ಬಾಲಿವುಡ್ನ ಬಹುನಿರೀಕ್ಷಿತ 'ರಾಮಾಯಣ: ದಿ ರೈಸ್ ಆಫ್ ಎ ಲೆಜೆಂಡ್' ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದೂ ಸಮುದಾಯದ ಜನರು ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ಸಿಗಲಿ ಎಂದು ಹಾರೈಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಸ್ಥಳೀಯ ಯೂಟ್ಯೂಬರ್ ಒಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ, ಸ್ಥಳೀಯ ನಿವಾಸಿಗಳು ಚಿತ್ರದ ಪೋಸ್ಟರ್ ಹಿಡಿದು ಮೆರವಣಿಗೆ ನಡೆಸಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಆಸ್ಕರ್ನಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯಲಿ
ಕರಾಚಿಯ ಬೀದಿಗಳಲ್ಲಿ ಸಾಂಪ್ರದಾಯಿಕ ಡೋಲು ವಾದನ, ಸಂಗೀತ ಮತ್ತು ನೃತ್ಯದೊಂದಿಗೆ ಸಂಭ್ರಮಿಸಿದ ಸಮುದಾಯದ ಜನರು, ಚಿತ್ರದ ಪೋಸ್ಟರ್ ಹಿಡಿದು ಮೆರವಣಿಗೆ ನಡೆಸಿದರು. ಬಳಿಕ ಐತಿಹಾಸಿಕ ಕರಾಚಿಯ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ತೆರಳಿ ಪೋಸ್ಟರ್ ಪ್ರದರ್ಶಿಸಿದ ನಿವಾಸಿಗಳು, ʻರಾಮಾಯಣʼ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಸೃಷ್ಟಿಸಲಿ ಹಾಗೂ ಜಾಗತಿಕ ಮಟ್ಟದಲ್ಲಿ ಆಸ್ಕರ್ನಂತಹ ಪ್ರಶಸ್ತಿಗಳನ್ನು ಪಡೆಯಲಿ ಎಂದು ಪ್ರಾರ್ಥಿಸಿದರು.
"ಪಾಕಿಸ್ತಾನಿ ಹಿಂದೂಗಳಾದ ನಮಗೆ ರಾಮಾಯಣ ಕೇವಲ ಕಥೆಯಲ್ಲ, ನಮ್ಮ ಪರಂಪರೆ ಮತ್ತು ತಲೆಮಾರುಗಳ ಸಂಸ್ಕೃತಿಯ ಜೀವಂತ ಕೊಂಡಿ. ಈ ಚಿತ್ರವು ವಿಶ್ವಾದ್ಯಂತ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಸಾರಲಿ" ಎಂದು ಸ್ಥಳೀಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಎಫ್ಎಕ್ಸ್ ಭಾರಿ ಮೆಚ್ಚುಗೆ
ಮತ್ತೊಂದೆಡೆ, ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ನಡೆದ ಚಿತ್ರದ ವಿಶೇಷ ಪ್ರೀಮಿಯರ್ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾ ವಿಮರ್ಶ ವೇದಿಕೆಯಾದ 'ಲೆಟರ್ಬಾಕ್ಸ್ಡ್'ನಲ್ಲಿ ಹಲವು ವೀಕ್ಷಕರು ಚಿತ್ರಕ್ಕೆ ಪೂರ್ಣ 5 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಶ್ರೀರಾಮನಾಗಿ ರಣಬೀರ್ ಕಪೂರ್ ಅವರ ದೈವಿಕ ಅಭಿನಯ, ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಗಾಂಭೀರ್ಯ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಅವರ ಸಹಜ ನಟನೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಜೊತೆಗೆ ಚಿತ್ರದ ತಾಂತ್ರಿಕ ಗುಣಮಟ್ಟ, ಅದ್ಭುತ ವಿಎಫ್ಎಕ್ಸ್ ಹಾಗೂ ಭಾವನಾತ್ಮಕ ನಿರೂಪಣೆಯನ್ನು ಸಿನಿಪ್ರಿಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Yash: ನಟನೆಯ ಜೊತೆಗೆ ಕರ್ನಾಟಕದಲ್ಲಿ ‘ರಾಮಾಯಣ’ ಸಿನಿಮಾ ಹಂಚಿಕೆ ಮಾಡಲು ರೆಡಿ ಆದ ಯಶ್
ʻದಂಗಲ್ʼ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಮೆಗಾ ಪ್ರಾಜೆಕ್ಟ್ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗವು ನವೆಂಬರ್ 6ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಎರಡನೇ ಭಾಗವನ್ನು ಮುಂದಿನ ವರ್ಷದ ದೀಪಾವಳಿಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.