕೊಡುಗೆಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಶಿವಣ್ಣ ತಕ್ಷಣವೇ ವಿನಮ್ರವಾಗಿ ಕ್ಷಮೆ ಕೋರಿರುವುದು ಅವರ ಸರಳತೆಯನ್ನು ಎತ್ತಿ ತೋರಿಸಿದೆ ಎಂದು ಹಲವರು ಶ್ಲಾಘಿಸಿದ್ದಾರೆ.