'ಕಾಶಿಬಾಯಿ ಬಾಜೀರಾವ್ ಬಲ್ಲಾಳ್' ಮತ್ತು 'ಪಾಂಡ್ಯ ಸ್ಟೋರ್' ನಂತಹ ಪ್ರಸಿದ್ಧ ಹಿಂದಿ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಜನಪ್ರಿಯ ಕಿರುತೆರೆ ನಟ ರೋಹಿತ್ ಚಂದೆಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಹಿಂಬಾಲಿಸಿದ ಗಂಭೀರ ಆರೋಪ ನಟನ ಮೇಲಿದ್ದು, ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿವಿಧ ನಂಬರ್‌ಗಳಿಂದ ಕರೆ ಮಾಡಿ ಕಿರುಕುಳ
ಮುಂಬೈನ ಪೂರ್ವ ಉಪನಗರದ ಅಪ್ರಾಪ್ತ ಬಾಲಕಿಯೊಬ್ಬರು ರೋಹಿತ್ ವಿರುದ್ಧ ದೂರು ದಾಖಲಿಸಿದ್ದಾರೆ. ರೋಹಿತ್ ಚಂದೆಲ್ ತನ್ನ ಮೊಬೈಲ್ ಫೋನ್‌ಗೆ ಪದೇಪದೇ ಕರೆ ಮಾಡುತ್ತಿದ್ದಲ್ಲದೆ, ವಿವಿಧ ಫೋನ್ ನಂಬರ್‌ಗಳ ಮೂಲಕ ಸಂಪರ್ಕಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಅಷ್ಟೇ ಅಲ್ಲದೆ, ಜುಲೈ 5ರಂದು ನಟ ರೋಹಿತ್ ತನ್ನ ಮನೆಯ ಬಳಿ ತನ್ನನ್ನು ಹಿಂಬಾಲಿಸಿಕೊಂಡು ಬಂದು, ನನ್ನನ್ನು ತಡೆದು, ಅಸಭ್ಯವಾಗಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಬಾಲಕಿ ಗಂಭೀರವಾಗಿ ಆರೋಪಿಸಿದ್ದಾಳೆ. ಬಂಧಿತ ಆರೋಪಿ ರೋಹಿತ್ ಹಾಗೂ ಸಂತ್ರಸ್ತ ಬಾಲಕಿಗೆ ಮುಂಚಿನಿಂದಲೇ ಪರಿಚಯವಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸ್ ವಶಕ್ಕೆ ರೋಹಿತ್ ಚಂದೆಲ್
ಬಾಲಕಿ ನೀಡಿದ ಕಂಪ್ಲೇಂಟ್ ಆಧರಿಸಿ ದಹಿಸರ್‌ನಲ್ಲಿದ್ದ ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ತದನಂತರ ಆರೋಪಿಯನ್ನು ವಿಶೇಷ ಪೋಕ್ಸೋ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ರೋಹಿತ್ ಚಂದೆಲ್‌ನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ. ಸದ್ಯ ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Fraud Case: ವಂಚನೆ ಪ್ರಕರಣ; ಬಿಗ್ ಬಾಸ್ ಖ್ಯಾತಿಯ ನಟ ಬಂಧನ
ಕ್ರಿಕೆಟರ್ ಆಗಿದ್ದ ರೋಹಿತ್
ರೋಹಿತ್ ಚಂದೆಲ್ ಅವರು ಕಿರುತೆರೆಯಲ್ಲಿ ಸಾಕಷ್ಟು ಫೇಮಸ್ ಆಗಿದ್ದು, 'ಕಾಶಿಬಾಯಿ ಬಾಜೀರಾವ್ ಬಲ್ಲಾಳ್' ನಲ್ಲಿ ಬಾಜೀರಾವ್ ಪಾತ್ರದ ಮೂಲಕ ಹಾಗೂ 'ಪಾಂಡ್ಯ ಸ್ಟೋರ್' ಧಾರಾವಾಹಿಯಲ್ಲಿ ಧವಳ್ ಮಕ್ವಾನಾ ಎಂಬ ಪ್ರಮುಖ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಮನರಂಜನಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಇವರು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಪರ ಕ್ರಿಕೆಟ್ ಆಡಿದ್ದರು ಮತ್ತು ಮಾರ್ಷಲ್ ಆರ್ಟ್ಸ್‌ನಲ್ಲೂ ಜಿಲ್ಲೆಯನ್ನು ಪ್ರತಿನಿಧಿಸಿದ್ದರು ಎಂಬ ಹಿನ್ನೆಲೆ ಇದೆ. ಸದ್ಯ ಇವರ ಬಂಧನದ ಸುದ್ದಿ ಕಿರುತೆರೆ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.