ಪಿ. ಲಂಕೇಶ್ ಅವರ ಮೊಮ್ಮಗ ಸಮರ್ಜಿತ್ ಲಂಕೇಶ್ 'ಗೌರಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಸಿನಿಮಾವನ್ನು ಅವರ ತಂದೆ ಇಂದ್ರಜಿತ್ ಲಂಕೇಶ್ ಅವರೇ ನಿರ್ದೇಶಿಸಿದ್ದರು. ಆ ನಂತರ ಮೋಹನ್‌ಲಾಲ್ ಅಭಿನಯದ ಪ್ಯಾನ್-ಇಂಡಿಯಾ ಚಿತ್ರ ‘ವೃಷಭ’ದಲ್ಲೂ ನಟಿಸಿದ್ದ ಸಮರ್ಜಿತ್, ಇದೀಗ ತಮ್ಮ ಮೂರನೇ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರ್ಣಗೊಳಿಸಿದ್ದಾರೆ.
ಚಿತ್ರಕ್ಕೆ 'ಗುಡ್ಡದ ಭೂತ' ಟೈಟಲ್
ಈ ಹೊಸ ಸಿನಿಮಾಗೆ 'ಗುಡ್ಡದ ಭೂತ' ಎಂದು ಹೆಸರಿಡಲಾಗಿದ್ದು, ಈ ಚಿತ್ರದ ಮೂಲಕ ಸಮರ್ಜಿತ್ ವಿಭಿನ್ನ ಕಥಾಹಂದರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘ಮುಗಿಲ್‌ಪೇಟೆ’ ಖ್ಯಾತಿಯ ಭರತ್ ಎಸ್. ನಾವುಂದ ನಿರ್ದೇಶನದ ಈ ಸಿನಿಮಾವನ್ನು ಎನ್.ಎಂ. ಕಾಂತರಾಜ್ ನಿರ್ಮಿಸಿದ್ದಾರೆ. ಇವರು ಈ ಹಿಂದೆ ಚಿಕ್ಕಣ್ಣ ನಟನೆಯ 'ಫಾರೆಸ್ಟ್' ಚಿತ್ರವನ್ನು ನಿರ್ಮಿಸಿದ್ದರು. ಸಸ್ಪೆನ್ಸ್ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಜಾನರ್‌ಗೆ ಸೇರಿದ 'ಗುಡ್ಡದ ಭೂತ' ಚಿತ್ರವು ಸದ್ಯ ಡಬ್ಬಿಂಗ್ ಹಂತದಲ್ಲಿದೆ.
Vrusshabha Movie: ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್! 'ವೃಷಭ' ಚಿತ್ರದ ಆ ಪಾತ್ರ ಯಾವುದು?
ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸಮರ್ಜಿತ್
1987ರಲ್ಲಿ ಪುತ್ತೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈ ಕಥೆಗೆ ಸಮಕಾಲೀನ ಸ್ಪರ್ಶ ನೀಡಲಾಗಿದ್ದು, 2026ರಲ್ಲಿ ನಡೆಯುವ ಪೊಲೀಸ್ ತನಿಖೆಯೇ ಕಥೆಯ ಪ್ರಮುಖ ತಿರುಳಾಗಿದೆ. ಚಿತ್ರದಲ್ಲಿ ಸಮರ್ಜಿತ್ ಅವರು 'ಎಸ್‌ಐ ಅಲೋಕ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ವೃತ್ತಿಜೀವನದ ಮೊದಲ ಪೊಲೀಸ್ ಪಾತ್ರವಾಗಿದೆ. ತನಿಖೆ ಮುಂದುವರಿದಂತೆ, ಹಿಂದಿನ ಘಟನೆಗಳು ವರ್ತಮಾನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಸುತ್ತ ಅವರ ಪಾತ್ರ ಸಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.
ರಂಗಭೂಮಿ ಕಲಾವಿದರಿಗೆ ಅವಕಾಶ
ರಂಗಶಂಕರ ಮತ್ತು ನೀನಾಸಂ ಸೇರಿದಂತೆ ರಂಗಭೂಮಿ ಹಿನ್ನೆಲೆಯ ಹಲವು ಪ್ರತಿಭಾನ್ವಿತ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದು ಮತ್ತೊಂದು ವಿಶೇಷ. ಚಿತ್ರತಂಡವು ಶ್ರೀಹರಿ ಎಂಬುವವರನ್ನು ಸಂಗೀತ ನಿರ್ದೇಶಕರನ್ನಾಗಿ ಪರಿಚಯಿಸುತ್ತಿದ್ದು, ಖ್ಯಾತ ಛಾಯಾಗ್ರಾಹಕ ಜೆ.ಜೆ. ಕೃಷ್ಣ ಅವರ ಪುತ್ರ ದೀಪಕ್ ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಸಮರ್ಜಿತ್ ಅವರಿಗೆ, ಸಾಂಪ್ರದಾಯಿಕ ಹೀರೋಯಿಸಂ ಪಾತ್ರಗಳ ಬದಲಿಗೆ ಸಂಪೂರ್ಣ ಕಂಟೆಂಟ್ ಆಧಾರಿತ ಸಿನಿಮಾದಲ್ಲಿ ನಟಿಸಲು ಈ ಪ್ರಾಜೆಕ್ಟ್ ಉತ್ತಮ ಅವಕಾಶ ಕಲ್ಪಿಸಿದೆಯಂತೆ.
ಸದ್ದಿಲ್ಲದೆ ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ‘ಗುಡ್ಡದ ಭೂತ’ ಚಿತ್ರವನ್ನು ಆದಷ್ಟು ಶೀಘ್ರದಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.